ಹಾಸನ: ತಾಲ್ಲೂಕಿನ ಮೊಸಳೆಹೊಸಹಳ್ಳಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದ ನಂತರ, ರಸ್ತೆ ಸುರಕ್ಷತೆಯ ಬಗ್ಗೆ ಚರ್ಚೆಗಳು ಶುರುವಾಗಿವೆ. ಈ ಮಧ್ಯೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳು ನಗರ, ಪಟ್ಟಣಗಳಲ್ಲಿ ಹಾದು ಹೋಗಿದ್ದು, ಇಲ್ಲಿಯೂ ಎಚ್ಚರಿಕೆ ವಹಿಸಬೇಕು ಎನ್ನುವ ಒತ್ತಾಯಗಳು ಕೇಳಿ ಬರುತ್ತಿವೆ.
ಹೆದ್ದಾರಿಯ ಪಕ್ಕದಲ್ಲಿಯೇ ವಾರದ ಸಂತೆ, ಕಾರ್ಯಕ್ರಮಗಳು ನಡೆಯುತ್ತಿದ್ದು, ಇಂತಹ ಸ್ಥಳಗಳಲ್ಲಿ ಹೆಚ್ಚಿನ ನಿಗಾ ವಹಿಸುವುದು ಅಗತ್ಯ. ವಾಹನಗಳ ವೇಗದ ಚಾಲನೆಯಿಂದ ದುರ್ಘಟನೆ ಸಂಭವಿಸುವ ಸಾಧ್ಯತೆಗಳಿವೆ ಎನ್ನುವ ಮಾತುಗಳನ್ನು ಜನರು ಹೇಳುತ್ತಿದ್ದಾರೆ.
ನಗರದಲ್ಲಿಯೇ ಹಾದು ಹೋಗಿರುವ ಸಾಲಗಾಮೆ ರಸ್ತೆ ಪಕ್ಕದಲ್ಲಿಯೇ ಮಂಗಳವಾರ ವಾರದ ಸಂತೆ ನಡೆಯುತ್ತದೆ. ಜನನಿಬಿಡ ರಸ್ತೆ ಇದಾಗಿದ್ದು, ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆ ಪಕ್ಕದಲ್ಲಿಯೇ ವಾರದ ಸಂತೆ ವ್ಯಾಪಾರಿಗಳು ಅಂಗಡಿ ಹಾಕುತ್ತಿದ್ದು, ಗ್ರಾಹಕರೂ ರಸ್ತೆ ಪಕ್ಕದಲ್ಲಿಯೇ ನಿಂತು ತರಕಾರಿ ಖರೀದಿ ಮಾಡುತ್ತಿದ್ದಾರೆ.
ಇದೇ ರಸ್ತೆಯಲ್ಲಿ ಅನೇಕ ಶಾಲೆ–ಕಾಲೇಜುಗಳಿದ್ದು, ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದೆ. ಅಲ್ಲದೇ ರಸ್ತೆಯ ಅಕ್ಕಪಕ್ಕದಲ್ಲಿಯೇ ವಾಹನ ನಿಲುಗಡೆ ಮಾಡಲಾಗುತ್ತಿದ್ದು, ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದಷ್ಟು ದಟ್ಟಣೆ ಉಂಟಾಗುತ್ತದೆ.
ಸಂತೆಯನ್ನು ಸ್ಥಳಾಂತರಿಸುವಂತೆ ಹಲವು ಬಾರಿ ಒತ್ತಾಯಗಳು ಕೇಳಿ ಬರುತ್ತಿವೆ. ಈಗಾಗಲೇ ಜಿಲ್ಲಾಧಿಕಾರಿಯೂ ಸ್ಥಳಾಂತರಕ್ಕೆ ಸೂಚನೆ ನೀಡಿದ್ದಾರೆ. ವ್ಯಾಪಾರಿಗಳು ಇದೇ ರಸ್ತೆಯಲ್ಲಿ ಮಳಿಗೆ ನಿರ್ಮಿಸಿಕೊಡುವಂತೆ ಒತ್ತಾಯಿಸುತ್ತಿದ್ದು, ಸ್ಥಳಾಂತರಕ್ಕೆ ಮೀನಮೇಷ ಎಣಿಸಲಾಗುತ್ತಿದೆ.
ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿ –75 ರ ಪಕ್ಕದಲ್ಲಿಯೇ ಇರುವ ಬಾಳ್ಳುಪೇಟೆಯಲ್ಲಿಯೂ ರಸ್ತೆಗೆ ಹೊಂದಿಕೊಂಡಂತೆ ಸಂತೆಯ ವ್ಯಾಪಾರ, ವಹಿವಾಟು ನಡೆಯುತ್ತದೆ.
ಈ ಮಧ್ಯೆ ಸಭೆ ನಡೆಸಿರುವ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ‘ರಸ್ತೆ ಒತ್ತುವರಿ ತೆರವುಗೊಳಿಸುವುದು, ಮುಖ್ಯ ರಸ್ತೆಗಳಲ್ಲಿ ಪಾದಚಾರಿಗಳ ಸಂಚಾರಕ್ಕೆ ಮೀಸಲಿರುವ ಸ್ಥಳದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡದಂತೆ ತೆರವುಗೊಳಿಸುವ ನಿಟ್ಟಿನಲ್ಲಿ ಡಂಗೂರ ಸಾರಬೇಕು. ನೋಟಿಸ್ ನೀಡಿ, ಪತ್ರಿಕಾ ಪ್ರಕಟಣೆ ನೀಡಿ ನಂತರ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ’ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಹೆದ್ದಾರಿಗಳನ್ನು ಪರಿಶೀಲಿಸಿ ಅಪಘಾತ ತಡೆಯಲು ಅಗತ್ಯ ಕ್ರಮಗಳ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಕೆ.ಎಸ್.ಲತಾಕುಮಾರಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.