ADVERTISEMENT

ಸಮಾನ ಶಿಕ್ಷಣ ನೀತಿ ಜಾರಿಗೆ ಒತ್ತಾಯ

ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 14:22 IST
Last Updated 29 ನವೆಂಬರ್ 2019, 14:22 IST
ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಕೀರ್ತಿನಾ ನಾಯಕ್‌, ಸಹ ಅಧ್ಯಕ್ಷರಾದ ರೇವಂತ್‌ ರಾಜೀವ್‌, ಪ್ರದ್ಯುಮ್ನ ಮೂರ್ತಿ, ಅಭಿಷೇಷಕ್‌ ಉಭಾಳೆ ಅವರನ್ನು ಪುಷ್ಪಾಲಂಕೃತ ರಥದಲ್ಲಿ ಮೆರವಣಿಗೆ ಮಾಡಲಾಯಿತು.
ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಕೀರ್ತಿನಾ ನಾಯಕ್‌, ಸಹ ಅಧ್ಯಕ್ಷರಾದ ರೇವಂತ್‌ ರಾಜೀವ್‌, ಪ್ರದ್ಯುಮ್ನ ಮೂರ್ತಿ, ಅಭಿಷೇಷಕ್‌ ಉಭಾಳೆ ಅವರನ್ನು ಪುಷ್ಪಾಲಂಕೃತ ರಥದಲ್ಲಿ ಮೆರವಣಿಗೆ ಮಾಡಲಾಯಿತು.   

ಹಾಸನ: ದೇಶದಲ್ಲಿ ಸಮಾನ ಶಿಕ್ಷಣ ನೀತಿ ಜಾರಿಗೆ ತರಬೇಕು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಆಗ್ರಹಿಸಿದರು.

ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌, ಆದಿಚುಂಚನಗಿರಿ ಶಾಖಾ ಮಠ ಆಯೋಜಿಸಿರುವ ಎರಡು ದಿನಗಳ ಪ್ರಥಮ ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಒಂದೇ ರೀತಿ ಇರಬೇಕು. ಇಲ್ಲವಾದಲ್ಲಿ ಮಕ್ಕಳ ಮಧ್ಯೆ ಅಸಮಾನತೆಯ ಬೀಜ ಬಿತ್ತಿದಂತಾಗುತ್ತದೆ. ಕಡೇ ಪಕ್ಷ ಶಾಲಾ ಶಿಕ್ಷಣ ಸಮಾನವಾಗಿರಬೇಕು ಎಂದು ಪ್ರತಿಪಾದಿಸಿದರು.

ADVERTISEMENT

ಸಮಾಜದಲ್ಲಿ ಆದರ್ಶ ಶಿಕ್ಷಣ ಕ್ಷೇತ್ರದ ಗುರು, ಧರ್ಮಗುರು, ನೇತಾರರು ಕಾಣುತ್ತಿಲ್ಲ. ಹಾಗಾಗಿ ನೈತಿಕತೆ, ವಿಶ್ವಾಸಾರ್ಹತೆಗೆ ಧಕ್ಕೆ ಬರುತ್ತಿದೆ. ವಿಜ್ಞಾನಿಗಳಿಗೆ ವೈಜ್ಞಾನಿಕ ಪ್ರಜ್ಞೆ ಇಲ್ಲ, ರಾಜಕಾರಣಿಗಳಿಗೆ ರಾಜಕೀಯ ಪ್ರಜ್ಞೆ ಇಲ್ಲ, ಧರ್ಮಾಧಿಕಾರಿಗಳಿಗೆ ಧರ್ಮದ ಪ್ರಜ್ಞೆ ಇಲ್ಲ, ಸಾಹಿತಿಗಳಿಗೆ ಸಾಂಸ್ಕೃತಿಕ ಪ್ರಜ್ಞೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ಕೆಲ ಮಹನೀಯರನ್ನು ಖಳನಾಯಕರಾಗಿ ಚಿತ್ರಿಸಲಾಗುತ್ತಿದೆ. ಎಲ್ಲ ಧರ್ಮದವರು ಸೇರಿ ದೇಶವನ್ನು ಕಟ್ಟಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮಕ್ಕಳಿಗೆ ಇಂತವಹರನ್ನು ಪ್ರೀತಿಸಬೇಕು, ದ್ವೇಷಿಸಬೇಕೆಂದು ಹೇಳುವುದು ಸರಿಯಲ್ಲ. ಮಕ್ಕಳಿಗೆ ಗಾಂಧಿ, ಅಂಬೇಡ್ಕರ್‌, ಪೈಗಂಬರ್‌, ಮದರ್ ತೆರೇಸಾ ಆದರ್ಶರಾಗಬೇಕು ಎಂದು ನುಡಿದರು.

ಆದಿಚುಂಚನಗಿರಿ ಕ್ಷೇತ್ರ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಇದಕ್ಕೂ ಮೊದಲು ಸಮ್ಮೇಳನದ ಸರ್ವಾಧ್ಯಕ್ಷೆ ಕೀರ್ತನಾ ನಾಯಕ್‌, ಸಹ ಅಧ್ಯಕ್ಷರಾದ ಮಂಡ್ಯದ ರೇವಂತ್‌ ರಾಜೀವ್‌, ದಕ್ಷಿಣ ಕನ್ನಡ ಜಿಲ್ಲೆಯ ಪ್ರದ್ಯುಮ್ನ ಮೂರ್ತಿ, ದೆಹಲಿಯ ಅಭಿಷೇಕ್‌ ಉಭಾಳೆ ಅವರಿಗೆ ಮೈಸೂರು ಪೇಟ ತೊಡಿಸಿ ಪುಷ್ಪಾಲಂಕೃತ ರಥದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.

ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಬಂದಿದ್ದ ವಿವಿಧ ಶಾಲೆಗಳ ಸಾವಿರಾರು ಮಕ್ಕಳು ಹಾಗೂ ಆಕರ್ಷಕ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಮಹನೀಯರ ವೇಷ ಧರಿಸಿದ ಶಾಲಾ ವಿದ್ಯಾರ್ಥಿಗಳು, ಸೋಮನ ಕುಣಿತ, ಕರಗ ಕುಣಿತ, ಚರ್ಮ ವಾದ್ಯ ತಂಡ, ಯಕ್ಷಗಾನ, ಕೀಲು ಕುದುರೆ, ಡೊಳ್ಳು ಕುಣಿತ, ಕೋಲಾಟ, ನೋಡುಗರ ಕಣ್ಮನ ಸೆಳೆಯಿತು.

ಮಧ್ಯಾಹ್ನ ನಡೆದ ವಿಚಾರ ಗೋಷ್ಠಿಯಲ್ಲಿ ವೈಜ್ಞಾನಿಕತೆ– ವೈಚಾರಿಕತೆ, ಪ್ರಸಕ್ತ ಕನ್ನಡ ನಾಡಿನ ಸ್ಥಿತಿಗತಿ, ಜಾಗತಿಕ ತಾಪಮಾನ–ಪರಿಸರ ಕುರಿತು ಮಕ್ಕಳು ವಿಷಯ ಮಂಡಿಸಿದರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.