ADVERTISEMENT

ಶ್ರವಣಬೆಳಗೊಳ: ದಶಲಕ್ಷಣ ಮಹಾಪರ್ವ ಸಂಪನ್ನ

ಶ್ರವಣಬೆಳಗೊಳದಲ್ಲಿ 10 ದಿನ ಪರ್ಯೂಷಣ ಪರ್ವ ಆಚರಣೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 5:37 IST
Last Updated 8 ಸೆಪ್ಟೆಂಬರ್ 2025, 5:37 IST
ಶ್ರವಣಬೆಳಗೊಳದ ಚಾವುಂಡರಾಯ ಸಭಾಮಂಟಪದಲ್ಲಿ ದಶ ಲಕ್ಷಣ ಮಹಾಪರ್ವದ ಕಾರ್ಯಕ್ರಮದಲ್ಲಿ ಆಚಾರ್ಯ ವರ್ಧಮಾನ ಸಾಗರ ಮಹಾರಾಜರ ಸಾನಿಧ್ಯದಲ್ಲಿ ಕ್ಷೇತ್ರದ ಚಾರುಕೀರ್ತಿ ಶ್ರೀಗಳು ಭಾಗವಹಿಸಿದ್ದರು.
ಶ್ರವಣಬೆಳಗೊಳದ ಚಾವುಂಡರಾಯ ಸಭಾಮಂಟಪದಲ್ಲಿ ದಶ ಲಕ್ಷಣ ಮಹಾಪರ್ವದ ಕಾರ್ಯಕ್ರಮದಲ್ಲಿ ಆಚಾರ್ಯ ವರ್ಧಮಾನ ಸಾಗರ ಮಹಾರಾಜರ ಸಾನಿಧ್ಯದಲ್ಲಿ ಕ್ಷೇತ್ರದ ಚಾರುಕೀರ್ತಿ ಶ್ರೀಗಳು ಭಾಗವಹಿಸಿದ್ದರು.   

ಶ್ರವಣಬೆಳಗೊಳ: ವೈರಾಗ್ಯ ಮೂರ್ತಿ ಬಾಹುಬಲಿ ಕ್ಷೇತ್ರದಲ್ಲಿ ವರ್ಷಾಯೋಗ ಚಾತುರ್ಮಾಸ್ಯ ಆಚರಿಸುವ ಆಚಾರ್ಯರಾದ ಸುವಿಧಿಸಾಗರ ಮಹಾರಾಜ, ವರ್ಧಮಾನಸಾಗರ ಮಹಾರಾಜ ಮತ್ತು ಸಂಘಸ್ಥ ತ್ಯಾಗಿಗಳಿಂದ ಇಲ್ಲಿನ ಚಾವುಂಡರಾಯ ಸಭಾ ಮಂಟಪದಲ್ಲಿ ನಿತ್ಯ ದಶಲಕ್ಷಣ ಪರ್ವದ ದಶ ಧರ್ಮಗಳ ಕುರಿತ ಪ್ರವಚನ, ತತ್ವಾರ್ಥ ಸೂತ್ರವಾಚನ, ಪರಸ್ಪರ ಕ್ಷಮಾವಾಣಿ ಆಚರಿಸುವುದರೊಂದಿಗೆ 10 ಧರ್ಮಗಳ ದಶ ಲಕ್ಷಣ ಮಹಾಪರ್ವ ಭಾನುವಾರ ಸಂಪನ್ನಗೊಂಡಿತು.

ದಿಗಂಬರ ಜೈನ ಕ್ಷೇತ್ರದಲ್ಲಿ ಪ್ರತಿವರ್ಷ ಭಾದ್ರಪದ ಶುದ್ಧ ಪಂಚಮಿಯಿಂದ ಚತುದರ್ಶಿಯವರೆಗೆ ದಿಗಂಬರ ಜೈನ ಧರ್ಮೀಯರು 10 ದಿನಗಳ ಕಾಲ ದಶಲಕ್ಷಣ ಮಹಾಪರ್ವವನ್ನು ಶ್ರದ್ಧಾ ಭಕ್ತಿ ವ್ರತ ಪೂಜೆ, ಉಪವಾಸಗಳ ಪೂರ್ವಕವಾಗಿ ವೈಭವದಿಂದ ಆಚರಿಸುತ್ತಾರೆ.

ದಶಧರ್ಮಗಳಾದ ಉತ್ತಮ ಕ್ಷಮಾ, ಉತ್ತಮ ಮಾರ್ಧವ, ಉತ್ತಮ ಆರ್ಜವ, ಉತ್ತಮ ಶೌಚ, ಉತ್ತಮ ಸತ್ಯ, ಉತ್ತಮ ಸಂಯಮ, ಉತ್ತಮ ತಪ, ಉತ್ತಮ ತ್ಯಾಗ, ಉತ್ತಮ ಆಕಿಂಚನ್ಯ, ಉತ್ತಮ ಬ್ರಹ್ಮಚರ್ಯ ಧರ್ಮಗಳ ಈ ವಿಶೇಷ ಪರ್ವವು ಬಹಳ ಮಹತ್ವಪೂರ್ಣವಾಗಿದೆ.

ADVERTISEMENT

ಪ್ರತಿದಿನವೂ ಒಂದೊಂದು ಧರ್ಮದಂತೆ ಜೈನ ಧರ್ಮೀಯರು ಆಚರಿಸುತ್ತ ಬರುತ್ತಿದ್ದಾರೆ. ಇದರಲ್ಲಿ ಅಡಕವಾಗಿರುವ ತತ್ವದ ಅನುಷ್ಠಾನ ಎಲ್ಲ ಧರ್ಮೀಯರ ಮತ್ತು ಸರ್ವ ಸಮುದಾಯಗಳ ಉನ್ನತಿಗೆ ಕಾರಣವಾಗಿದೆ.

ಈ ಮಹಾ ಪರ್ವದ ವಿಶೇಷ ಗುಣವೆಂದರೆ ಧರ್ಮ, ಜಾತಿ, ಮತ, ಪಂಥ, ಪಂಗಡಗಳ ಭೇದ ಭಾವವನ್ನು ಗಣನೆಗೆ ತೆಗೆದುಕೊಳ್ಳದೇ, ಯಾರ ಹೆಸರಲ್ಲೂ ಸಂಭ್ರಮಿಸಿ ಆಚರಿಸದೇ, ಪ್ರತಿ ಆತ್ಮನ ವಿಕಾಸದ ಉನ್ನತಿಗೆ ಕಾರಣವಾಗುವಂತೆ ಆಚರಿಸುವುದರಿಂದ ಇದನ್ನು ಜೈನ ಧರ್ಮೀಯರು ರಾಜಪರ್ವವೆಂದು ಕರೆಯುತ್ತಾರೆ. ಕ್ಷಮಾಗುಣಗಳನ್ನು ಎಲ್ಲರೂ ಧಾರಣೆ ಮಾಡುವುದರಿಂದ ಎಲ್ಲಲ್ಲೂ ಗಾಢ ಮೈತ್ರಿ ಭಾವ ಬೆಳೆಯುತ್ತದೆ. ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕ್ಷೇತ್ರದ ಪೀಠಾಧಿಪತಿ

ಸಮವಸರಣ ಮಂಟಪದಲ್ಲಿ ಜಿನ ಭಗವಂತರನ್ನು ಪ್ರತಿಷ್ಠಾಪಿಸಲಾಗಿತ್ತು.
ಕ್ಷಮಾಗುಣಗಳನ್ನು ಎಲ್ಲರೂ ಧಾರಣೆ ಮಾಡುವುದರಿಂದ ಎಲ್ಲಲ್ಲೂ ಗಾಢ ಮೈತ್ರಿ ಭಾವ ಬೆಳೆಯುತ್ತದೆ.
ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕ್ಷೇತ್ರದ ಪೀಠಾಧಿಪತಿ

ದಶ ಧರ್ಮಗಳು

ವಿದ್ಯಾಸಾಗರ ಮಹಾರಾಜರು ದಶಧರ್ಮಗಳ ಬಗ್ಗೆ ಆಶೀರ್ವಚನ ನೀಡಿ ‘ಕ್ರೋಧಾದಿ ಮಾನಕಾಶಯಗಳನ್ನು ಮಾಡದೇ ಸರ್ವ ಜೀವಿಗಳಲ್ಲಿ ದಯೆ ಕರುಣೆಯಿಂದ ಕ್ಷಮೆ ನೀಡುವುದೇ ಕ್ಷಮಾ ಧರ್ಮ. ಅಹಂಕಾರವನ್ನು ಸಂಪೂರ್ಣವಾಗಿ ತ್ಯಜಿಸುವುದು ಮಾರ್ಧವ ಧರ್ಮ. ಮನವಚನ ಕಾಯಗಳಿಂದ ಯಾರಿಗೂ ಮೋಸ ವಂಚನೆ ಮಾಡದಿರುವುದೇ ಆರ್ಜವ ಧರ್ಮ. ಅತೀ ಆಸೆಯನ್ನು ತ್ಯಜಿಸಿ ಸಂತುಷ್ಟನಾಗುವ ಪ್ರವೃತ್ತಿ ಬೆಳೆಸಿಕೊಳ್ಳುವುದೇ ಶೌಚ ಧರ್ಮ. ಹಿತ ಮಿತ ಪ್ರಿಯ ಸತ್ಯ ವಚನಗಳನ್ನು ಆಡುವುದು ಸತ್ಯ ಧರ್ಮ. ಇಂದ್ರಿಯ ಹಾಗೂ ಮನಸನ್ನು ವಶದಲ್ಲಿ ಇಟ್ಟುಕೊಳ್ಳುವುದು ಸಂಯಮ ಧರ್ಮ. ಕರ್ಮಗಳ ನಿರ್ಜರೆಗಾಗಿ ಆತ್ಮನಲ್ಲಿ ಲೀನ ಆಗುವುದು ತಪ ಧರ್ಮ. ಮನುಷ್ಯನ ಅಂತರಂಗ ಕಷಾಯಗಳನ್ನು ತ್ಯಜಿಸುವುದು ಮತ್ತು 4 ಪ್ರಕಾರದ ದಾನಗಳನ್ನು ಮಾಡುವುದು ತ್ಯಾಗ ಧರ್ಮ. ಎಲ್ಲ ರೀತಿಯ ಪರಿಗ್ರಹಗಳನ್ನು ತ್ಯಾಗ ಮಾಡುವುದೇ ಅಕಿಂಚನ್ಯ ಧರ್ಮ. ಇಂದ್ರಿಯಗಳನ್ನು ನಿಗ್ರಹಿಸಿಕೊಂಡು ವಿಜಯವನ್ನು ಸಾಧಿಸುವುದು ಬ್ರಹ್ಮಚರ್ಯ ಧರ್ಮವಾಗಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.