ADVERTISEMENT

ಶಾಲಾ ‌ಮಕ್ಕಳಿಗೆ ಗುಲಾಬಿ ನೀಡಿ ಸ್ವಾಗತ

ಎಲ್ಲೆಡೆ ಹಬ್ಬದ ವಾತಾವರಣ, ಮಕ್ಕಳಿಗೆ ಸಿಹಿ ವಿತರಣೆ

​ಪ್ರಜಾವಾಣಿ ವಾರ್ತೆ
Published 16 ಮೇ 2022, 15:36 IST
Last Updated 16 ಮೇ 2022, 15:36 IST
ಹಾಸನದ ಚನ್ನಪಟ್ಟಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ಮಕ್ಕಳಿಗೆ ಚಾೋಲೇಟ್ ನೀಡಿ ಬರಮಾಡಿಕೊಂಡರು.
ಹಾಸನದ ಚನ್ನಪಟ್ಟಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ಮಕ್ಕಳಿಗೆ ಚಾೋಲೇಟ್ ನೀಡಿ ಬರಮಾಡಿಕೊಂಡರು.   

ಹಾಸನ: ಬೇಸಿಗೆ ರಜೆ ಬಳಿಕ ಜಿಲ್ಲೆಯಾದ್ಯಂತ 1ರಿಂದ 10ನೇ ತರಗತಿ ಶಾಲೆಗಳು ಸೋಮವಾರ ಪುನರಾರಂಭಗೊಂಡಿದ್ದು, ಮಕ್ಕಳು ಉತ್ಸಾಹದಿಂದ ಬಂದರು.

ಮೊದಲ ದಿನ ಶಾಲೆಗೆ ಬಂದ ವಿದ್ಯಾರ್ಥಿಗಳ ಮೇಲೆ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಪುಷ್ಪವೃಷ್ಟಿ ಸುರಿದು ಸ್ವಾಗತಿಸಿದರು. ಎರಡು ದಿನ ಮುಂಚಿತವಾಗಿಯೇ ಶಿಕ್ಷಕರು ಮತ್ತು ಸಿಬ್ಬಂದಿ ಕೊಠಡಿಗಳನ್ನು ಶುಚಿಗೊಳಿಸಿ, ಮಾವಿನ ತೋರಣ ಕಟ್ಟಿದ್ದರು. ಶಾಲಾ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕರೆತಂದು ಬಿಟ್ಟು ಹೋಗುತ್ತಿದ್ದ ದೃಶ್ಯ ಕಂಡು ಬಂತು. ರಜೆಯ ನಂತರ ಮಕ್ಕಳು ಮತ್ತು ಶಿಕ್ಷಕರ ಭೇಟಿ, ಇಬ್ಬರಲ್ಲೂ ಉತ್ಸಾಹ ಇಮ್ಮಡಿಗೊಳಿಸಿತ್ತು. ಶಾಲೆಗಳ ಮುಂದೆ ರಂಗೋಲಿ ಹಾಕಲಾಗಿತ್ತು.

ADVERTISEMENT

ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಶಾಲೆಗಳನ್ನು ತಳಿರು, ತೋರಣಗಳಿಂದ ಸಿಂಗರಿಸಲಾಗಿತ್ತು. ಕೆಲವು ಶಾಲೆಗಳಲ್ಲಿ ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರು ಮಕ್ಕಳಿಗೆ ಚಾೋಲೇಟ್‌ ನೀಡಿ ಬರಮಾಡಿಕೊಂಡರು. ಹಲವೆಡೆ ಗುಲಾಬಿ ನೀಡಿ ಸ್ವಾಗತ ಕೋರಲಾಯಿತು. ಮಧ್ಯಾಹ್ನ ಊಟಕ್ಕೆ ಪಾಯಸ, ಮೈಸೂರು ಪಾಕ್‌ ನೀಡಲಾಗಿದೆ. ಕೆಲವು ಶಾಲೆಗಳಲ್ಲಿ ಹಾಲು ವಿತರಿಸಲಾಯಿತು.

ಕೋವಿಡ್‌ ಸಾಂಕ್ರಾಮಿಕದ ಪರಿಣಾಮ ಎರಡು ವರ್ಷದಲ್ಲಿ ಮಕ್ಕಳು ಕಲಿಕೆಯಿಂದ ವಂಚಿತರಾಗಿರುವುದನ್ನು ಸರಿದೂಗಿಸಲು ಪ್ರಸಕ್ತ ವರ್ಷವನ್ನು ‘ಕಲಿಕಾ ಚೇತರಿಕೆ’ ವರ್ಷ ಎಂದು ಘೋಷಿಸಲಾಗಿದೆ. ಮೇ 16ರಿಂದ 30ರವರೆಗೆ ಮಕ್ಕಳಿಗೆ ಹಿಂದಿನ ವರ್ಷದ ಕಲಿಕೆಯಲ್ಲಿ ಆಗಿರುವ ಕೊರತೆ ಸರಿದೂಗಿಸಲು ಪೂರಕವಾಗಿ ತರಗತಿಗಳು ನಡೆಯಲಿವೆ.

‘ಬೇಸಿಗೆ ರಜೆ ಕಳೆದು ಮಕ್ಕಳು ಉತ್ಸಾಹದಿಂದ ಶಾಲೆಗೆ ಬಂದಿದ್ದಾರೆ. ಮೊದಲ ದಿನ ಮಕ್ಕಳಿಗೆ ಸಿಹಿ ವಿತರಿಸಲಾಗಿದೆ. 1 ರಿಂದ 10ನೇ ತರಗತಿಯ ಶೇ 50ರಷ್ಟು ಪುಸ್ತಕಗಳು ಬಂದಿವೆ. ಮುಂದಿನ ಹತ್ತು ದಿನಗಳಲ್ಲಿ ಎಲ್ಲ ಪುಸ್ತಕಗಳು ಸರಬರಾಜು ಆಗಲಿದೆ. ಹೀಗಾಗಿ ಪುಠ್ಯಪುಸ್ತಕಗಳ ಸಮಸ್ಯೆ ಆಗದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಎಸ್.ಪ್ರಕಾಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.