ADVERTISEMENT

ಸಕಲೇಶಪುರ | ಮಳೆ, ಕಾಡಾನೆ: ಮುನ್ನೆಚ್ಚರಿಕೆ ಕ್ರಮ

ಸಕಲೇಶಪುರ–ಆಲೂರು–ಕಟ್ಟಾಯ ಪ್ರದೇಶ: ಡಾ. ಎಂ.ಕೆ. ಶೃತಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 14:13 IST
Last Updated 25 ಏಪ್ರಿಲ್ 2024, 14:13 IST
ಸಕಲೇಶಪುರದ ಚುನಾವಣಾ ಕೇಂದ್ರದಲ್ಲಿ ಚುನಾವಣಾ ಕರ್ತವ್ಯದಲ್ಲಿರುವ ಹೊರ ಜಿಲ್ಲೆಗಳ ಸರ್ಕಾರಿ ಅಧಿಕಾರಿ, ನೌಕರರು ಗುರುವಾರ ಚಲಾವಣೆ ಮಾಡಿದ ಅಂಚೆ ಮತಗಳನ್ನು ಸಹಾಯಕ ಚುನಾವಣಾ ಅಧಿಕಾರಿ ಡಾ.ಎಂ.ಕೆ. ಶೃತಿ, ತಹಶೀಲ್ದಾರ್ ಜಿ. ಮೇಘನಾ, ಕ್ಷೇತ್ರ ಶಿಕ್ಷಣ ಅಧಿಕಾರಿ ಪುಷ್ಪಾ ವೀಕ್ಷಿಸಿದರು
ಸಕಲೇಶಪುರದ ಚುನಾವಣಾ ಕೇಂದ್ರದಲ್ಲಿ ಚುನಾವಣಾ ಕರ್ತವ್ಯದಲ್ಲಿರುವ ಹೊರ ಜಿಲ್ಲೆಗಳ ಸರ್ಕಾರಿ ಅಧಿಕಾರಿ, ನೌಕರರು ಗುರುವಾರ ಚಲಾವಣೆ ಮಾಡಿದ ಅಂಚೆ ಮತಗಳನ್ನು ಸಹಾಯಕ ಚುನಾವಣಾ ಅಧಿಕಾರಿ ಡಾ.ಎಂ.ಕೆ. ಶೃತಿ, ತಹಶೀಲ್ದಾರ್ ಜಿ. ಮೇಘನಾ, ಕ್ಷೇತ್ರ ಶಿಕ್ಷಣ ಅಧಿಕಾರಿ ಪುಷ್ಪಾ ವೀಕ್ಷಿಸಿದರು   

ಸಕಲೇಶಪುರ: ಶುಕ್ರವಾರ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮಳೆ, ಕಾಡಾನೆ ಹಾಗೂ ಇನ್ನಿತರ ಯಾವುದೇ ಸಮಸ್ಯೆ ಉಂಟಾಗದಂತೆ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಡಾ. ಎಂ.ಕೆ. ಶೃತಿ ಹೇಳಿದರು.

ಕಾಡಾನೆ ಸಮಸ್ಯೆ ಇರುವಂತಹ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ವತಿಯಿಂದ ಆರ್‌ಆರ್‌ಟಿ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಗುರುವಾರ ರಾತ್ರಿ ಹಾಗೂ ಶುಕ್ರವಾರ ಸಕಲೇಶಪುರ ಸುತ್ತಲಿನ ಪ್ರದೇಶಗಳಲ್ಲಿ ಮಳೆಯ ಮುನ್ಸೂಚನೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗಾಳಿ ಹಾಗೂ ಮಳೆಗೆ  ಅಡಚಣೆ ಉಂಟಾದರೆ ತೆರವು ಕಾರ್ಯಾಚರಣೆ ತಕ್ಷಣ ನಡೆಯಲಿದೆ. 62 ಸೂಕ್ಷ್ಮ ಮತಕೇಂದ್ರಗಳಿಗೆ ವೆಬ್‌ ಕ್ಯಾಮ್‌ ಹಾಗೂ ಹೆಡ್‌ ಕಾನ್‌ಸ್ಟೆಬಲ್‌ ನೇಮಕ ಮಾಡಲಾಗಿದೆ. ಮತದಾರರು ಮುಕ್ತವಾಗಿ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಸಕಲೇಶಪುರ–ಆಲೂರು–ಕಟ್ಟಾಯ ವ್ಯಾಪ್ತಿಯಲ್ಲಿ 1,03,096 ಪುರುಷ ಹಾಗೂ 1,04,844 ಮಹಿಳಾ ಮತದಾರರು ಸೇರಿದಂತೆ ಒಟ್ಟು 2,07,943 ಮತದಾರರಿದ್ದಾರೆ. ಇಲ್ಲಿ ಒಟ್ಟು 285 ಮತಗಟ್ಟೆಗಳು ಇವೆ. 9 ಮಾಡೆಲ್‌ ಮತಗಟ್ಟೆಗಳು, 5 ಪಿಂಕ್‌ ಮತಗಟ್ಟೆಗಳು ಸೇರಿವೆ. ತಲಾ ಒಬ್ಬರು ಮತಗಟ್ಟೆ ಅಧಿಕಾರಿ ,ಸಹಾಯಕ ಮತಗಟ್ಟೆ ಅಧಿಕಾರಿ ಸೇರಿದಂತೆ ಒಟ್ಟು 1,140 ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು  ಅವರು ಹೇಳಿದರು.

ADVERTISEMENT

57 ಮತಗಟ್ಟೆ ಅಧಿಕಾರಿಗಳು, 57 ಸಹಾಯಕ ಮತಗಟ್ಟೆ ಅಧಿಕಾರಿಗಳನ್ನು ಹೆಚ್ಚುವರಿಯಾಗಿ ನಿಯೋಜನೆ ಮಾಡಲಾಗಿದೆ.  ಜಿಲ್ಲೆಯ ಪೊಲೀಸರ ಜತೆಗೆ ಗುಜರಾತಿನಿಂದ 35 ಮಂದಿ ಸಿಪಿಎಂಎಫ್‌ ಯೋಧರು ಕರ್ತವ್ಯ ನಿರ್ವಹಿಸಲಿದ್ದಾರೆ.

 306 ಮತದಾರರಲ್ಲಿ ಚುನಾವಣಾ ಅಧಿಕಾರಿಗಳು ಮನೆಗಳಿಗೆ ತೆರಳಿ ಮತದಾನ ಮಾಡಿಸಿದ್ದು, 299 ಮಂದಿ ಮತಚಲಾಯಿಸಿದ್ದಾರೆ. ಚುನಾವಣಾ ಕರ್ತವ್ಯದಲ್ಲಿರುವ 740 ಮಂದಿ ಗುರುವಾರ ಇಲ್ಲಿಯ ಸಂತ ಜೋಸೆಫ್‌ ಪ್ರೌಢಶಾಲೆಯ ಕೇಂದ್ರದಲ್ಲಿ ಅಂಚೆ ಚೀಟಿ ಮೂಲಕ ಮತದಾನ ಮಾಡಿದರು.

ಮಳೆ ಬರುವ ಸಾಧ್ಯತೆ ಇದ್ದ ಕಾರಣ ಮತಗಟ್ಟೆಗಳಿಗೆ ಮತಪೆಟ್ಟಿಗೆ ಹಾಗೂ ಸಿಬ್ಬಂದಿಯನ್ನು ಮಧ್ಯಾಹ್ನ 2 ಗಂಟೆ ಒಳಗೆಕಳಿಸಲಾಯಿತು.

ಸಕಲೇಶಪುರದ ಪುರಭವನದಲ್ಲಿ ಶುಕ್ರವಾರ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಬರುವ ಮತದಾರರಿಗೆ ಮತಗಟ್ಟೆ ಸಂಖ್ಯೆ 83 ಪಿಂಕ್ ಮತಗಟ್ಟೆಯಾಗಿ ಅಲಂಕರಿಸಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.