ADVERTISEMENT

ಶಿಸ್ತು, ಸಹನೆಯಿಂದ ಗುರಿ ಸಾಧನೆ ಸಾಧ್ಯ 

ಸಿಇಟಿ ತರಬೇತಿ ಕಾರ್ಯಕ್ರಮದಲ್ಲಿ ಚುಂಚಶ್ರೀ ಅಭಿಮತ

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 12:33 IST
Last Updated 4 ಜುಲೈ 2018, 12:33 IST
ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಬಿಜಿಎಸ್ ಪಿಯು ಕಾಲೇಜು ವತಿಯಿಂದ ಆಯೋಜಿಸಿದ್ದ ಸಿಇಟಿ, ಎನ್‍ಇಇಟಿ, ಜೆಇಇ ತರಬೇತಿ, ಪೋಷಕರ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕ ಗಳಿಸಿದ್ದ ಸಂಸ್ಥೆಯ ವಿದ್ಯಾರ್ಥಿಗಳನ್ನು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸನ್ಮಾನಿಸಿದರು.
ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಬಿಜಿಎಸ್ ಪಿಯು ಕಾಲೇಜು ವತಿಯಿಂದ ಆಯೋಜಿಸಿದ್ದ ಸಿಇಟಿ, ಎನ್‍ಇಇಟಿ, ಜೆಇಇ ತರಬೇತಿ, ಪೋಷಕರ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕ ಗಳಿಸಿದ್ದ ಸಂಸ್ಥೆಯ ವಿದ್ಯಾರ್ಥಿಗಳನ್ನು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸನ್ಮಾನಿಸಿದರು.   

ಹಾಸನ: ವಿದ್ಯಾರ್ಥಿಗಳು ಶಿಸ್ತು, ಸಹನೆ ಮತ್ತು ಆತ್ಮವಿಶಾಸವನ್ನು ಮೈಗೂಡಿಸಿಕೊಂಡಾಗ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ಸಿಇಟಿ, ಎನ್‍ಇಇಟಿ, ಜೆಇಇ ತರಬೇತಿ, ಪೋಷಕರ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ವಿದ್ಯಾರ್ಥಿಗಳಿಗೆ ಏಕಾಗ್ರತೆ ಬಹಳ ಮುಖ್ಯ. ಸಿನಿಮಾವನ್ನು ಯಾವ ರೀತಿ ಮನಸ್ಸಿಟ್ಟು ನೋಡುತ್ತೇವೆಯೋ ಅದೇ ರೀತಿ ವಿದ್ಯಾಭ್ಯಾಸವನ್ನೂ ಮಾಡಬೇಕು. ದೈಹಿಕ, ಮಾನಸಿಕ, ಆರ್ಥಿಕ ಮತ್ತು ಆಧ್ಯಾತ್ಮಿಕ ಸ್ವಾವಲಂಬನೆ ಪಡೆಯುವುದೇ ಪರಿಪೂರ್ಣ ವ್ಯಕ್ತಿತ್ವದ ಗುರಿ. ಆ ನಿಟ್ಟಿನಲ್ಲಿ ನಮ್ಮ ಸಾಧನೆ ಇರಬೇಕು. ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ಪಾಪದ ಕೃತ್ಯಕ್ಕೆ ಮುಂದಾಗಬಾರದು ಎಂದು ಕಿವಿಮಾತು ಹೇಳಿದರು.

ADVERTISEMENT

ಪೋಷಕರ ಶ್ರಮ, ತ್ಯಾಗ ಹಾಗೂ ಸಮಯವನ್ನು ಒಂದಿಷ್ಟೂ ವ್ಯರ್ಥವಾಗಲು ಬಿಡಬಾರದು. ಬದುಕಿನ ಗುರಿ ಸ್ಪಷ್ಟವಾಗಿದ್ದರೆ ಏಕಾಗ್ರತೆ, ಶಿಸ್ತು ತನ್ನಿಂತಾನೇ ರೂಪುಗೊಳ್ಳುತ್ತದೆ. ವಿದ್ಯಾರ್ಥಿಗಳು ಜ್ಞಾನ ಪಿಪಾಸುಗಳಾಗಬೇಕು. ಜ್ಞಾನದ ಸರಿಯಾದ ಬಳಕೆಯೇ ಶಕ್ತಿ. ವಿಜ್ಞಾನ ಸುಖ ನೀಡಿದರೆ, ಅಧ್ಯಾತ್ಮ ಸಂತೋಷ ಉಂಟು ಮಾಡುತ್ತದೆ. ಇವೆರಡರ ಸಮ್ಮಿಲನವಾದರೆ ಮಾತ್ರ ಬದುಕು ಅರ್ಥಪೂರ್ಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಎಸ್ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ್ದ ಸಂಸ್ಥೆಯ ವಿದ್ಯಾರ್ಥಿಗಳನ್ನು ಸ್ವಾಮೀಜಿ ಸನ್ಮಾನಿಸಿದರು. ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಕಬ್ಬಳಿ ಶಾಖಾ ಮಠದ ಶಿವಪುತ್ರ ಸ್ವಾಮೀಜಿ, ಮಂಗಳೂರಿನ ಬಾಸ್ಕೊ ಪಿಯು ಕಾಲೇಜು ನಿರ್ದೇಶಕ ಪ್ರೊ. ಎಸ್.ಎಸ್. ಬಾಸ್ಕೊ ಮತ್ತು ಗಣಿತ ಉಪನ್ಯಾಸಕ ಐಸಾಕ್ ವರ್ಮ ಹಾಜರಿದ್ದರು.

ಬಿಜಿಎಸ್ ಪಿಯು ಕಾಲೇಜು ಪ್ರಾಂಶುಪಾಲ ಜಿ. ಚಂದ್ರಶೇಖರ್ ಸ್ವಾಗತಿಸಿದರು, ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲ ವಿಕ್ರಮ್ ದೇವ್ ಪ್ರಭು ವಂದಿಸಿದರು, ಉಪನ್ಯಾಸಕ ಕೆ.ಆರ್. ಮಂಜುನಾಥ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.