ADVERTISEMENT

ಎಸ್‍ಸಿಪಿ-ಟಿಎಸ್‍ಪಿ ಅನುದಾನ ವರ್ಗಾವಣೆಗೆ ವಿರೋಧ

ಸರ್ಕಾರ ನಿರ್ಧಾರ ವಾಪಸ್ ಪಡೆಯಲಿ: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 14:26 IST
Last Updated 17 ಸೆಪ್ಟೆಂಬರ್ 2019, 14:26 IST
ಎಚ್‌.ಕೆ.ಕುಮಾರಸ್ವಾಮಿ
ಎಚ್‌.ಕೆ.ಕುಮಾರಸ್ವಾಮಿ   

ಹಾಸನ: ಪರಿಶಿಷ್ಟ ಜಾತಿ, ಪಂಗಡ, ಗಿರಿಜನರ ಉಪ ಯೋಜನೆ ( ಎಸ್‍ಸಿಪಿ - ಟಿಎಸ್‍ಪಿ) ಗೆ ಮೀಸಲಿರಿಸಿರುವ ₹ 39,444 ಕೋಟಿ ಮೊತ್ತದಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಮೊತ್ತವನ್ನು ಪ್ರವಾಹ ಸಂತಸ್ತರ ಪರಿಹಾರ ಕಾರ್ಯಗಳಿಗೆ ಸರ್ಕಾರ ಬಳಸಿಕೊಳ್ಳಲು ನಿರ್ಧರಿಸಿರುವುದನ್ನು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಖಂಡಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಎಸ್‍ಸಿಪಿ - ಟಿಎಸ್‍ಪಿ ರಾಜ್ಯ ಪರಿಷತ್ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿರುವುದು ತಪ್ಪು. ಇದು ಕಾನೂನಿನ ಉಲ್ಲಂಘನೆ ಆಗುತ್ತದೆ. 39 ಇಲಾಖೆಗಳು ಪರಿಶಿಷ್ಟರ ಶ್ರೇಯೋಭಿವೃದ್ಧಿಗೆ ಖರ್ಚು ಮಾಡಬೇಕಾದ ಮೊತ್ತವನ್ನು ಪ್ರವಾಹ ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ಬಳಸುವುದನ್ನು ದಲಿತ ಸಂಘನೆಗಳು ವಿರೋಧಿಸಿವೆ. ಸರ್ಕಾರ ತನ್ನ ನಿರ್ಧಾರ ಹಿಂತೆಗೆದುಕೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಸಿ.ಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ತೀರ್ಮಾನಗಳಲ್ಲಿ ಯಾವುದೂ ಹೊಸದಿಲ್ಲ. ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಜೂನ್ 4 ರಂದು ನಡೆದ ಎಸ್‍ಸಿಪಿ - ಟಿಎಸ್‍ಪಿ ಪರಿಷತ್ ಸಭೆಯಲ್ಲಿ ಕೈಗೊಂಡಿದ್ದ ತೀರ್ಮಾನಗಳನ್ನೇ ಪುನರಾವರ್ತಿಸಲಾಗಿದೆ. 2007 -08 ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವನಾಗಿದ್ದಾಗಲೇ ಎಸ್‌ಸಿ, ಎಸ್‌ಟಿ ಸಮುದಾಯದ ದೇವದಾಸಿಯವರಿಗೆ 500 ಪಿಂಚಣಿ ಜಾರಿಗೊಳಿಸಿದ್ದೆ. ಎಸ್‌ಸಿ, ಎಸ್‌ಟಿ ರೈತರಿಗೆ ಪಾಲಿಹೌಸ್, ಹನಿ ನೀರಾವರಿಗೆ ಶೇಕಡಾ 90 ರಷ್ಟು ಸಹಾಯಧನ ಜಾರಿಯಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಸ್‌ಟಿ, ಎಸ್‌ಟಿ ಯುವ ಜನರು ಕೆಐಎಡಿಬಿಯಲ್ಲಿ ನಿವೇಶನ ಖರೀದಿಗೆ ಸಹಾಯಧನ ಮೊತ್ತವನ್ನು ಶೇಕಡಾ 50 ರಿಂದ 75 ಕ್ಕೆ ಏರಿಕೆ ಮಾಡಲಾಗಿತ್ತು. ಅದನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದ ಎಚ್.ಕೆ.ಕುಮಾರಸ್ವಾಮಿ ಅವರು, ರಾಜಕೀಯ ಸ್ಟಂಟ್ ಮಾಡುವ ಬದಲು ಬಿಜೆಪಿ ಸರ್ಕಾರ ಪರಿಶಿಷ್ಟರ ಶ್ರೇಯೋಭಿವೃದ್ಧಿಗೆ ಶ್ರಮಿಸಲಿ ಎಂದು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.