ADVERTISEMENT

ಸಕಲೇಶ‍ಪುರ | ಸಂಬಳದಿಂದ ಮೊಟ್ಟೆಗೆ ₹2: ಶಿಕ್ಷಕರ ಅಳಲು

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 14:28 IST
Last Updated 20 ಜೂನ್ 2025, 14:28 IST
ಸಕಲೇಶಪುರ ತಾಲ್ಲೂಕಿನ ಕುನಿಗನಹಳ್ಳಿ ಗ್ರಾ.ಪಂ. ಅಧ್ಯಕ್ಷ ಕೆ.ಎಸ್‌. ಪ್ರಕಾಶ್ ಅಧ್ಯಕ್ಷತೆಯಲ್ಲಿ ಗುರುವಾರ ಸರ್ಕಾರಿ ಶಾಲೆಗಳ ಶಿಕ್ಷಕರ ವಿಶೇಷ ಸಭೆ ನಡೆಸಿದರು
ಸಕಲೇಶಪುರ ತಾಲ್ಲೂಕಿನ ಕುನಿಗನಹಳ್ಳಿ ಗ್ರಾ.ಪಂ. ಅಧ್ಯಕ್ಷ ಕೆ.ಎಸ್‌. ಪ್ರಕಾಶ್ ಅಧ್ಯಕ್ಷತೆಯಲ್ಲಿ ಗುರುವಾರ ಸರ್ಕಾರಿ ಶಾಲೆಗಳ ಶಿಕ್ಷಕರ ವಿಶೇಷ ಸಭೆ ನಡೆಸಿದರು   

ಸಕಲೇಶ‍ಪುರ: ‘ನಮ್ಮ ಶಾಲೆಯಲ್ಲಿ 55 ಮಕ್ಕಳಿದ್ದಾರೆ. ಒಂದು ಮೊಟ್ಟೆಗೆ ಅಂಗಡಿಯಲ್ಲಿ 7 ರೂಪಾಯಿ. ಸರ್ಕಾರದಿಂದ ನಮಗೆ ಕೊಡುವುದು 5 ರೂಪಾಯಿ. ದಿನಕ್ಕೆ 110 ರೂಪಾಯಿ ನಮ್ಮ ಸಂಬಳದ ಹಣದಲ್ಲಿ ಹಾಕಬೇಕಾಗಿದೆ’ ಎಂದು ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ತಾಲ್ಲೂಕಿನ ಕುನಿಗನಹಳ್ಳಿ ಗ್ರಾಮ ಪಂಚಾಯಿತಿ ವಿಶೇಷ ಸಭೆಯಲ್ಲಿ ಹೇಳಿಕೊಂಡರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಸ್‌.ಪ್ರಕಾಶ್ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಪ್ರಗತಿ ಪರಿಶೀಲನೆಗಾಗಿ ಗುರುವಾರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆಸಿದ ವಿಶೇಷ ಸಭೆಯಲ್ಲಿ ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ಶಿಕ್ಷಕರು ಹೇಳಿಕೊಂಡರು.

‘ಒಂದು ಮೊಟ್ಟೆಗೆ ₹5 ಇದ್ದಾಗ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ ಮಾಡಲು ಸರ್ಕಾರ ಯೋಜನೆ ಜಾರಿಗೆ ತಂದಿದೆ. ಆದರೆ ಇಂದು ಮೊಟ್ಟೆಯ ದರ ಹೆಚ್ಚಾಗಿದೆ. ಹೆಚ್ಚುವರಿ ಹಣವನ್ನು ಶಿಕ್ಷಕರೇ ಭರಿಸಬೇಕಾಗಿದೆ. ನಿತ್ಯದ ಮಾರಕಟ್ಟೆ ದರದಲ್ಲಿ ಸರ್ಕಾರ ಹಣ ಬಿಡುಗಡೆ ಮಾಡಿದರೆ ಈ ಸಮಸ್ಯೆ ಬಗೆಹರಿಯುತ್ತದೆ’ ಎಂದು ಸಮಸ್ಯೆ ಹೇಳಿಕೊಂಡರು.

ADVERTISEMENT

‘ಮಳೆಗಾಲ ಶುರುವಾಗಿದ್ದು ಬಹುತೇಕ ಸರ್ಕಾರಿ ಶಾಲಾ ಕಟ್ಟಡಗಳು ಸೋರಿಕೆ ಆಗುತ್ತಿವೆ. ಕಿಟಕಿಗಳು, ಬಾಗಿಲುಗಳ ದುರಸ್ತಿ ಕೆಲಸ ಆಗಬೇಕು. ಶೌಚಾಲಯಗಳು ನವೀಕರಣಗೊಳ್ಳಬೇಕಾಗಿದೆ. ಶೌಚಾಲಯಗಳಿಗೆ ನೀರಿನ ಸಂಪರ್ಕ ಕಲ್ಪಿಸಬೇಕು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಶಿಕ್ಷಕರು ಕೇಳಿಕೊಂಡರು.

ಅಧ್ಯಕ್ಷ ಪ್ರಕಾಶ್ ಮಾತನಾಡಿ, ‘ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ಶಾಸಕ ಸಿಮೆಂಟ್ ಮಂಜುನಾಥ್‌ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಲಾಗುವುದು. ಗ್ರಾಮ ಪಂಚಾಯಿತಿ ಅಡಿಯಲ್ಲಿ ಮಾಡಬಹುದಾದ ಅಭಿವೃದ್ಧಿ ಕೆಲಸಗಳನ್ನು ಪಂಚಾಯಿತಿಯಿಂದ ಮಾಡುತ್ತೇವೆ. ಇನ್ನು ಮುಂದೆ ಪ್ರತಿ ಸರ್ಕಾರಿ ಶಾಲೆಗಳಿಗೆ ಆಯಾಗ ಗ್ರಾಮಗಳ ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಆಗಾಗ ಭೇಟಿ ನೀಡಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು. ಸಣ್ಣ ಪುಟ್ಟ ಕೆಲಸ ಕಾರ್ಯಗಳನ್ನು ಪಂಚಾಯಿತಿಯಿಂದ ಮಾಡಲಾಗುವುದು. ಕಟ್ಟಡ ನಿರ್ಮಾಣ, ಕಟ್ಟಡಗಳ ದುರಸ್ಥಿ ಇಂತಹ ದೊಡ್ಡ ಕೆಲಸಗಳನ್ನು ಶಾಸಕ ಗಮನಕ್ಕೆ ತಂದು ಅವರ ಮೂಲಕ ಮಾಡಿಸುವ ಪ್ರಯತ್ನ ಪಡುತ್ತೇವೆ’ ಎಂದರು.

‘ಸರ್ಕಾರಿ ಶಾಲೆಗಳ ಶಿಕ್ಷಕರು ಕಲಿಸುವ ಗುಣಮಟ್ಟದ ಶಿಕ್ಷಣ ಖಾಸಗಿ ಶಾಲೆಗಳ ಶಿಕ್ಷಕರಿಗಿಂತಲೂ ಹೆಚ್ಚು ಇರುವುದರಿಂದ, ಸರ್ಕಾರಿ ಶಾಲೆಗಳ ಮೂಲಸೌಲಭ್ಯಗಳನ್ನು ಹೆಚ್ಚು ವ್ಯವಸ್ಥಿತವಾಗಿಯೂ, ಹೈಟೆಕ್‌ ಮಾದರಿಯಲ್ಲಿ ಮಾಡುವುದು ಇಂದಿನ ಅಗತ್ಯವಾಗಿದೆ. ಇದರಿಂದ ಮಕ್ಕಳ ದಾಖಲಾತಿ ಹೆಚ್ಚು ಮಾಡಿ ಖಾಸಗಿ ಶಾಲೆಗಳ ವ್ಯಾಪಾರೀಕರಣಕ್ಕೆ ಕಡಿವಾಣ ಹಾಕುವುದು ಅಗತ್ಯ’ ಎಂದರು.

‘ಗ್ರಾಮ ಪಂಚಾಯಿತಿ ಅಧ್ಯಕ್ಷರೊಬ್ಬರು ಸರ್ಕಾರಿ ಶಾಲೆಗಳ ಶಿಕ್ಷಕರನ್ನು ಕರೆಸಿ ವಿಶೇಷ ಸಭೆ ಮೂಲಕ ಸರ್ಕಾರಿ ಶಾಲೆಗಳ ಸ್ಥಿತಿ ಗತಿ ಪರಿಶೀಲನೆ ನಡೆಸಿರುವುದು ಇದೇ ಮೊದಲು. ಈ ನಿಟ್ಟಿನಲ್ಲಿ ಕುನಿಗನಹಳ್ಳಿ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್ ಅವರು ಒಂದು ಒಳ್ಳೆಯ ಹೆಜ್ಜೆ ಇಟ್ಟಿದ್ದಾರೆ’ ಎಂದು ಆದರವಳ್ಳಿ ಶಾಲೆ ಮುಖ್ಯ ಶಿಕ್ಷಕ ಎಂ.ಜಿ. ರವಿ ಸಭೆಯಲ್ಲಿ ಹೇಳಿದರು.

ಗ್ರಾ.ಪಂ. ಉಪಾಧ್ಯಕ್ಷೆ ಶಶಿಕಲಾ ದಯಾನಂದ್, ಸದಸ್ಯರಾದ ತಾರಾ ಮಹೇಶ್‌, ಲಕ್ಷ್ಮಿ, ಕೆ.ಎ. ಇಬ್ರಾಹಿಂ, ರವಿಕುಮಾರ್, ಸಂಗಪ್ಪ, ಸಾವಿತ್ರಿ, ಗೌರಮ್ಮ, ಶಿಲ್ಪಾ ಜಗದೀಶ್‌, ಪಿಡಿಓ ರಘು, ಕಾರ್ಯದರ್ಶಿ ರಮೇಶ್‌, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ತಮ್ಮಣ್ಣಶೆಟ್ಟಿ ಇದ್ದರು.

Quote - ಸರ್ಕಾರಿ ಶಾಲೆಗಳು ಇರುವಂತಹ ಗ್ರಾಮಗಳ ಸುತ್ತಮುತ್ತ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರುವಂತಹ ದಾನಿಗಳು ಗ್ರಾಮದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈ ಜೋಡಿಸಬೇಕು ಕೆ.ಎಸ್‌.ಪ್ರಕಾಶ್ ಕುನಿಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.