ADVERTISEMENT

ಶಿರಾಡಿ ರಸ್ತೆ ಬಂದ್ ಮಾಡಲ್ಲ; ಸಕಲೇಶಪುರಕ್ಕೆ ಸಚಿವ ಸಿ.ಸಿ ಪಾಟೀಲ ಭೇಟಿ

ಸಕಲೇಶಪುರದ ಬಳಿ ಭೂಕುಸಿತ ಪ್ರದೇಶಕ್ಕೆ ಸಚಿವ ಸಿ.ಸಿ. ಪಾಟೀಲ ಭೇಟಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 10:16 IST
Last Updated 11 ಜುಲೈ 2022, 10:16 IST
ಸಕಲೇಶಪುರದ ಬಳಿ ಭೂಕುಸಿತ ಪ್ರದೇಶಕ್ಕೆ ಸಚಿವ ಸಿ.ಸಿ. ಪಾಟೀಲ ಭೇಟಿ
ಸಕಲೇಶಪುರದ ಬಳಿ ಭೂಕುಸಿತ ಪ್ರದೇಶಕ್ಕೆ ಸಚಿವ ಸಿ.ಸಿ. ಪಾಟೀಲ ಭೇಟಿ   

ಹಾಸನ: ಬೆಂಗಳೂರು- ಮಂಗಳೂರು ಸಂಪರ್ಕದ ಪ್ರಮುಖ ಹೆದ್ದಾರಿಯಾಗಿರುವ ಶಿರಾಡಿ ಘಾಟಿ ರಸ್ತೆ ಬಂದ್ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ‌ ಸ್ಪಷ್ಟಪಡಿಸಿದರು.

ಸಕಲೇಶಪುರ ತಾಲ್ಲೂಕಿನ ದೋಣಿಗಾಲ್ ಸಮೀಪದ ಹೆದ್ದಾರಿ ಕೆಳಭಾಗದ ಭೂಕುಸಿತದ ಸ್ಥಳ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ದಿನ 30 ಸಾವಿರ ವಾಹನಗಳ ಓಡಾಟ ಇರುವ ಕಾರಣ ಬಂದ್ ಮಾಡದೆ ಏಕಮುಖ ಬಂದ್ ಮಾಡಿ ಕಾಮಗಾರಿ ಮಾಡುವ ಚಿಂತನೆ ಇದೆ ಎಂದರು‌.

ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನೆಲಮಂಗಲದಿಂದ ಹಾಸನದವರೆಗೆ ಅಚ್ಚುಕಟ್ಟಾಗಿ ಕಾಮಗಾರಿ ಮಾಡಲಾಗಿದೆ. ಆದರೆ ಹಾಸನದಿಂದ ಸಕಲೇಶಪುರ ಮಾರ್ಗದ ರಸ್ತೆ ಹಲವು ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿದೆ ಅಲ್ಲದೆ ಕಳಪೆ ಕಾಮಗಾರಿ ನಡೆದಿರುವುದು ವೀಕ್ಷಿಸಿದ್ದೇನೆ ಎಂದು ತಿಳಿಸಿದರು.

ADVERTISEMENT

ಮಂಗಳೂರು ಸಂಪರ್ಕದ ಪ್ರಮುಖ ರಸ್ತೆಯಾದ ಕಾರಣ ಬಂದ್ ಮಾಡದೇ ರಸ್ತೆ ಕಾಮಗಾರಿ ನಿರ್ವಹಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ ಎಂದರು‌.

ಕೋವಿಡ್ ಹಾಗೂ ಮಳೆಯ ಕಾರಣ ಕಾಮಗಾರಿ ವಿಳಂಬವಾಗಿದೆ. ಕೆಲವೆಡೆ ಕಳಪೆ ಕಾಮಗಾರಿ ನಡೆದಿದೆ. ಸಮರ್ಪಕವಾಗಿ ಕಾಮಗಾರಿ ನಡೆಸಲು ಸೂಚನೆ ನೀಡಿದ್ದೇನೆ ಎಂದರು.

ಈ ಹೆದ್ದಾರಿ ಕಾಮಗಾರಿ ವಿಚಾರವಾಗಿ ವಿಧಾನಸಭೆಯಲ್ಲಿ ಸಹ ಪ್ರಸ್ತಾಪವಾದ ಕಾರಣ ಖುದ್ದು ವೀಕ್ಷಣೆಗೆ ಬಂದಿದ್ದೇನೆ. ಕಳಪೆ ಕಾಮಗಾರಿ ನಡೆಯಲು ಅವಕಾಶ ನೀಡುವುದಿಲ್ಲ.

2024 ರ‌ ಮಾರ್ಚ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಗುತ್ತಿಗೆದಾರರು ಭರವಸೆ ನೀಡಿದ್ದಾರೆ ಎಂದರು.

ಹೆದ್ದಾರಿ ಕಾಮಗಾರಿ ನೆಪದಲ್ಲಿ ಮರಳು ಅಕ್ರಮ ಸಾಗಾಣಿಕೆ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಸಚಿವ‌ ಹಾಲಪ್ಪ ಆಚಾರ್ ಅವರ ಬಳಿ ಮಾತನಾಡಿದ್ದು, ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದರು.

ಗಡ್ಕರಿ ಗಮನಕ್ಕೆ ತರುವೆ

ಹೆದ್ದಾರಿ ಕಾಮಗಾರಿ ವಿಷಯದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75 ಕಾಮಗಾರಿ ವಿಚಾರವಾಗಿಯೂ ಗಡ್ಕರಿ ಅವರ ಗಮನಕ್ಕೆ ತರಲಾಗುವುದು ಎಂದು ಸಿ.ಸಿ. ಪಾಟೀಲ‌ ತಿಳಿಸಿದರು.

ಹೆದ್ದಾರಿ ಕಾಮಗಾರಿ ವೀಕ್ಷಣೆ ಹಾಗೂ ಗುಣಮಟ್ಟ ತಪಾಸಣೆಗೆ ಅಧಿಕಾರಿಯನ್ನು ಉಸ್ತುವಾರಿಯಾಗಿ ನೇಮಿಸಲಾಗುವುದು. ಯಾವುದೇ ಸಾರ್ವಜನಿಕ ದೂರು ಹಾಗೂ ಇತರೆ ಹೆದ್ದಾರಿ ಕಾಮಗಾರಿ ಸಮಸ್ಯೆ ಬಗ್ಗೆ ಅವರು ಗಮನ ಹರಿಸಲಿದ್ದಾರೆ ಎಂದರು‌‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.