ADVERTISEMENT

ಕುಂದೂರು ಮಠದಲ್ಲಿ ಶಮಿಪೂಜೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 3:24 IST
Last Updated 3 ಅಕ್ಟೋಬರ್ 2025, 3:24 IST
ಚನ್ನರಾಯಪಟ್ಟಣ ತಾಲ್ಲೂಕು ಶ್ರೀಕ್ಷೇತ್ರ ಕುಂದೂರು ಆದಿಚುಂಚನಗಿರಿ ಮಠದಲ್ಲಿ ಕ್ಷೇತ್ರದ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಅವರು ಗುರುವಾರ ಶಮಿಪೂಜೆ ನೆರವೇರಿಸಿದರು
ಚನ್ನರಾಯಪಟ್ಟಣ ತಾಲ್ಲೂಕು ಶ್ರೀಕ್ಷೇತ್ರ ಕುಂದೂರು ಆದಿಚುಂಚನಗಿರಿ ಮಠದಲ್ಲಿ ಕ್ಷೇತ್ರದ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಅವರು ಗುರುವಾರ ಶಮಿಪೂಜೆ ನೆರವೇರಿಸಿದರು   

ಚನ್ನರಾಯಪಟ್ಟಣ: ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿ ಶ್ರೀಕ್ಷೇತ್ರ ಕುಂದೂರು ಆದಿಚುಂಚನಗಿರಿ ಮಠದಲ್ಲಿ ಕ್ಷೇತ್ರದ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಗುರುವಾರ ಶಮಿ ಪೂಜೆ ನೆರವೇರಿಸಿದರು.

ಪಟ್ಟದ ಕುದುರೆ, ಗೋವುಗಳೊಂದಿಗೆ ಕ್ಷೇತ್ರದ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಿಂದ ಅಧಿದೇವತೆಗಳಾದ ರಂಗನಾಥಸ್ವಾಮಿ, ಮೆಳೆಯಮ್ಮ ದೇವಿಯನ್ನು ನಾದಸ್ವರದೊಂದಿಗೆ ಮೆರವಣಿಗೆ ಮೂಲಕ ಸುಬ್ರಹ್ಮಣ್ಯೇಶ್ವರಸ್ವಾಮಿ ದೇಗುಲದ ಮುಂಭಾಗ ಹಾಕಿದ್ದ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು.

ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಮಂಗಳವಾದ್ಯದೊಂದಿಗೆ ಬರಮಾಡಿಕೊಳ್ಳಲಾಯಿತು. ಮಠದ ಈಶಾನ್ಯ ದಿಕ್ಕಿನಲ್ಲಿರುವ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಶಮಿವೃಕ್ಷದವರೆಗೆ ಮೆರವಣಿಗೆಯಲ್ಲಿ ಸ್ವಾಮೀಜಿ ಅವರನ್ನು ಕರೆತರಲಾಯಿತು. ಮಠದ ಸಂಪ್ರದಾಯದಂತೆ ನಿರ್ಮಲಾನಂದನಾಥ ಸ್ವಾಮೀಜಿ, ಆಭರಣ ಧರಿಸಿದ್ದರು. ಮಂಗಳವಾದ್ಯ, ವೀರಗಾಸೆಯೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಇವರೊಂದಿಗೆ ಆದಿಚುಂಚನಗಿರಿ ಶಾಖಾಮಠಾಧೀಶ ಶಂಭುನಾಥಸ್ವಾಮಿ, ಮಠಾಧೀಶರಾದ ಚೈತನ್ಯನಾಥ ಸ್ವಾಮೀಜಿ, ಕೀರ್ತಿನಾಥಸ್ವಾಮೀಜಿ, ಶ್ರೀ ಶೈಲನಾಥಸ್ವಾಮೀಜಿ ಇದ್ದರು.

ADVERTISEMENT

ಬನ್ನಿಮಂಟಪದಲ್ಲಿದ್ದ ಸುಬ್ರಹ್ಮಣ್ಯೇಶ್ವರಸ್ವಾಮಿ ಮತ್ತು ರಂಗನಾಥಸ್ವಾಮಿಗೆ ಪೂಜೆ ಸಲ್ಲಿಸಿದರು. ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಸ್ವಾಮೀಜಿ, ಬನ್ನಿ ಮರದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ಬನ್ನಿ ಕಡಿದರು. ಭಕ್ತರು ಬನ್ನಿ ಸ್ವೀಕರಿಸಿದರು. ಬನ್ನಿ ಮರದ ಸುತ್ತ ಪ್ರದಕ್ಷಿಣೆ ಹಾಕಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧುಕರಡೆ, ಪರಿಸರವಾದಿ ಸಿ.ಎನ್. ಅಶೋಕ್ ಭಕ್ತರು ಮತ್ತು ಆದಿಚುಂಚನಗಿರಿ, ಬಿಜಿಎಸ್ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಪಾಲ್ಗೊಂಡಿದ್ದರು. ಗಾಯಕ ರೋಹನ್ ಅಯ್ಯರ್ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ನಾಡಿನೆಲ್ಲೆಡೆ ವಿಜಯದಶಮಿ ಆಚರಿಸಲಾಗುತ್ತಿದೆ. ಅಜ್ಞಾನ ತೊಲಗಿ ಎಲ್ಲರಲ್ಲಿ ಸುಜ್ಞಾನ ಉಂಟಾಗಬೇಕು’ ಎಂದು ಹೇಳಿದರು.

ನಂತರ ಮೆಳೆಯಮ್ಮ ದೇವಸ್ಥಾನಕ್ಕೆ ತೆರಳಿ ಆದಿಶಕ್ತಿ ಮೆಳೆಯಮ್ಮದೇವಿಗೆ ಷೋಡಶೋಪಚಾರ ಪೂಜೆ ಸಲ್ಲಿಸಿದ ಬಳಿಕ ಬಾಲಗಂಗಾಧರನಾಥ ಸ್ವಾಮೀಜಿ, ಪರದೇಶಿರಾಮಯ್ಯ ಸ್ವಾಮೀಜಿ ಹಾಗು ನವದುರ್ಗೆಯರಿಗೆ ಪೂಜೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.