
ಹಾಸನ: ಹಲವು ವರ್ಷಗಳಿಂದ ದಲಿತ ಹಾಗೂ ಪೌರಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತ ವಿಫಲವಾಗಿದೆ ಎಂದು ಅರೋಪಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡ ಕೃಷ್ಣದಾಸ್, ಗುರುವಾರ ತಮಟೆ ಬಾರಿಸುವ ಮೂಲಕ ಏಕಾಂಗಿ ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ದಲಿತರು ಸಮಾಜದ ಮುಖ್ಯ ವಾಹಿನಿಯಿಂದ ದೂರವೇ ಇರುವಂತಾಗಿದೆ. ಶೋಷಿತರ ಅಭಿವೃದ್ಧಿಗೆ ಬೇಕಾದ ಸೂಕ್ತ ಸೌಲಭ್ಯ ದೊರೆಯುತ್ತಿಲ್ಲ. ಜಾತ್ಯತೀತ ಮತ್ತು ಸಮಾನತೆಯ ಮೌಲ್ಯಗಳನ್ನು ಸಾರಿಕೊಂಡು ದೇಶವು ಅಭಿವೃದ್ಧಿ ಪಥದಲ್ಲಿ ಇದೆ ಎಂದು ಹೇಳುತ್ತಿದ್ದರೂ, ಪರಿಶಿಷ್ಟ ಜಾತಿಯ ಜನರ ಆರ್ಥಿಕ, ಸಾಮಾಜಿಕ ಸ್ಥಿತಿ ಸುಧಾರಿಸಿಲ್ಲ ಎಂದರು.
ತಾಲ್ಲೂಕಿನ 9 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಜೀತಕ್ಕಿದ್ದ ಸುಮಾರು 21ಕುಟುಂಬಗಳಿಗೆ ಜಮೀನು ನೀಡುವಂತೆ ದಲಿತ ಸಂಘಟನೆಗಳು 30-40 ವರ್ಷಗಳಿಂದ ಹೋರಾಟ ನಡೆಸಿದರೂ, ಜಿಲ್ಲಾಡಳಿತದಿಂದ ಯಾವುದೇ ಕ್ರಮ ವಹಿಸಿಲ್ಲ. ಜೀತವಿಮುಕ್ತರ ಪುನರ್ವಸತಿ ಕನಸು ಇಂದಿಗೂ ಈಡೇರಿಲ್ಲ. ಈ ಜೀತ ವಿಮುಕ್ತರಲ್ಲಿ 6-7 ಜನರು ಜಮೀನು ಸಿಗದೇ ಮೃತಪಟ್ಟಿದ್ದು, ಉಳಿದ ಕುಟುಂಬಗಳು ಜಿಲ್ಲಾಧಿಕಾರಿ ಕಚೇರಿಗೆ ಅಲೆದು ನ್ಯಾಯ ಸಿಗದೇ ನಿರಾಶರಾಗಿದ್ದಾರೆ ಎಂದರು.
ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 200 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ವಸತಿ, ಆರೋಗ್ಯ ಸುರಕ್ಷಾ ಸೌಕರ್ಯಗಳಿಲ್ಲದೇ ದುಡಿಯುವಂತಾಗಿದೆ. 6 ವರ್ಷಗಳ ಹಿಂದೆ ಮೊದಲ ಹಂತದಲ್ಲಿ 41 ಫಲಾನುಭವಿಗಳಿಗೆ ಗೃಹ ನಿರ್ಮಾಣ ಕೈಗೊಂಡರೂ, ಕಾಮಗಾರಿ ಅರ್ಧದಲ್ಲೇ ನಿಂತಿದೆ. ಎರಡನೇ ಹಂತದಲ್ಲಿ ಪೌರಕಾರ್ಮಿಕರಿಗೆ ವಸತಿ ಕಲ್ಪಿಸಲು ಅಗತ್ಯ ಜಮೀನು ಕಾಯ್ದಿರಿಸಿದ್ದು, ಪಾಲಿಕೆಯಿಂದ ಪ್ರಸ್ತಾವ ಸಲ್ಲಿಸಿದ್ದರೂ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಎನ್.ಆರ್. ಸರ್ಕಲ್‌ನಲ್ಲಿ ನರಸಿಂಹರಾಜ ಒಡೆಯರ್ ಪ್ರತಿಮೆ ಸ್ಥಾಪನೆ, ಬಿಟ್ಟಗೌಡನಹಳ್ಳಿ ಸ್ಮಶಾನದ ಅಭಿವೃದ್ಧಿ, ಪೌರಕಾರ್ಮಿಕರ ವಸತಿ ನಿರ್ಮಾಣಕ್ಕೆ ಎರಡನೇ ಹಂತದ ಕಾಮಗಾರಿ ತಕ್ಷಣ ಪ್ರಾರಂಭ, ಮೊದಲ ಹಂತದ 41 ಮನೆಗಳ ಸ್ವಾಧೀನ ಪತ್ರ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಈ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾಡಳಿತದ ಎದುರು ಧರಣಿ ಮಾಡಿದ್ದು, ಮುಖ್ಯಮಂತ್ರಿ ಹಾಸನಕ್ಕೆ ಬರುವುದರೊಳಗೆ ನಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.