ADVERTISEMENT

ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ತನಿಖೆ ನಡೆಸಿ ನ್ಯಾಯ ಒದಗಿಸಲು ರೈತ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 14:30 IST
Last Updated 4 ಜುಲೈ 2019, 14:30 IST
ಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಮಾನವ ಹಕ್ಕು, ಭ್ರಷ್ಟಾಚಾರ ನಿರ್ಮೂಲನ ಸಮಿತಿ ಸದಸ್ಯರು ಹಾಸನ ಡಿವೈಎಸ್‌ಪಿ ಪುಟ್ಟಸ್ವಾಮಿಗೌಡರಿಗೆ ಮನವಿ ಸಲ್ಲಿಸಿದರು.
ಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಮಾನವ ಹಕ್ಕು, ಭ್ರಷ್ಟಾಚಾರ ನಿರ್ಮೂಲನ ಸಮಿತಿ ಸದಸ್ಯರು ಹಾಸನ ಡಿವೈಎಸ್‌ಪಿ ಪುಟ್ಟಸ್ವಾಮಿಗೌಡರಿಗೆ ಮನವಿ ಸಲ್ಲಿಸಿದರು.   

ಹಾಸನ: ದುದ್ದ ಹೋಬಳಿ ಗಾಡೇನಹಳ್ಳಿ ಬಳಿಯ ಲೊಯೆಲಾ ವಸತಿ ಶಾಲೆಗೆ ಪ್ರವೇಶ ಪಡೆದಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಲಕ್ಷ್ಮೀ ಕೊಠಡಿಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚಿಕ್ಕ ಬಾಣಾವರದ ಲಕ್ಷ್ಮೀ (15) ಇಪ್ಪತ್ತು ದಿನಗಳ ಹಿಂದೆ ಹಾಸ್ಟೆಲ್‌ ಸೇರಿದ್ದಳು. ಆದರೆ, ಬುಧವಾರ ಮಧ್ಯಾಹ್ನ ತನ್ನ ಸಹಪಾಠಿಗಳು ಹೊರ ಹೋಗಿದ್ದ ವೇಳೆ ಕೊಠಡಿಯಲ್ಲೇ ವೇಲ್‌ನಿಂದ ನೇಣಿಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಶವ ಪರೀಕ್ಷೆ ಬಳಿಕ ಪೋಷಕರಿಗೆ ಹಸ್ತಾಂತರಿಸಲಾಯಿತು.

ಶಾಲೆಯ ಮೂರನೇ ಮಹಡಿಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದ ದಿಕ್ಕನ್ನು ಬದಲಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.

‘ಘಟನೆ ನಡೆದಾಗ ಸಿಸಿಟಿವಿ ಕ್ಯಾಮೆರಾದ ದಿಕ್ಕನ್ನು ಬದಲಿಸಲಾಗಿದೆ. ಹಾಗಾಗಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು. ಪ್ರತಿ ಶಾಲೆಯಲ್ಲಿ ಸಹಾಯವಾಣಿ ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಮಾನವ ಹಕ್ಕು, ಭ್ರಷ್ಟಾಚಾರ ನಿರ್ಮೂಲನ ಸಮಿತಿ ಜಿಲ್ಲಾಧ್ಯಕ್ಷ ಜೆ.ಎಸ್.ಸುರೇಶ್‌ ನೇತೃತ್ವದಲ್ಲಿ ಡಿವೈಎಸ್‌ಪಿ ಪುಟ್ಟಸ್ವಾಮಿಗೌಡರಿಗೆ ಮನವಿ ಸಲ್ಲಿಸಲಾಯಿತು.

ADVERTISEMENT

ನಿಯೋಗದಲ್ಲಿ ಕಾರ್ಯಾಧ್ಯಕ್ಷ ವಿ.ಎಲ್‌.ಪುನೀತ್‌, ಉಪಾಧ್ಯಕ್ಷ ವೈ.ಆರ್‌.ಪಾಂಡು, ನಗರ ಉಪಾಧ್ಯಕ್ಷ ಕೃಷ್ಣೇಗೌಡ, ಸದಸ್ಯರಾದ ಎನ್‌.ಸುರೇಶ್‌, ವಕೀಲ ಪ್ರದೀಪ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.