ಆಲೂರು: ಬೆಳಗೋಡು ರಸ್ತೆಯಿಂದ ಪಾಳ್ಯ ಹೋಬಳಿಯ ಮೇಗಟವಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಹಲವು ದಶಕಗಳಿಂದ ದುರಸ್ತಿ ಕಾಣದೇ ಅಲ್ಲಿನ ನಿವಾಸಿಗಳು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಕೃಷಿ ಪ್ರಧಾನವಾಗಿರುವ ಈ ಗ್ರಾಮ 1008 ನೇ ಇಸ್ವಿಯಿಂದಲೂ ದಾಖಲೆಯಲ್ಲಿದೆ. 45 ಕುಟುಂಬಗಳು ವಾಸಿಸುತ್ತಿವೆ. ಕೃಷಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಿತ್ಯ ಸಾವಿರಾರು ವಾಹನಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಓಡಾಡುತ್ತಾರೆ. ಆಳವಾದ ಗುಂಡಿಗಳು ಬಿದ್ದಿರುವುದರಿಂದ ಮಳೆಗಾಲದಲ್ಲಂತೂ ರಸ್ತೆಯಲ್ಲಿ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ.
ಕೆಲ ವರ್ಷಗಳ ಹಿಂದೆ ಗ್ರಾಮಸ್ಥರೆಲ್ಲ ಒಗ್ಗೂಡಿ ಅಲ್ಪಸ್ವಲ್ಪ ರಸ್ತೆ ದುರಸ್ತಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಅದನ್ನೂ ಮಾಡುತ್ತಿಲ್ಲ. ಸುಮಾರು 50 ವರ್ಷಗಳಿಂದ ಈ ಕ್ಷೇತ್ರದ ಜನಪ್ರತಿನಿಧಿಗಳು, ಉಸ್ತುವಾರಿ ಸಚಿವರಿಗೆ ಮನವಿ ಕೊಟ್ಟರು ಫಲಿತಾಂಶ ಶೂನ್ಯವಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ರಾಜ್ಯ ಸರ್ಕಾರದ ಎತ್ತಿನಹೊಳೆ ಯೋಜನೆಗೆ ಈ ಗ್ರಾಮದ 35 ಎಕರೆ ಜಮೀನನ್ನು ಗ್ರಾಮಸ್ಥರು ಕಳೆದುಕೊಂಡು ಸರ್ಕಾರಕ್ಕೆ ಸ್ಪಂದಿಸಿದ್ದಾರೆ. ಆ ಸಂದರ್ಭದಲ್ಲಿ ಎತ್ತಿನಹೊಳೆ ಯೋಜನೆಯ ಅನುದಾನ ಬಳಸಿಕೊಂಡು ಸ್ಥಳೀಯ ಮೂಲಸೌಕರ್ಯಗಳಿಗೆ ಒತ್ತು ನೀಡಿ ಸಿಮೆಂಟ್ ರಸ್ತೆ ಮಾಡಬಹುದಾಗಿತ್ತು. ಆದರೆ 5 ದಶಕಗಳಿಂದ ರಾಜಕಾರಣಿಗಳು ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಪ್ರಗತಿ ಆಗದಿರುವುದು ತೀವ್ರ ನಿರಾಸೆಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಮೇಗಟವಳ್ಳಿ ಗ್ರಾಮ ದಾಖಲೆಯಲ್ಲಿದ್ದರೂ ಮೂಲಸೌಕರ್ಯಗಳ ಕೊರತೆಯಿಂದ ನಲುಗುತ್ತಿದೆ. ಈಗಲಾದರೂ ಶಾಸಕರು ಅಧಿಕಾರಿಗಳು ಎಚ್ಚೆತ್ತು ರಸ್ತೆ ದುರಸ್ತಿ ಬಗ್ಗೆ ಗಮನಿಸಬೇಕು ಸಿಮೆಂಟ್ ರಸ್ತೆ ಮಾಡಿಸಬೇಕುಎಂ.ಪಿ. ಹರೀಶ್, ವಕೀಲ
Highlights - ಕಾಡು ಪ್ರದೇಶದ ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸಲು ಆಗ್ರಹ 5 ದಶಕಗಳಿಂದ ಈಡೇರದ ರಸ್ತೆ ದುರಸ್ತಿಯ ಬೇಡಿಕೆ: ಗ್ರಾಮಸ್ಥರ ಬೇಸರ
ಮೇಗಟವಳ್ಳಿ ಹೋತನಹಳ್ಳಿಪುರ ಯಡೂರು ಹೊಸೂರು ವಿರುಪಾಪುರ ಬಾಳಿಗನಹಳ್ಳಿ ಬಿಳಿಗರವಳ್ಳಿ ರಸ್ತೆ ದುರಸ್ತಿಗೆ ಹಣ ಬಿಡುಗಡೆಯಾಗಿದೆ. ಮಳೆ ಕಡಿಮೆಯಾದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದುಸಿಮೆಂಟ್ ಮಂಜು, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.