ADVERTISEMENT

ಹಿರಿಯ ನಾಗರಿಕರಿಗೆ ಗೌರವ ಕೊಡಿ

ಕಾರ್ಯಾಗಾರ ಉದ್ಘಾಟಿಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಹೇಮಾವತಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 2:49 IST
Last Updated 25 ನವೆಂಬರ್ 2025, 2:49 IST
ಹಾಸನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಹೇಮಾವತಿ ಉದ್ಘಾಟಿಸಿದರು
ಹಾಸನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಹೇಮಾವತಿ ಉದ್ಘಾಟಿಸಿದರು   

ಹಾಸನ: ‘ಹುಟ್ಟಿದ ಮನುಷ್ಯ ಯಾವಾಗ ಸಾಯುತ್ತಾನೆ ಎಂಬುದು ಗೊತ್ತಿರುವುದಿಲ್ಲ. ಆದರೆ ಬದುಕಿದ್ದ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಎಷ್ಟು ಬೆಲೆ, ಗೌರವ ಕೊಡುತ್ತೇವೆ ಎನ್ನುವುದು ಬಹುಮುಖ್ಯ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಹೇಮಾವತಿ ಹೇಳಿದರು.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಹಿರಿಯ ನಾಗರಿಕರ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಅಟಲ್ ಅಭ್ಯುದಯ ಯೋಜನೆ ಕುರಿತು ಅಧಿಕಾರಿಗಳಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತ್ವರಿತವಾಗಿ ತಲುಪಿಸಲು ಕ್ರಮ ಕೈಗೊಳ್ಳಬೇಕು. ಹೆತ್ತು, ಹೊತ್ತು, ಸಾಕಿ– ಸಲುಹಿ, ಜೀವನ ಕೊಟ್ಟು ಸಮಾಜಕ್ಕೆ ಉತ್ತಮ ಪ್ರಜೆಯನ್ನಾಗಿ ಮಾಡಿದ ತಂದೆ– ತಾಯಿಗಳನ್ನು ಮಕ್ಕಳು ವೃದ್ಧಾಪ್ಯದಲ್ಲಿ ಸರಿಯಾಗಿ ನೋಡಿಕೊಳ್ಳದೇ ವೃದ್ಧಾಶ್ರಮಗಳಿಗೆ ಕಳುಹಿಸುತ್ತಿದ್ದಾರೆ. ಇದು ಸರಿಯಲ್ಲ’ ಎಂದು ಬೇಸರಿಸಿದರು.

ADVERTISEMENT

‘ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಸಾರ್ವಜನಿಕರಿಗೆ ಸ್ಪಂದಿಸಿ, ಸಾಮಾಜಿಕ ಕಳಕಳಿಯಿಂದ ಕರ್ತವ್ಯ ನಿರ್ವಹಿಸಬೇಕು. ಹಿರಿಯ ನಾಗರಿಕರ ಹಕ್ಕುಗಳ ಸಂರಕ್ಷಣೆ ಕಾಯ್ದೆ–2007ರ ಬಗ್ಗೆ ಗಮನ ಹರಿಸಿ, ತುಳಿತಕ್ಕೆ ಒಳಗಾದವರಿಗೆ ಶೀಘ್ರವಾಗಿ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ ಮಾತನಾಡಿ, ‘ದೇಶದ ಸಾಮಾಜಿಕ ವ್ಯವಸ್ಥೆಯನ್ನು ಸದೃಢಗೊಳಿಸಲು ಹಿರಿಯ ನಾಗರಿಕರ ಹಕ್ಕುಗಳ ಸಂರಕ್ಷಣೆ ಕಾಯ್ದೆ ಜಾರಿಗೊಳಿಸಲಾಗಿದೆ. ಆದರೆ ಆ ಕಾಯ್ದೆ ಪ್ರಯೋಜನ ಎಷ್ಟು ಜನರು ಪಡೆಯುತ್ತಿದ್ದಾರೆ? ಈ ಕಾಯ್ದೆ ಬಗ್ಗೆ ಅಧಿಕಾರಿಗಳಿಗೆ ಎಷ್ಟು ಗೊತ್ತಿದೆ ಎನ್ನುವುದು ಒಂದು ಪ್ರಶ್ನೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು’ ಎಂದರು.

‘ಹಿರಿಯ ನಾಗರಿಕರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವ ತಾಳ್ಮೆ ಇರಬೇಕು. ನಿಮಗೆ ಅನೇಕ ದೂರುಗಳು ಬರುತ್ತವೆ. ಅವುಗಳಿಗೆ ಕಾನೂನಾತ್ಮಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಕಾಯ್ದೆ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ’ ಎಂದು ಸಲಹೆ ನೀಡಿದರು.

ಹಿರಿಯರ ಆರೋಗ್ಯ ಹಾಗೂ ಕಾನೂನಾತ್ಮಕ ಸಮಸ್ಯೆಗಳನ್ನು ಬಗೆಹರಿಸಲು ಈ ಕಾಯ್ದೆ ಹಿರಿಯರಿಗೆ ಸಂಜೀವಿನಿಯಾಗಿದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಜಿ.ಕೆ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಕೆ.ಆರ್.ಅನುಪಮಾ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಮಕ್ಕಳಿಂದ ಜೀವನಾಂಶ ಪಡೆಯಲು ಅವಕಾಶ

ಪ್ರತಿಯೊಬ್ಬರಿಗೂ ಸ್ವತಂತ್ರವಾಗಿ ಜೀವನ ನಡೆಸುವ ಅವಕಾಶವಿದೆ. ತಂದೆ– ತಾಯಿ ಜೀವನ ನಡೆಸಲು ವರಮಾನ ಇಲ್ಲದಿದ್ದ ಸಂದರ್ಭದಲ್ಲಿ ಮಕ್ಕಳಿಂದ ಜೀವಾನಾಂಶ ಪಡೆಯಲು ಅವಕಾಶವಿದೆ ಎಂದು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ರವಿಕುಮಾರ್ ಎಚ್.ಆರ್. ತಿಳಿಸಿದರು. ನಿರ್ವಹಣಾ ನ್ಯಾಯ ಮಂಡಳಿಯ ಪ್ರಕ್ರಿಯೆ ಅಧಿಕಾರಿಗಳು ವಿಳಂಬ ಮತ್ತು ಸವಾಲುಗಳು ತ್ವರಿತ ಮತ್ತು ನ್ಯಾಯಯುತ ಪರಿಹಾರಗಳ ಕುರಿತು ಉಪನ್ಯಾಸ ನೀಡಿದ ಅವರು ‘ತಂದೆ– ತಾಯಿ ವಾಸ ಮಾಡುತ್ತಿರುವ ವ್ಯಾಪ್ತಿಯ ಉಪ ವಿಭಾಗಾಧಿಕಾರಿಗೆ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಮಕ್ಕಳಿಗೆ ನೋಟಿಸ್ ನೀಡಿ 90 ದಿನಗಳಲ್ಲಿ ಪ್ರಕರಣ ಇತ್ಯರ್ಥ ಪಡಿಸಬೇಕು. ಆದಾಯದ ಮೂಲ ಅನುಸರಿಸಿ ಜೀವನಾಂಶಕ್ಕೆ ಆದೇಶ ನೀಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.