ADVERTISEMENT

ಅಸಮಾನತೆ ಇರುವವರೆಗೆ ಮೀಸಲಾತಿ ಅನಿವಾರ್ಯ

ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 4:40 IST
Last Updated 10 ಜನವರಿ 2026, 4:40 IST
ಹಾಸನದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಶಾಸಕ ಕೆ.ಎಂ. ಶಿವಲಿಂಗೇಗೌಡ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಉದ್ಘಾಟಿಸಿದರು
ಹಾಸನದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಶಾಸಕ ಕೆ.ಎಂ. ಶಿವಲಿಂಗೇಗೌಡ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಉದ್ಘಾಟಿಸಿದರು   

ಹಾಸನ: ಇಂದಿಗೂ ಮೀಸಲಾತಿ ವಿಚಾರದಲ್ಲಿ ಗೊಂದಲ ಮುಂದುವರಿದಿದ್ದು, ಜಾತಿ ಅಸಮಾನತೆ ಇರುವವರೆಗೆ ಮೀಸಲಾತಿ ಅನಿವಾರ್ಯ. ಅಸಮಾನತೆ ಸಂಪೂರ್ಣವಾಗಿ ತೊಲಗಿದ ದಿನವೇ ಮೀಸಲಾತಿ ಅಗತ್ಯವಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಹೇಳಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಬಣ) ರಾಜ್ಯ ಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ವಿಷಯ ಮಂಡನೆ ಮಾಡಿದರು.

ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿಗೆ ತಂದಿರುವುದು ಸ್ವಾಗತಾರ್ಹ. ಅಲೆಮಾರಿ ಸಮುದಾಯಗಳ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಅವರು, ಅವರಿಗೆ ಕೂಡ ಸಮಾನ ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

ADVERTISEMENT

ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ಮತ್ತು ಸಮಾನ ಅನುಷ್ಠಾನದ ಪ್ರಶ್ನೆ ದೊಡ್ಡ ಚರ್ಚೆಯ ವಿಷಯವಾಗಿದೆ. ಅನೇಕ ದೊಡ್ಡ ಖಾಸಗಿ ಕಂಪನಿಗಳಲ್ಲಿ ನಿರ್ದಿಷ್ಟ ಜಾತಿಯವರೇ ಹೆಚ್ಚಾಗಿ ನೇಮಕ ಆಗುತ್ತಿರುವುದು ಸಮಾನತೆಗೆ ವಿರುದ್ಧವಾಗಿದೆ ಎಂದರು.

ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಎಂ.ಶಿವಲಿಂಗೇಗೌಡ, ಅಂಬೇಡ್ಕರ್‌ ಅವರ ಸಂವಿಧಾನದ ಮೌಲ್ಯಗಳನ್ನು ಅರ್ಥಮಾಡಿಕೊಂಡರೆ ಭಾರತ ವಿಶ್ವಕ್ಕೆ ದಾರಿ ತೋರಿಸುತ್ತದೆ. ಆದರೆ ಸಂವಿಧಾನದ ಭಾವನಾತ್ಮಕ ಅರ್ಥ ಅಳವಡಿಸಿಕೊಳ್ಳುವಲ್ಲಿ ರಾಜಕಾರಣಿಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶತಮಾನಗಳಿಂದ ಸಮಾಜದಲ್ಲಿ ನಡೆಯುತ್ತಿರುವ ಶೋಷಣೆ, ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿಯೂ ಮುಂದುವರಿದಿರುವುದು ದುಃಖದ ಸಂಗತಿ. ಸಮಾಜ ಅಭಿವೃದ್ಧಿಯ ಶಿಖರ ತಲುಪುತ್ತಿದ್ದರೂ, ನಾವಿನ್ನೂ ಶೋಷಿತರಾಗಿದ್ದೇವೆ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡುತ್ತಿರುವುದು ಗಂಭೀರ ವಿಷಯ ಎಂದು ಹೇಳಿದರು.

ಇದು ಕೇವಲ ದಲಿತ ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಜಾತಿ ವ್ಯವಸ್ಥೆಯೊಳಗೆ ಇರುವ ಹಲವಾರು ವರ್ಗಗಳು ಒಂದಿಲ್ಲೊಂದು ರೀತಿಯಲ್ಲಿ ಅನ್ಯಾಯ ಮತ್ತು ಸಂಕಷ್ಟ ಅನುಭವಿಸುತ್ತಿವೆ. ಇಂತಹ ಅಸಮಾನತೆ ನಿವಾರಿಸಲು ಬಸವಣ್ಣನವರು ತಮ್ಮ ಕಾಲದಲ್ಲೇ ಸಾಮಾಜಿಕ ಕ್ರಾಂತಿಯ ಬೀಜ ಬಿತ್ತಿದರು ಎಂದರು.

ಶೋಷಿತ ಸಮುದಾಯಗಳಿಗೆ ನಿಜವಾದ ಸಮಾನತೆ ದೊರಕಿಸುವಲ್ಲಿ ತೇಪೆ ಹಾಕುವ ರಾಜಕಾರಣ ನಡೆಯುತ್ತಿದೆ. ಮಾನವ ಸಂಪತ್ತನ್ನು ಹೇಗೆ ಸದ್ಬಳಕೆ ಮಾಡಬೇಕು ಎಂಬುದರ ಬಗ್ಗೆ ಸರ್ಕಾರಗಳು ಗಂಭೀರವಾಗಿ ಯೋಚಿಸಬೇಕಾಗಿದೆ. ಶೋಷಿತ ವರ್ಗಗಳನ್ನು ಮೇಲೆತ್ತುವ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ ಸಮಾಜದ ಸಮಗ್ರ ಸುಧಾರಣೆ ಸಾಧ್ಯ ಎಂದು ಸಲಹೆ ನೀಡಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎನ್. ಸೋಮಶೇಖರ್, ಸಂಘಟನಾ ಸಂಚಾಲಕ ಅಂದಾನಿ ಸೋಮನಹಳ್ಳಿ, ದಾವಣಗೆರೆ ಹೆಗ್ಗೇರಿ ರಂಗಪ್ಪ, ಜಿಲ್ಲಾ ಸಂಚಾಲಕ ವಳ್ಳಲಹಳ್ಳಿ ವೀರೇಶ್, ಮಂಗಳೂರು ಸಂಚಾಲಕ ಎನ್. ದೇವದಾಸ್, ಮಾದಿಗ ದಂಡೋರಾ ರಾಜ್ಯ ಸಮಿತಿ ಟಿ.ಬಿ.ಆರ್. ವಿಜಯಕುಮಾರ್, ಹಿಂಡಾ ಮಾಜಿ ಅಧ್ಯಕ್ಷ ಎಚ್.ಆರ್. ಕೃಷ್ಣಕುಮಾರ್, ರಾಜ್ಯ ಸಂಚಾಲಕ ವಿ. ನಾರಾಯಣಸ್ವಾಮಿ, ರಾಜ್ಯ ಸಂಚಾಲಕಿ ಭಾಗ್ಯಮ್ಮ ನಾರಾಯಣಸ್ವಾಮಿ, ದಲಿತ ಮುಖಂಡರಾದ ಎಚ್‌.ಕೆ. ಸಂದೇಶ್, ಆನೆಕಲ್ ಕೃಷ್ಣಪ್ಪ, ಬಿ.ಸಿ. ರಾಜೇಶ್, ಕಬ್ಬಳ್ಳಿ ಮೈಲಪ್ಪ, ರಾಜಶೇಖರ್ ಹುಲಿಕಲ್, ಗೊರೂರು ರಾಜು ಮೊದಲಾದವರು ಇದ್ದರು. ಗಾಯಕ ಕುಮಾರ್, ಅಂಜಲಿ ಹೋರಾಟದ ಹಾಡು ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.