ADVERTISEMENT

ಎಲ್ಲರ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಆಯ್ಕೆ

ನಮ್ಮಲ್ಲಿ ಯಾವುದೇ ಗೊಂದಲವಿಲ್ಲ: ಶಾಸಕ ಎಚ್‌.ಡಿ. ರೇವಣ್ಣ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 4:32 IST
Last Updated 30 ಜನವರಿ 2023, 4:32 IST

ಹಾಸನ: ’ಎಚ್‌.ಡಿ. ಕುಮಾರಸ್ವಾಮಿ ಜೊತೆ ದೇವೇಗೌಡರು, ಶಾಸಕರು, ನಾಯಕರು ಸೇರಿ, ಕಾರ್ಯಕರ್ತರ ಅಭಿಪ್ರಾಯ ಪಡೆದು ಉಳಿದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳಲಿದೆ‘ ಎಂದು ಶಾಸಕ ಎಚ್.ಡಿ. ರೇವಣ್ಣ ಸ್ಪಷ್ಟಪಡಿಸಿದರು.

ತಮ್ಮ ಮಕ್ಕಳ ಹೇಳಿಕೆ ಹಾಗೂ ಈ ವಿಷಯವಾಗಿ ಕುಮಾರಸ್ವಾಮಿ ಭಾವುಕರಾದ ಬೆನ್ನಲ್ಲೇ ನಗರದ ಸಂಸದರ ನಿವಾಸದಲ್ಲಿ ಭಾನುವಾರ ಪ್ರತಿಕ್ರಿಯೆ ನೀಡಿದ ರೇವಣ್ಣ, ’ನಾನು ಬದುಕಿರುವವರೆಗೆ ನಾನು ಮತ್ತು ಕುಮಾರಸ್ವಾಮಿ ಹೊಡೆದಾಡುವ ಪ್ರಶ್ನೆಯೇ ಇಲ್ಲ. ದೇವೇಗೌಡರ ಕಣ್ಣ ಮುಂದೆ ಜೆಡಿಎಸ್‌ ಸರ್ಕಾರ ತರುವುದೇ ಕುಮಾರಸ್ವಾಮಿ ಅವರ ಮುಖ್ಯ ಉದ್ದೇಶ‘ ಎಂದು ತಿಳಿಸಿದರು.

’ರಾಜ್ಯದಲ್ಲಿ ಕೊಟ್ಟ ಮಾತಿನಂತೆ ನಡೆಯುವ ರಾಜಕಾರಣಿ ಇದ್ದರೆ ಅದು ಕುಮಾರಸ್ವಾಮಿ ಮಾತ್ರ‘ ಎಂದು ಹೇಳಿದ ಅವರು, ’ಈ ಹಿಂದೆ ಸರ್ಕಾರ ರಚಿಸಿದ ನಂತರ ಕೊಟ್ಟ ಮಾತಿನಂತೆ ಸಾಲಮನ್ನಾ ಮಾಡಿದರು. ನಮಗೆ ಬಹುಮತ ಬಂದಿಲ್ಲ. ಸಾಲಮನ್ನಾ ಮಾಡಲು ಆಗುವುದಿಲ್ಲ ಎನ್ನಬಹುದಿತ್ತು. ಆದರೆ, ಕುಮಾರಸ್ವಾಮಿ ಕೊಟ್ಟ ಮಾತಿನಂತೆ ನಡೆದುಕೊಂಡರು‘ ಎಂದು ನೆನಪಿಸಿದರು.

ADVERTISEMENT

’ರಾಜ್ಯದಲ್ಲಿ ಹಾಗೂ ಹಾಸನ ಜಿಲ್ಲೆಯಲ್ಲಿ ಹೆಚ್ಚು ಐಟಿಐ, ಡಿಪ್ಲೊಮಾ, ಪದವಿ, ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜು, ಸರ್ಕಾರಿ ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳನ್ನು ಸ್ಥಾಪನೆ ಮಾಡಲು ಕುಮಾರಸ್ವಾಮಿ ಬರಬೇಕಾಯಿತು‘ ಎಂದು ತಿರುಗೇಟು ನೀಡಿದರು.

’ನಮ್ಮ ರಾಷ್ಟ್ರದ ಗೃಹ ಮಂತ್ರಿ ಬಂದು ಜೆಡಿಎಸ್ ಪಕ್ಷದ ಹೆಸರು ಹೇಳುತ್ತಾರೆ. ನಮಗೆ ಶಕ್ತಿ ಇಲ್ಲ ಎಂದ ಮೇಲೆ ನಮ್ಮ ಪಕ್ಷದ ಹೆಸರು ಏಕೆ ಹೇಳಬೇಕು‘ ಎಂದು ಪ್ರಶ್ನಿಸಿದ ಅವರು, ’ಶಾ ಅವರಿಗೆ ಮನವಿ ಮಾಡುತ್ತೇನೆ. ನಿಮ್ಮ ಪಕ್ಷದ ಕೆಲವರ ಮೇಲೆ ಕ್ರಮ ಕೈಗೊಳ್ಳಲು ನಿಮಗೆ ತಾಕತ್ತಿದೆಯೇ‘ ಎಂದು ಸವಾಲು ಹಾಕಿದರು.

’ಹಿಂಬಾಗಿಲ ರಾಜಕಾರಣ ಮಾಡಿಲ್ಲ‘
’ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ತಮ್ಮ ಮಕ್ಕಳನ್ನು ಚುನಾವಣೆ ನಿಲ್ಲಿಸುವುದನ್ನು ಬಿಡಲಿ. ನಮ್ಮ ಮಕ್ಕಳೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಪ್ರಜ್ವಲ್‌, ಸೂರಜ್‌ ರಾಜೀನಾಮೆ ಕೊಡಿಸುತ್ತೇನೆ‘ ಎಂದು ರೇವಣ್ಣ ಸವಾಲು ಹಾಕಿದರು.

’ನಾವೇನು ಹಿಂಬಾಗಿಲಿನಿಂದ ರಾಜಕಾರಣ ಮಾಡುತ್ತಿಲ್ಲ. ನಿಖಿಲ್‌ ಕುಮಾರಸ್ವಾಮಿ ಸ್ವಂತ ಶಕ್ತಿಯ ಮೇಲೆ ಗೆಲ್ಲುತ್ತಾನೆ. ಅನಿತಾ ಕುಮಾರಸ್ವಾಮಿ ಜನರಿಂದ ಆಯ್ಕೆಯಾದವರು‘ ಎಂದರು.

’ಕಾಂಗ್ರೆಸ್ ನಾಯಕರಿಗೆ ಮಾನ ಮರ್ಯಾದೆ ಇದ್ದರೆ ಬಿಜೆಪಿ ಜೊತೆ ವಿಲೀನ ಮಾಡಿಕೊಳ್ಳಲಿ. ಜೆಡಿಎಸ್‌ ವಿಸರ್ಜಿಸಲಿ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ಹೇಳಿದ್ದಾರೆ. ಏಕೆ ಅವರು ಎರಡು ವರ್ಷದಿಂದ ಜೆಡಿಎಸ್‌ ಬಾಗಿಲು ತಟ್ಟುತ್ತಿದ್ದಾರೆ‘ ಎಂದು ಪ್ರಶ್ನಿಸಿದ ಅವರು, ’ಕಾಂಗ್ರೆಸ್‌ನವರು ಅಧಿಕಾರಕ್ಕಾಗಿ ಏನು ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಕೆ.ಎಚ್‌. ಮುನಿಯಪ್ಪ ಅವರನ್ನು ಸೋಲಿಸಿದ್ದು ಯಾರು‘ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.