ADVERTISEMENT

ಗ್ರಾಮೀಣ ಪ್ರಯಾಣಿಕರ ಪರದಾಟ ನಿರಂತರ

ಗ್ರಾಮೀಣ ಪ್ರದೇಶಕ್ಕೆ ಇನ್ನೂ ಓಡುತ್ತಿಲ್ಲ ಬಸ್‌ಗಳು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 3:14 IST
Last Updated 24 ನವೆಂಬರ್ 2020, 3:14 IST
ಬೇಲೂರು ಬಸ್ ನಿಲ್ದಾಣದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸಲು ಹೊರಡಲು ಸಿದ್ಧವಾದ ಬಸ್‌ಗಳು
ಬೇಲೂರು ಬಸ್ ನಿಲ್ದಾಣದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸಲು ಹೊರಡಲು ಸಿದ್ಧವಾದ ಬಸ್‌ಗಳು   

ಬೇಲೂರು: ಕೊರೊನಾ ನಿಯಂತ್ರಣಕ್ಕೆ ಬಂದಿದ್ದರೂ ಗ್ರಾಮೀಣ ಪ್ರದೇಶಕ್ಕೆ ಬಸ್‌ಗಳು ಇನ್ನೂ ಸಂಪೂರ್ಣವಾಗಿ ಓಡಿಸುತ್ತಿಲ್ಲವಾದ್ದರಿಂದ ಗ್ರಾಮೀಣ ಪ್ರದೇಶದ ಜನರು, ತಾಲ್ಲೂಕು ಕೇಂದ್ರ ಹಾಗೂ ಪರ ಊರಿಗೆ ಹೋಗಲು ಪರದಾಡುವುದು ತಪ್ಪಿಲ್ಲ.

ಸರ್ಕಾರ ಲಾಕ್‌ಡೌನ್ ಸಂಪೂರ್ಣ ತೆರವುಗೊಳಿಸಿದ ನಂತರ ಹೆದ್ದಾರಿಗಳಲ್ಲಿ ಸಾರಿಗೆ ಸಂಚಾರ ಆರಂಭಿಸಿದ್ದು ಅಂತರರಾಜ್ಯಕ್ಕೂ ಸಹ ಬಸ್‌ಗಳು ಸಂಚರಿಸುತ್ತಿವೆ. ಆದರೆ ಗ್ರಾಮೀಣ ಭಾಗಗಳಿಗೆ ಬಸ್‌ಗಳ ಓಡಿಸಲು ಸಾರಿಗೆ ಇಲಾಖೆ ಇನ್ನೂ ಮೀನ– ಮೇಷ ಎಣಿಸುತ್ತಿದೆ. ಬಸ್ ಸಂಚಾರ ಆರಂಭಿಸಿ ಹಳ್ಳಿ ಜನರ ಸಂಕಷ್ಟ ಪರಿಹರಿಸಿ ಎಂದು ಹಲವರ ಕೋರಿಕೆಯಾಗಿದೆ.

ಕೊರೊನಾ ಭಯದಿಂದ ಮನೆಯಲ್ಲಿ ದ್ದವರು ಈಗ ಪಟ್ಟಣದ ಕಡೆ ವ್ಯವಹರಿಸಲು ಆರಂಭಿಸಿದ್ದಾರೆ. ಆದರೆ, ಅವರಿಗೆ ಬಸ್ ಸಮಸ್ಯೆ ಕಾಡತೊಡಗಿದೆ.

ADVERTISEMENT

ಸ್ವಂತ ಬೈಕ್, ಕಾರು ಹೊಂದಿರು ವವರಿಗೆ ಸಮಸ್ಯೆಯಾಗಿಲ್ಲದಿದ್ದರೂ ಉಳಿದಂತೆ ಬಸ್‌ಗಳನ್ನೇ ಅವಲಂಬಿಸಿ ತಮ್ಮ ವಿವಿಧ ಕೆಲಸಗಳಿಗೆ ಪಟ್ಟಣಕ್ಕೆ ಬರುತ್ತಿದ್ದವರಿಗೆ ಹಾಗೂ ಬೇರೆ ಊರುಗಳಿಗೆ ತೆರಳ ಬೇಕಿದ್ದವರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ರೋಗಿಗಳೂ, ವೃದ್ಧರೂ, ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಬಾಡಿಗೆ ವಾಹನವನ್ನು ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೇಲೂರು ಬಸ್ ನಿಲ್ದಾಣದಿಂದ ಗ್ರಾಮಾಂತರ ಪ್ರದೇಶಗಳಿಗೆ ಒಟ್ಟು 11 ರೂಟ್‌ಗಳಲ್ಲಿ 54 ಟ್ರಿಪ್‌ಗಳನ್ನು ಮಾಡಲಾಗುತ್ತಿತ್ತು. ಆದರೆ, ಈಗ ಲಾಕ್‌ಡೌನ್ ತೆರವಿನ ನಂತರ ಕಳೆದ ಐದಾರು ದಿನಗಳಿಂದ ಮಾಳೇಗೆರೆ, ಪಡವಳಲು, ಬೈಲಳ್ಳಿ ಹಾಸನ ಮಾರ್ಗ ಮತ್ತು ಬೇಲೂರು ಹನಿಕೆಗೆ ಕೇವಲ 2 ಟ್ರಿಪ್ ಬಸ್ ಬಿಡಲಾಗುತ್ತಿದೆ. ಯಮಸಂಧಿ ಕೂಡ್ಲೂರು ಮಾರ್ಗಕ್ಕೆ ಬಸ್ ಬಿಡುವಂತೆ ಪ್ರಯಾಣಿಕರು ಕೋರಿದ್ದಾರೆ.

ನಮ್ಮ ಭಾಗದಲ್ಲಿ ಬಸ್ ಸಂಚಾರ ನಿಲ್ಲಿಸಿದ್ದು ಇನ್ನೂ ಆರಂಭಿಸಿಲ್ಲ. ಪಟ್ಟಣದ ಕಡೆ ಹಾಗೂ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಸ್‌ಗಳು ಎಂದಿನಂತೆ ಚಲಿಸುತ್ತಿವೆ. ಆದ್ದರಿಂದ ಸರ್ಕಾರ ಗ್ರಾಮೀಣ ಪ್ರದೇಶಗಳಿಗೂ ಬಸ್ ಸಂಚಾರ ಆರಂಭಿಸಿ ಗ್ರಾಮೀಣ ಪ್ರದೇಶದ ಜನರ ಸಂಕಷ್ಟ ಪರಿಹರಿಸಬೇಕು ಎಂದು ಯಮಸಂಧಿ ಗ್ರಾಮದ ಸ್ವಾಮಿ ಮನವಿ ಮಾಡಿದ್ದಾರೆ.

‘ಗ್ರಾಮೀಣ ಪ್ರದೇಶಕ್ಕೆ ಬಸ್ ಬಿಡಲು ನಮಗೆ ಸರ್ಕಾರದಿಂದ ಆದೇಶ ಬಂದಿಲ್ಲ. ಈಗ ಬಿಟ್ಟಿರುವ ಎರಡು ರೂಟ್‌ಗಳಿಂದ ಡಿಸೇಲ್ ಹಣವು ಸಿಗದಷ್ಟು ನಷ್ಟ ಆಗುತ್ತಿದೆ. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಸ್ ಬಿಟ್ಟಿದ್ದೇವೆ. ಆದರೆ ಆ ರೂಟ್‌ಗಳಿಂದಲೂ ಲಾಕ್‌ಡೌನ್‌ಗಿಂತ ಹಿಂದಕ್ಕೆ ಹೋಲಿಸಿದರೆ ಶೇ 55ರಷ್ಟು ಕಲೆಕ್ಷನ್ ಆಗುತ್ತಿದೆ. ಡಿಸೆಂಬರ್ ಹತ್ತರಿಂದ ಕಾಲೇಜುಗಳಿಗೆ ಪಾಸ್ ನೀಡಲು ಆದೇಶ ಬಂದಿರುವುದರಿಂದ ಆ ನಂತರ ಗ್ರಾಮೀಣ ಪ್ರದೇಶಗಳಿಗೂ ಬಸ್ ಬಿಡಲು ಸರ್ಕಾರದಿಂದ ಆದೇಶ ಬರುವ ಸಾಧ್ಯತೆಗಳಿವೆ’ ಎಂದು ಕೆಎಸ್‌ ಆರ್‌ಟಿಸಿ ಬೇಲೂರು ಸಾರಿಗೆ ಘಟಕದ ವ್ಯವಸ್ಥಾಪಕ ಭೈರೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.