ADVERTISEMENT

ಆರ್‌ಎಸ್‌ಎಸ್‌ ನಿಷೇಧಿಸಲಾಗದು: ಎಚ್‌.ಡಿ. ಕುಮಾರಸ್ವಾಮಿ

ಜನರ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್‌ ಸರ್ಕಾರ: ಕುಮಾರಸ್ವಾಮಿ ಟೀಕೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 0:14 IST
Last Updated 18 ಅಕ್ಟೋಬರ್ 2025, 0:14 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಹಾಸನ: ‘ಆರ್‌ಎಸ್‌ಎಸ್‌ ನಿಷೇಧಿಸಲಾಗದು. ಸಂಘ– ಸಂಸ್ಥೆಗಳು ಸರ್ಕಾರಿ ಜಾಗದಲ್ಲಿ ಸಭೆ, ಸಮಾರಂಭ ಪರೇಡ್‌ಗಳನ್ನು ಮಾಡಬಾರದೆಂದು ಸರ್ಕಾರ ಹೇಳಿದೆ. ರಾಜಕೀಯ ಬಂಡವಾಳಕ್ಕಾಗಿ ಇಂಥ ವಿಷಯಗಳನ್ನು ಎಳೆದು ತರಲಾಗುತ್ತಿದೆ. ಸರ್ಕಾರಕ್ಕೆ ಅಭಿವೃದ್ಧಿ ಬೇಕಾಗಿಲ್ಲ’ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಗಾಂಧೀಜಿಯವರ ಹತ್ಯೆಯಾದಾಗ ನೆಹರು ಆರ್‌ಎಸ್‌ಎಸ್‌ ನಿಷೇಧಿಸಿದ್ದರು. ಬಳಿಕ ಆದೇಶವನ್ನು ವಾಪಸ್ ಪಡೆದರು. ಅವರಿಗಿಂತ ಖರ್ಗೆ, ಸಿದ್ದರಾಮಯ್ಯ ದೊಡ್ಡವರೇ? ಸಮಾಜದಲ್ಲಿ ಸರ್ಕಾರ ಸಂಘರ್ಷ ಸೃಷ್ಟಿಸುತ್ತಿದೆ’ ಎಂದು ದೂರಿದರು.

‘ಧರ್ಮಸ್ಥಳದ ವಿಷಯದಲ್ಲೂ ಇಂಥದ್ದೇ ನಡೆಯನ್ನು ಸರ್ಕಾರ ಅನುಸರಿಸಿದೆ. ಅರ್ಜಿ ಕೊಟ್ಟವರನ್ನು ಬಿಟ್ಟು, ಚಿನ್ನಯ್ಯ ಎಂಬುವನನ್ನು ಸೃಷ್ಟಿಸಿ ನಾಟಕ ನಡೆಸಿದರು. ಎಸ್ಐಟಿ ರಚಿಸಿ ಆತನನ್ನು ಹಿಡಿದಿಟ್ಟುಕೊಂಡು ಉಳಿದವರನ್ನು ಬಿಟ್ಟಿದ್ದಾರೆ. ಅವರೆಲ್ಲ ರಾಜಾರೋಷವಾಗಿ ಓಡಾಡುತ್ತಿದ್ದು, ಈ ನಡುವೆ ಎಸ್ಐಟಿಗೆ ಬಹುಮಾನ ನೀಡಲು ಹೊರಟಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ADVERTISEMENT

‘ಇವರೇ ದೊಡ್ಡ ದರೋಡೆಕೋರರು. ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್‌ಗೆ 136 ಸ್ಥಾನ ಬರಲಿವೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದರು. ಹಾಗಾದರೆ, ಮತಗಳವು ಮಾಡಿಯೇ ಅಷ್ಟು ಸ್ಥಾನ ಗೆದ್ದರೆ’ ಎಂದು ಪ್ರಶ್ನಿಸಿದರು.

‘ಅಳಂದ ಕ್ಷೇತ್ರದಲ್ಲಿ ಮತಗಳ್ಳತನವಾಗಿದೆ ಎಂದು ಆರೋಪಿಸುತ್ತಾರೆ. ಆದರೆ, ಅಲ್ಲಿ ಗೆದ್ದಿರುವುದು ಕಾಂಗ್ರೆಸ್‌. ಮತಗಳ್ಳತನ ನಡೆದಿದ್ದರೆ ಬಿಜೆಪಿ ಗೆಲ್ಲಬೇಕಿತ್ತಲ್ಲವೇ. ಜನರ ಕಷ್ಟಕ್ಕೆ ಸ್ಪಂದಿಸುವುದು ಈ ಸರ್ಕಾರಕ್ಕೆ ಬೇಕಿಲ್ಲ. ಇಂತಹ ಹೇಳಿಕೆಗಳ ಮೂಲಕ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ’ ಎಂದು ಟೀಕಿಸಿದರು.

‘ದೀಪಾವಳಿ ಮುಗಿದ ನಂತರ ಪಕ್ಷದ ಹಾಲಿ ಹಾಗೂ ಮಾಜಿ ಶಾಸಕರನ್ನು ಒಳಗೊಂಡಂತೆ ರಾಜ್ಯದಾದ್ಯಂತ ‘ಜನರೊಂದಿಗೆ ಜನತಾದಳ’ ಘೋಷಣೆಯೊಂದಿಗೆ ಪ್ರವಾಸ ಹಮ್ಮಿಕೊಳ್ಳಲಾಗುವುದು’ ಎಂದು ಕುಮಾರಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.