ADVERTISEMENT

ಜೀವನ ರೂಪಿಸಲು ಅಂಕಗಳು ಮಾನದಂಡವಲ್ಲ: ಡಾ.ಸಿ.ಎನ್.ಮಂಜುನಾಥ್

ಸರ್ಕಾರಿ ಕಲಾ ಕಾಲೇಜಿನಲ್ಲಿ 2ನೇ ಪದವಿ ಪ್ರದಾನ ಸಮಾರಂಭದಲ್ಲಿ ಡಾ.ಸಿ.ಎನ್‌.ಮಂಜುನಾಥ್‌

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 15:15 IST
Last Updated 4 ಏಪ್ರಿಲ್ 2021, 15:15 IST
ಹಾಸನ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರದವಿ ಪ್ರದಾನ ಮಾಡಲಾಯಿತು.
ಹಾಸನ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರದವಿ ಪ್ರದಾನ ಮಾಡಲಾಯಿತು.   

ಹಾಸನ: ಸಾಧನೆ ಇಲ್ಲದ ಬದುಕಿಗೆ ಬೆಲೆಯಿಲ್ಲ ಎಂಬ ಸತ್ಯವನ್ನು ಅರಿತರೆ ಜೀವನಕ್ಕೊಂದು ಅರ್ಥ ಸಿಗುತ್ತದೆ ಎಂದು ಬೆಂಗಳೂರು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಹೇಳಿದರು.

ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ 2ನೇ ಪದವಿ ಪ್ರದಾನ ಸಮಾರಂಭದಲ್ಲಿ ವಿಡಿಯೊ ಸಂವಾದದ ಮೂಲಕ ಮಾತನಾಡಿದರು.

ಯಶಸ್ಸು ಸುಲಭವಾಗಿ ದೊರೆಯುವಂತದಲ್ಲ. ಅದಕ್ಕಾಗಿ ನಿರಂತರ ಶ್ರಮ, ತಾಳ್ಮೆ, ಪ್ರಾಮಾಣಿಕತೆ ಬೇಕಾಗುತ್ತದೆ. ಪದವಿ ಪಡೆದ ಮಾತ್ರಕ್ಕೆ ದೊಡ್ಡ ಸಾಧಕರು ಎಂಬಂತೆ ವರ್ತಿಸಬಾರದು. ಉತ್ತಮ ಜೀವನ ರೂಪಿಸಿಕೊಳ್ಳಲು ಪಡೆದಿರುವ ಅಂಕಗಳು ಮಾನದಂಡವಲ್ಲ. ವಿದ್ಯಾಭ್ಯಾಸ ಜೀವನದ ಒಂದು ಭಾಗವಷ್ಟೇ ಇದರ ಹೊರತಾಗಿ ಬೇರೆ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ಜಗತ್ತಿಗೆ ನಮ್ಮನ್ನು ಪರಿಚಯಿಸುವ ತಂದೆ ಹಾಗೂ ತಾಯಿ ಬಳಿಕ ಗುರು ಉನ್ನತ ಸ್ಥಾನ ಪಡೆಯುತ್ತಾರೆ. ಅಂದುಕೊಂಡದ್ದನ್ನು ಸಾಧಿಸುವಾಗ ಎದುರಾಗುವ ಸವಾಲುಗಳು ದೀರ್ಘವಾಗಿರುತ್ತವೆ ಹಾಗೂ ಕಠಿಣವಾಗಿರುತ್ತವೆ. ಅದರಿಂದ ವಿಚಲಿತರಾಗದೆ ಅದೇ ಮಾರ್ಗದಲ್ಲಿ ಸಾಗಬೇಕು. ಜೀವನದಲ್ಲಿ ಸಿಗುವ ಉತ್ತಮ ಅವಕಾಶಗಳ ಸದುಪಯೋಗ ಮಾಡಿಕೊಳ್ಳುವ ಛಾತಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ಅಂಕ ಗಳಿಕೆಯ ಮೂಲಕ ಎಲ್ಲದರಲ್ಲೂ ಪ್ರಥಮ ಸ್ಥಾನದಲ್ಲಿರುವ ವಿದ್ಯಾರ್ಥಿಗಳು ಸಂವಹನ ಕೌಶಲ ಬೆಳೆಸಿಕೊಳ್ಳುವುದು ತುರ್ತು ಅಗತ್ಯವಾಗಿದೆ. ಮನೋಭಾವ, ಪರಿಸ್ಥಿತಿಯನ್ನು ನಿಭಾಯಿಸುವ ಕಲೆಯಿಂದ ವ್ಯಕ್ತಿಯ ವ್ಯಕ್ತಿತ್ವ ನಿರ್ಧಾರವಾಗುತ್ತದೆ ಎಂದು ತಿಳಿಸಿದರು.

ಆಧುನಿಕತೆ ಬೆಳೆದಂತೆ ಎಲ್ಲ ಮೊಬೈಲ್, ಟ್ಯಾಬ್‍ಗಳು ಚಾಲನೆಯಲ್ಲಿವೆ. ಲೇಖನಿ ಹಾಗೂ ಕಾಗದವನ್ನು ದೂರವಿಡುವ ಪದ್ಧತಿ ಬೆಳೆದು ಬಿಟ್ಟಿದೆ. ಆದರೆ ವಿದ್ಯಾರ್ಥಿಗಳು ಪೆನ್ನು ಹಾಗೂ ಕಾಗದದಿಂದ ದೂರ ಉಳಿದರೆ ಅಪಾಯ ಕಟ್ಟಿಟ್ಟ ಬುತ್ತಿ. ತಂತ್ರಜ್ಞಾನ ನಮ್ಮ ಮನಸ್ಥಿತಿಯನ್ನು ಬದಲಿಸಿಬಿಡುತ್ತದೆ. ಮೆದುಳನ್ನು ಗೂಗಲ್ ಆಗಿ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಎಲ್ಲ ಕೆಲಸಕ್ಕೂ ಕಂಪ್ಯೂಟರ್‌ಗಳನ್ನೇ ಅವಲಂಬಿಸುತ್ತಾ ಹೋದರೆ ಮಾನಸಿಕವಾಗಿ ಕುಗ್ಗಬೇಕಾಗುತ್ತದೆ. ಮೊಬೈಲ್‍ನಂತಹ ತಂತ್ರಜ್ಞಾನಗಳ ಬಳಕೆ ಬೇಕಾದರೂ ಅದು ಮಿತಿ ಮೀರಬಾರದು ಎಂದರು.

ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ವಿಡಿಯೊ ಮೂಲಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾನಸ ಗಂಗೋತ್ರಿ ವಾಣಿಜ್ಯ ವಿಭಾಗ ಸಂದರ್ಶಕ ಪ್ರಾಧ್ಯಾಪಕ ಎ. ಸುರೇಶ್, ಕಾಲೇಜು ಆಡಳಿತ ಮಂಡಳಿ ಸದಸ್ಯ ಪಿ.ಎಸ್. ದೇವರಾಜ್, ಪರೀಕ್ಷಾ ಮಂಡಳಿ ಸದಸ್ಯ ಪುಟ್ಟರಾಜು, ಶಿವಣ್ಣಗೌಡ, ಎಂ.ಬಿ. ಇರ್ಷಾದ್, ಪಾಲಾಕ್ಷ, ಪ್ರಾಂಶುಪಾಲ ಟಿ.ಆರ್. ಮಹೇಂದ್ರಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.