
ಹಾಸನ: ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಮಾಹಿತಿ ಕೋರಿ ಬರುವ ಅರ್ಜಿಗಳಿಗೆ ನಿಗದಿತ ಅವಧಿಯೊಳಗೆ ಮಾಹಿತಿ ನೀಡುವಂತೆ ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟಿ, ಅಧಿಕಾರಿಗಳಿಗೆ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಶನಿವಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಆಯೋಜಿಸಿದ್ದ ಮಾಹಿತಿ ಹಕ್ಕು ಅಧಿನಿಯಮದ ಜಾಗೃತಿ, ಸಂವಾದ, ಸಾರ್ವಜನಿಕರೊಂದಿಗೆ ಕಾಯ್ದೆಯ ಸದ್ಬಳಕೆ ಕುರಿತು ಚರ್ಚಿಸುವ ಸಂಬಂಧ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದು ಅಕ್ಟೋಬರ್ 12ಕ್ಕೆ 20 ವರ್ಷಗಳು ಪೂರ್ಣಗೊಂಡಿವೆ. ಅನೇಕ ಬದಲಾವಣೆ ಆಗಿವೆ. ಸಾರ್ವಜನಿಕರು ಹಾಗೂ ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಆಡಳಿತದಲ್ಲಿ ಪಾರದರ್ಶಕತೆ ತರಲು ಹಾಗೂ ಸಾರ್ವಜನಿಕರಿಗೆ ಮಾಹಿತಿ ಕಲ್ಪಿಸುವುದರ ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ಆಯೋಗ ಮತ್ತು ನ್ಯಾಯಾಲಯದಲ್ಲಿ ತೀರ್ಪು ಪ್ರಕಟವಾಗಿರುವುದನ್ನು ಪುನರ್ ಮನನ ಮಾಡುವ ದೃಷ್ಟಿಯಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ತರಬೇತಿ ಕಾರ್ಯಾಗಾರಗಳ ಮೂಲಕ ಅಧಿಕಾರಿಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಈಗಾಗಲೇ 15 ಜಿಲ್ಲೆಗಳಲ್ಲಿ ತರಬೇತಿ ನಡೆಸಲಾಗಿದೆ ಎಂದರು.
ಅರ್ಜಿದಾರರಿಗೆ ಮಾಹಿತಿ ನೀಡಲು ಎಷ್ಟು ಪುಟಗಳಿವೆ? ಎಷ್ಟು ಹಣ ಪಾವತಿ ಮಾಡಬೇಕು ಎಂದು ನಿಗದಿತ ಅವಧಿಯಲ್ಲಿ ತಿಳಿಸಿ. ಮಾಹಿತಿ ಲಭ್ಯವಿಲ್ಲದಿದ್ದಲ್ಲಿ ಸೂಕ್ತ ಹಿಂಬರಹ ನೀಡುವಂತೆ ತಿಳಿಸಿದರು.
ಕಚೇರಿಗೆ ಬರುವ ನಾಗರಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಮಾಹಿತಿ ಹಕ್ಕು ಅಧಿನಿಯಮ ಅನುಷ್ಠಾನ ಮಾಡುವ ಜವಾಬ್ದಾರಿ ಎಲ್ಲರದ್ದಾಗಿದೆ. ಇದರಿಂದ ಅರ್ಜಿದಾರರಿಗೆ ಅನುಕೂಲವಾಗುತ್ತದೆ ಎಂದರು.
ಅರ್ಜಿದಾರರು ಬಿಪಿಎಲ್ ಪಡಿತರ ಚೀಟಿದಾರರಾಗಿದ್ದರೆ, ಉಚಿತ ಮಾಹಿತಿ ಪಡೆಯಲು ಕಡ್ಡಾಯವಾಗಿ ಬಿಪಿಎಲ್. ಕಾರ್ಡ್ ಮತ್ತು ಆದಾಯ ಪ್ರಮಾಣಪತ್ರ ಲಗತ್ತಿಸಬೇಕು. ಆಗ ನೂರು ಪುಟಗಳು ಉಚಿತ ಮಾಹಿತಿ ನೀಡಬಹುದು. ಎರಡು ದಾಖಲೆ ಲಗತ್ತಿಸಿದ್ದಾರೆಯೇ ಎಂದು ಪರಿಶೀಲನೆ ಮಾಡಬೇಕು ಎಂದು ತಿಳಿಸಿದರು.
ಪ್ರಥಮ ಮೇಲ್ಮನವಿ ಪ್ರಾಧಿಕಾರದಲ್ಲಿ ವಿಚಾರಣೆ ನಡೆಸಿ, ಅರ್ಜಿಗಳ ಶೀಘ್ರ ವಿಲೇವಾರಿಗೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ ನಡೆಯುವ ಕೆಡಿಪಿ ಮತ್ತು ತ್ರೈಮಾಸಿಕ ಸಭೆಗಳಲ್ಲಿ ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೋರಿ ಸಲ್ಲಿಕೆಯಾದ ಅರ್ಜಿ ವಿಲೇವಾರಿ ಕುರಿತು ಪರಿಶೀಲನೆ ಮಾಡುವಂತೆ ತಿಳಿಸಿದರು.
ಪ್ರಾರಂಭದಲ್ಲಿ ಮೌನ ಆಚರಿಸುವ ಮೂಲಕ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಆತ್ಮಕ್ಕೆ ಶಾಂತಿ ಕೋರಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ನಾವು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ 55498 ಅರ್ಜಿಗಳು ಬಾಕಿ ಇದ್ದವು. ನಿಯಮಿತ ವಿಚಾರಣೆ ನಡೆಸುವ ಮೂಲಕ 35344ಕ್ಕೆ ಇಳಿಸಲಾಗಿದೆ. ಎಲ್ಲ ಜಿಲ್ಲೆಗಳಿಗೂ ಹೋಗಿ ಬೇಗ ಅರ್ಜಿ ವಿಲೇವಾರಿ ಮಾಡಲು ಚರ್ಚೆ ನಡೆಯುತ್ತಿದೆರುದ್ರಣ್ಣ ಹರ್ತಿಕೋಟಿ ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತ
ಅರ್ಜಿ ವಿಲೇವಾರಿ: ಹಾಸನಕ್ಕೆ 4 ನೇ ಸ್ಥಾನ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿಗಳ ವಿಲೇವಾರಿಯನ್ನು ಹಾಸನ ಜಿಲ್ಲೆಯಲ್ಲಿ ತ್ವರಿತಗತಿಯಲ್ಲಿ ಮಾಡಲಾಗುತ್ತಿದ್ದು ರಾಜ್ಯದಲ್ಲೇ ನಾಲ್ಕನೇ ಸ್ಥಾನ ಪಡೆದಿದೆ ಎಂದು ರಾಜ್ಯ ಮಾಹಿತಿ ಹಕ್ಕು ಆಯುಕ್ತ ರುದ್ರಣ್ಣ ಹರ್ತಿಕೋಟಿ ತಿಳಿಸಿದರು. ಜಿಲ್ಲೆಯಲ್ಲಿ 2025ರ ಜನವರಿ 1ರಿಂದ ಅ.10ರವರೆಗೆ 7335 ಅರ್ಜಿಗಳು ಸಲ್ಲಿಕೆಯಾಗಿದ್ದು 7191 ಅರ್ಜಿಗಳು ವಿಲೇವಾರಿ ಆಗಿವೆ. 144 ಬಾಕಿಯಿವೆ. 1059 ಅರ್ಜಿಗಳು ಪ್ರಥಮ ಮೇಲ್ಮನವಿಗೆ ಹೋಗಿವೆ. ಅದರಲ್ಲಿ 984 ವಿಲೆವಾರಿ ಆಗಿದ್ದು 75 ಬಾಕಿ ಇವೆ. ದ್ವಿತೀಯ ಮೇಲ್ಮನವಿಗೆ ಹಾಸನ ಜಿಲ್ಲೆಯ 307 ಪ್ರಕರಣ ಆಯೋಗದಲ್ಲಿವೆ ಎಂದ ಅವರು ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ತೃಪ್ತಿದಾಯಕವಾಗಿದೆ ಎಂದು ತಿಳಿಸಿದರು. ನಿಗದಿತ ಸಮಯದಲ್ಲಿ ಮಾಹಿತಿ ನೀಡದೇ ಇದ್ದಲ್ಲಿ ದಂಡ ವಿಧಿಸಲು ಹಾಗೂ ಇಲಾಖಾ ತನಿಖೆಗೆ ಆದೇಶಿಸಲು ಅವಕಾಶವಿದೆ. ಇದುವರೆಗೆ ಆಯೋಗದಿಂದ 10719 ಪ್ರಕರಣಗಳಿಗೆ ₹ 10.13 ಕೋಟಿ ದಂಡ ವಿಧಿಸಲಾಗಿದೆ. 3084 ನೌಕರರು ₹ 2.70 ಕೋಟಿ ದಂಡ ಪಾವತಿಸಿದ್ದಾರೆ. ಇದರಲ್ಲಿ ಜಿಲ್ಲೆಯ 217 ಅಧಿಕಾರಿಗಳಿಗೆ ₹ 18.09 ಲಕ್ಷ ದಂಡ ವಿಧಿಸಲಾಗಿದೆ. 45 ಪ್ರಕರಣಗಳಲ್ಲಿ ₹4.44 ಲಕ್ಷ ದಂಡ ಪಾವತಿಯಾಗಿದೆ ಎಂದು ತಿಳಿಸಿದರು.
ಮಾಹಿತಿ ನಿರಾಕರಿಸುವಂತಿಲ್ಲ
ಮಾಹಿತಿ ಪಡೆಯುವುದು ಮೂಲಭೂತ ಹಕ್ಕು. ಯಾರೂ ಮಾಹಿತಿ ನೀಡಲು ನಿರಾಕರಿಸುವಂತಿಲ್ಲ. ನಿಗದಿತ ಅವಧಿಯಲ್ಲಿ ಮಾಹಿತಿ ನೀಡಿದರೆ ಅರ್ಜಿದಾರರಿಗೆ ಉಪಯೋಗವಾಗುತ್ತದೆ ಎಂದು ಮತ್ತೊಬ್ಬ ಆಯುಕ್ತ ರಾಜಶೇಖರ್ ಎಸ್. ತಿಳಿಸಿದರು. ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಅತಿ ಹೆಚ್ಚು 28 ಸಾವಿರ ಪ್ರಕರಣಗಳು ಬಾಕಿ ಇದ್ದು ಉಳಿದ ಜಿಲ್ಲೆಗಳಲ್ಲಿ 33 ಸಾವಿರ ಪ್ರಕರಣ ಬಾಕಿ ಇವೆ. ಅಧಿಕಾರಿಗಳು ಕ್ರಮ ಕೈಗೊಂಡರೆ ಮಾತ್ರ ದುರುಪಯೋಗ ತಡೆಯಲು ಸಾಧ್ಯ. ಬ್ಲಾಕ್ ಮೇಲರ್‌ಗಳ ಸೃಷ್ಟಿಗೆ ಅಧಿಕಾರಿಗಳು ಅವಕಾಶ ನೀಡದಂತೆ ನಿಗದಿತ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಿದರೆ ಸಮಸ್ಯೆ ಉದ್ಭವಿಸುವುದಿಲ್ಲ. ಸುಖಾಸುಮ್ಮನೆ ಅರ್ಜಿ ಸಲ್ಲಿಸಿ ಅಧಿಕಾರಿಗಳಿಗೆ ತೊಂದರೆ ನೀಡುತ್ತಿದ್ದ 26 ಜನರನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.