ADVERTISEMENT

ಸಾಧಕ ಮಹಿಳೆಯರಿಗೆ ಕಾಯಕ ಪ್ರಶಸ್ತಿ

ವಿಶ್ವ ರೈತ ದಿನ: ಕೆ.ಎಸ್. ಪುಟ್ಟಣ್ಣಯ್ಯ, ಎನ್.ಡಿ. ಸುಂದರೇಶ್ ನೆನಪಿನ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 14:35 IST
Last Updated 20 ಡಿಸೆಂಬರ್ 2019, 14:35 IST
ಬಡಗಲಪುರ ನಾಗೇಂದ್ರ
ಬಡಗಲಪುರ ನಾಗೇಂದ್ರ   

ಹಾಸನ : ವಿಶ್ವ ರೈತ ದಿನದ ಅಂಗವಾಗಿ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೆ.ಎಂ. ದೊಡ್ಡಿ ಭಾರತಿ ವಿದ್ಯಾ ಸಂಸ್ಥೆಯಲ್ಲಿ ಡಿ.23ರಂದು ರೈತ ಮುಖಂಡರಾದ ಕೆ.ಎಸ್. ಪುಟ್ಟಣ್ಣಯ್ಯ ಮತ್ತು ಎನ್.ಡಿ. ಸುಂದರೇಶ್ ಅವರ ನೆನಪಿನ ದಿನ ಆಚರಿಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಅಂದು ರೈತರ ಬೃಹತ್ ಬಹಿರಂಗ ಸಭೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ನೂರು ಮಹಿಳೆಯರಿಗೆ ಕಾಯಕ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಂತರರಾಷ್ಟ್ರೀಯ ಒಪ್ಪಂದಗಳ ವಿರುದ್ಧ ಹೋರಾಟ ರೂಪಿಸಲು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಷ್ಟ್ರೀಯ ಚಿಂತಕರು, ಹೋರಾಟಗಾರರು, ಪ್ರಗತಿಪರ ಸಂಘಟನೆಗಳ ಮುಖಂಡರುಗಳು ಭಾಗವಹಿಸಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಸುಮಾರು 10 ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಳ್ಳಲಿದ್ದಾರೆ. ರೈತ ಸಂಘ 39 ವರ್ಷ ಪೂರೈಸಿದ ಸಲುವಾಗಿ ಚಳುವಳಿಗೆ ಹೊಸ ರೂಪ ಕೊಡಲು ಪ್ರತಿ ತಾಲ್ಲೂಕಿನಲ್ಲಿ ನೂರು ಜನ ಯುವಕರ ತಂಡ ರಚನೆ ಮಾಡಲಾಗುತ್ತದೆ ಎಂದರು.

ADVERTISEMENT

ಜ. 26ರ ಗಣರಾಜ್ಯೋತ್ಸವ ಸಮಾರಂಭಕ್ಕೆ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವ ಬ್ರೆಜಿಲ್ ಪ್ರಧಾನಿ ಬೊಲ್ಸೇನಾರೋ ಅವರು ಭಾರತದ ಕಬ್ಬು ಬೆಳೆಗಾರರ ವಿರೋಧಿಯಾಗಿದ್ದು, ಅವರ ಆಗಮನ ವಿರೋಧಿಸಿ ಪ್ರಧಾನಿ ಮೋದಿಗೆ ಪತ್ರ ಬರೆಯಲಾಗಿದೆ. ಡಿ. 21 ರಿಂದ 27 ರವರೆಗೆ ದೇಶದಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ಕೇಂದ್ರ ಸರ್ಕಾರ ಆರ್ ಸಿಇಪಿ ಒಪ್ಪಂದದಿಂದ ಹಿಂದೆ ಸರಿದಿದೆ. ಆದರೆ, ಅಮೆರಿಕಾ ಜೊತೆ ಅಂತರರಾಷ್ಟ್ರೀಯ ವಾಣಿಜ್ಯ ಒಪ್ಪಂದ ಮಾಡಿಕೊಳ್ಳಲು ಮುಂದಾಗಿರುವುದು ಅಪಾಯಕಾರಿಯಾಗಿದೆ. ಈ ಒಪ್ಪಂದಕ್ಕೆ ಸಹಿ ಹಾಕಬಾರದು. ‌ಈಗ ರೂಪಿಸಿರುವ ಕರಡು ಪ್ರತಿಯಲ್ಲಿ ಬೀಜ ಕಾಯ್ದೆಯಲ್ಲಿ ರೈತರ ಹಕ್ಕುಗಳನ್ನು ರಕ್ಷಿಸಲು ಹೆಚ್ಚು ಒತ್ತು ನೀಡಿಲ್ಲ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಜಿ.ಟಿ. ರಾಮಸ್ವಾಮಿ, ಕಿರಣ್ ಪುಣಚ, ಹಿರಿಸಾವೆ ರಘು, ಇಂಮ್ರಾನ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಕಾಮಾಕ್ಷಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.