ADVERTISEMENT

ಸಚಿವ ಸ್ಥಾನ ಸಿಗುವ ಸಾಧ್ಯತೆ: ಸಕಲೇಶಪುರ ಶಾಸಕ ಎಚ್‌.ಕೆ.ಕುಮಾರಸ್ವಾಮಿ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 12:11 IST
Last Updated 7 ಜನವರಿ 2019, 12:11 IST
 ಎಚ್‌.ಕೆ.ಕುಮಾರಸ್ವಾಮಿ
 ಎಚ್‌.ಕೆ.ಕುಮಾರಸ್ವಾಮಿ   

ಹಾಸನ: ‘ಮೈತ್ರಿ ಸರ್ಕಾರದಲ್ಲಿ ಬಾಕಿ ಉಳಿದಿರುವ ಜೆಡಿಎಸ್ ಕಡೆಯ ಎರಡು ಸ್ಥಾನಗಳ ಪೈಕಿ ದಲಿತ ಕೋಟಾದಡಿ ನನಗೆ ಸಚಿವ ಸ್ಥಾನ ಸಿಗಲಿದೆ’ ಎಂಬ ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಕಡೆಯಿಂದ ಎಲ್ಲಾ ಸ್ಥಾನ ಭರ್ತಿಯಾಗಿವೆ. ಜೆಡಿಎಸ್ ಕಡೆಯ 2 ಸ್ಥಾನಗಳು ಜ. 15 ರ ಒಳಗೆ ಭರ್ತಿಯಾಗುವ ವಿಶ್ವಾಸವಿದೆ’ ಎಂದರು.

‘ಲೋಕಸಭೆ ಚುನಾವಣೆ ಬರುತ್ತಿರುವುದರಿಂದ ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಗಮನದಲ್ಲಿಟ್ಟುಕೊಂಡು ಅವಕಾಶ ನೀಡುವ ವಿಶ್ವಾಸವಿದೆ. ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಅಂತಿಮ ತೀರ್ಮಾನ ಮಾಡಲಿದ್ದಾರೆ’ ಎಂದು ಹೇಳಿದರು.

ADVERTISEMENT

‘ಹಿಂದೆ ಪಕ್ಷದ ಕೋಟಾದಡಿ ಬಿಎಸ್‌ಪಿ ಶಾಸಕರೊಬ್ಬರು ಮಂತ್ರಿಯಾಗಿದ್ದರು. ಆದರೀಗ ಅವರು ರಾಜೀನಾಮೆ ನೀಡಿದ್ದು, ಆ ಸ್ಥಾನ ಖಾಲಿ ಇದೆ. ದಲಿತರೊಬ್ಬರಿಗೆ ಸಚಿವ ಸ್ಥಾನ ಕೊಡಬೇಕು ಎಂಬುದು ಪಕ್ಷದ ಸಿದ್ಧಾಂತ ಮತ್ತು ನೀತಿಯಾಗಿದೆ. ಒಟ್ಟು 6 ಬಾರಿ ಶಾಸಕನಾಗಿದ್ದೇನೆ. ಪಕ್ಷಕ್ಕೆ ಅತ್ಯಂತ ನಿಷ್ಠನಾಗಿದ್ದೇನೆ. ಇದನ್ನು ಪರಿಗಣಿಸಿ ಮಂತ್ರಿ ಸ್ಥಾನ ನೀಡಬೇಕೆಂಬುದು ಕಾರ್ಯಕರ್ತರ ಒತ್ತಾಸೆಯೂ ಆಗಿದೆ’ ಎಂದು ನುಡಿದರು.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ, ಹಾಸನದಿಂದ ಜೆಡಿಎಸ್ ಅಭ್ಯರ್ಥಿಯಾಗುವ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ನಾಯಕರು ಎಲ್ಲಾ ದೃಷ್ಟಿಕೋನದಿಂದ ಆಲೋಚಿಸಿ ಈ ನಿರ್ಣಯ ಮಾಡಿದ್ದಾರೆ. ಅವರ ತೀರ್ಮಾನಕ್ಕೆ ಬದ್ಧ. ಆದರೆ, ಈ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆಯಾಗಿಲ್ಲ. ಜಿಲ್ಲೆಯಲ್ಲಿ ಯುವ ನಾಯಕ ಚುನಾವಣಾ ರಾಜಕೀಯಕ್ಕೆ ಬರಲು ಯಾವುದೇ ಅಭ್ಯಂತರವಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.