ADVERTISEMENT

ಹಾಸನ: ಜಿಲ್ಲೆಯಲ್ಲಿ ಎರಡನೇ ವಾರಾಂತ್ಯ ಕರ್ಫ್ಯೂ

ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ – ಮದ್ಯದಂಗಡಿ ಬಂದ್‌; ಜಾತ್ರೆ– ಉತ್ಸವಗಳಿಗೆ ಅವಕಾಶ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 8:35 IST
Last Updated 15 ಜನವರಿ 2022, 8:35 IST
ಸಕಲೇಶಪುರದಲ್ಲಿ ಶಾಸಕ ಎಚ್‌.ಕೆ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಕೋವಿಡ್‌ ಮುನ್ನೆಚ್ಚರಿಕೆ ಸಂಬಂಧ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಯಿತು
ಸಕಲೇಶಪುರದಲ್ಲಿ ಶಾಸಕ ಎಚ್‌.ಕೆ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಕೋವಿಡ್‌ ಮುನ್ನೆಚ್ಚರಿಕೆ ಸಂಬಂಧ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಯಿತು   

ಹಾಸನ: ಕೋವಿಡ್‌ 3ನೇ ಅಲೆ ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಾದ್ಯಂತ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ. 14ರ ರಾತ್ರಿ 10 ಗಂಟೆಯಿಂದ ಜ. 17ರ ಬೆಳಿಗ್ಗೆ 5 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರಲಿದೆ. ಎಪಿಎಂಸಿ, ದಿನಸಿ ಅಂಗಡಿ, ಆಹಾರ ಮತ್ತು ವೈದ್ಯಕೀಯ ಸೇವೆ ಹೊರತು ಪಡಿಸಿ ಬೇರೆ ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳು ಬಂದ್‌ ಮಾಡಲು ಸೂಚಿಸಲಾಗಿದೆ ಎಂದರು.

ಕಾರ್ಖಾನೆಗಳು ಮಾತ್ರ ನಡೆಯಲಿವೆ. ಬೇರೆ ರೀತಿಯ ಉದ್ಯಮಗಳಿಗೆ ಅವಕಾಶ ಇಲ್ಲ. ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆಯವರೆಗೆ ಜಿಲ್ಲೆಯಲ್ಲಿ ಮದ್ಯ ಮಾರಾಟ ಸಂಪೂರ್ಣ ಬಂದ್ ಮಾಡಲಾಗುವುದು. ಎಪಿಎಂಸಿಯಲ್ಲಿ ಹೋಲ್‌ಸೆಲ್‌ ವ್ಯಾಪಾರಿಗಳಿಗೆ ಮಾತ್ರವೇ ಅವಕಾಶವಿದೆ ಎಂದು ತಿಳಿಸಿದರು.

ADVERTISEMENT

ಸಂಕ್ರಾತಿ ಹಬ್ಬಕ್ಕೆ ವಿಶೇಷ ನಿರ್ಬಂಧ ಏನು ಇಲ್ಲ. ಈಗಾಗಲೇ ಇರುವಂತೆ 50ಕ್ಕಿಂತ ಹೆಚ್ಚಿನ ಜನ ಸೇರಬಾರದು ಎಂಬುದು ಮುಂದುವರೆಯಲಿದೆ. ವಾರಾಂತ್ಯ ಕರ್ಫ್ಯೂ ಇರುವುದರಿಂದ ಜನ ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದು. ಯಾವುದೇ ವಿಶೇಷ ಆಚರಣೆಗೆ ನಡೆಸಬಾರದು ಎಂದು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಜಾತ್ರೆ, ಉತ್ಸವಗಳಿಗೆ ಅವಕಾಶ ಇಲ್ಲ. ಚನ್ನರಾಯಪಟ್ಟಣದಲ್ಲಿ ಜಾತ್ರೆ ತಡೆಹಿಡಿದಿದ್ದೇವೆ. ಆದರೂ ಕೆಲವು ಅಂಗಡಿಗಳು ಇದ್ದವು ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಸರ್ಕಾರದ ಅನುಮತಿ ಇಲ್ಲದ ಸಂದರ್ಭದಲ್ಲಿ ಜಾತ್ರೆ ಮುಂತಾದವನ್ನು ನಡೆಸುವುದು ಕಾನೂನು ಬಾಹಿರ, ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕಳೆದ ವಾರದಲ್ಲಿ ಎಲ್ಲಾ ಕಡೆ ಉತ್ತಮ ರೀತಿಯ ಬೆಂಬಲ ವ್ಯಕ್ತವಾಗಿದೆ. ನಾನು ಹೊರಗಡೆ ಹೋಗಿ ನೋಡಿದ್ದೇನೆ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಕೋವಿಡ್‌ ತಡೆಯುವುದು ಸಾರ್ವಜನಿಕರಾಗಿ ಎಲ್ಲರಿಗೂ ಜವಾಬ್ದಾರಿ ಇದೆ. ಹಾಗಾಗಿ ಸರ್ಕಾರದ ನಿಯಮಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.