ADVERTISEMENT

ಶ್ರವಣಬೆಳಗೊಳ: 125 ವಟುಗಳಿಗೆ ವ್ರತೋಪದೇಶ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 14:35 IST
Last Updated 11 ಏಪ್ರಿಲ್ 2025, 14:35 IST
ಶ್ರವಣಬೆಳಗೊಳದ ಭಂಡಾರ ಬಸದಿಯಲ್ಲಿ ವ್ರತೋಪದೇಶ ಪಡೆದ ವಟುಗಳು ಅಷ್ಟ ವಿಧಾರ್ಚನೆಯಲ್ಲಿ ಭಾಗವಹಿಸಿ ಪೂಜೆ ಸಲ್ಲಿಸುತ್ತಿರುವುದು
ಶ್ರವಣಬೆಳಗೊಳದ ಭಂಡಾರ ಬಸದಿಯಲ್ಲಿ ವ್ರತೋಪದೇಶ ಪಡೆದ ವಟುಗಳು ಅಷ್ಟ ವಿಧಾರ್ಚನೆಯಲ್ಲಿ ಭಾಗವಹಿಸಿ ಪೂಜೆ ಸಲ್ಲಿಸುತ್ತಿರುವುದು   

ಶ್ರವಣಬೆಳಗೊಳ: ಭಗವಾನ್ ನೇಮಿನಾಥ ತೀರ್ಥಂಕರರ ವಾರ್ಷಿಕ ಪಂಚಕಲ್ಯಾಣ ಮಹಾರಥೋತ್ಸವದ ಪ್ರಯುಕ್ತ ವಟುಗಳಿಗೆ ವ್ರತೋಪದೇಶವು ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಸ್ವಾಮೀಜಿ ನೇತೃತ್ವದಲ್ಲಿ ಶುಕ್ರವಾರ ನೆರವೇರಿತು.

ಭಂಡಾರ ಬಸದಿಯ ಹುಳ್ಳ ಸಭಾ ಮಂಟಪದಲ್ಲಿ ವ್ರತೋಪದೇಶ ಪಡೆಯುವ ಶ್ವೇತ ಮತ್ತು ಕೇಸರಿ ವಸ್ತ್ರ ಧರಿಸಿದ 125 ವಟುಗಳು ಆಸೀನರಾಗಿದ್ದರು. ಪ್ರತಿಯೊಬ್ಬ ವಟುವಿನ ಮುಂಭಾಗ ಪ್ರತ್ಯೇಕ ಮಂಗಲ ಕಲಶ, ಪೂಜಾ ಸಾಮಗ್ರಿ ಇರಿಸಲಾಗಿತ್ತು. ರತ್ನತ್ರಯ ಧಾರಣೆ ವಿಧಿಗಳೊಂದಿಗೆ ಆರಾಧನೆಗೆ ಚಾಲನೆ ನೀಡಲಾಯಿತು.

 ವಿವಿಧ ಜಿಲ್ಲೆಗಳಿಂದ  109 ಬಾಲಕರು, 16 ಬಾಲಕಿಯರು ಭಾಗವಹಿಸಿದ್ದರು. ಬಾಲಕರಿಗೆ ಪಂಚೆ ಶಲ್ಯ, ಬಾಲಕಿಯರಿಗೆ ಸೀರೆ, ಶುದ್ಧ ಭೋಜನ, ವಸತಿ ಒದಗಿಸಲಾಗಿತ್ತು ಎಂದು ಮೇಲ್ವಿಚಾರಕ ರಾಜೇಶ್ ಶಾಸ್ತ್ರಿ ಹೇಳಿದರು.

ADVERTISEMENT

ಕಲಶದ ಮುಂಭಾಗ ಕುಳಿತ ಪ್ರತಿಯೊಬ್ಬ ವಟು, ಜಲ, ಗಂಧ, ಅಕ್ಷತೆ, ಪುಷ್ಪ, ಚರು, ದೀಪ, ಧೂಪ, ಪಲಗಳ ಅರ್ಘ್ಯಗಳನ್ನು ಅರಹಂತ ಪರಮೇಷ್ಠಿಗಳಿಗೆ ಸಮರ್ಪಿಸಿದರು. ಶ್ರುತದ ಪೂಜೆಯಲ್ಲಿ ಜಿನವಾಣಿ ಸರಸ್ವತಿ ಮಾತೆಗೂ ಪ್ರತ್ಯೇಕ ಅಷ್ಟವಿಧಾರ್ಚನೆ ಮಾಡಿ ಅರ್ಘ್ಯಗಳನ್ನು ಅರ್ಪಿಸಲಾಯಿತು. ಶಾಂತಿಧಾರಾ ಮಾಡಿ ಕಲಶ ವಿಸರ್ಜಿಸಿ, ಮಹಾಮಂಗಳಾರತಿ ಮಾಡಲಾಯಿತು.

ಪೂಜೆಯ ನೇತೃತ್ವವನ್ನು ಎಸ್.ಡಿ.ನಂದಕುಮಾರ್ ಶಾಸ್ತ್ರಿ, ಪ್ರೇಮ್‌ಕುಮಾರ್ ವಹಿಸಿದ್ದು, ಮೇಲ್ವಿಚಾರಕರಾಗಿ ರಾಜೇಶ್ ಶಾಸ್ತ್ರಿ, ಪ್ರದೀಪ್ ಇದ್ದರು.

ಶ್ರವಣಬೆಳಗೊಳದ ಭಂಡಾರ ಬಸದಿಯ ಹುಳ್ಳ ಸಭಾ ಮಂಟಪದಲ್ಲಿ ಜರುಗಿದ ಭಗವಾನ್ ನೇಮಿನಾಥ ತೀರ್ಥಂಕರರ ಕೇವಲಜ್ಞಾನ ಕಲ್ಯಾಣದ ನಿಮಿತ್ತ ಶ್ರೀಗಳು ಶ್ರೀಫಲಗಳನ್ನು ಅರ್ಪಿಸಿದರು.
ಶ್ರವಣಬೆಳಗೊಳದ ಚಂದ್ರಗಿರಿ ಚಿಕ್ಕಬೆಟ್ಟದಲ್ಲಿರುವ ಅಂತರಾಳ ಪಾರ್ಶ್ವನಾಥ ಸ್ವಾಮಿಗೆ ಅರಿಷಿಣ ಕ್ಷೀರ ಕಲ್ಕಚೂರ್ಣ ಅಭಿಷೇಕಗಳು ಜರುಗಿದವು.

Quote - ನಿತ್ಯ ದೇವರ ದರ್ಶನ ಪೂಜೆ ಗುರುಗಳ ಸೇವೆ ಶಾಸ್ತ್ರಗಳ ಸ್ವಾಧ್ಯಾಯ ಸಂಯಮ ತಪ ದಾನವೆಂಬ ಷಟ್ಕರ್ಮಗಳ ಬಗ್ಗೆ ತಿಳಿವಳಿಕೆ ಹೊಂದಿ ಸದಾ ಧರ್ಮ ಮಾರ್ಗದಲ್ಲಿ ನಡೆಯಬೇಕು. ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಪೀಠಾಧ್ಯಕ್ಷ

Cut-off box - ಪಾರ್ಶ್ವನಾಥ ಸ್ವಾಮಿಗೆ ಮಸ್ತಕಾಭಿಷೇಕ ಇತಿಹಾಸ ಪ್ರಸಿದ್ಧ ಚಂದ್ರಗಿರಿಯ ಚಿಕ್ಕಬೆಟ್ಟದಲ್ಲಿರುವ 18 ಅಡಿಯ ಅಂತರಾಳ ಪಾರ್ಶ್ವನಾಥ ಸ್ವಾಮಿಗೆ ಧಾರ್ಮಿಕ ವಿಧಿ– ವಿಧಾನಗಳೊಂದಿಗೆ ಮಸ್ತಕಾಭಿಷೇಕವನ್ನು ಕ್ಷೇತ್ರದ ಪೀಠಾಧಿಪತಿ ಸ್ವಸ್ತೀಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶುಕ್ರವಾರ ನೆರವೇರಿಸಲಾಯಿತು. ಮಂಗಲ ಕಲಶ ಪ್ರತಿಷ್ಠಾಪಿಸಲಾಗಿತ್ತು. ಣಮೋಕಾರ ಮಹಾಮಂತ್ರಗಳೊಂದಿಗೆ ಜಲ ಎಳನೀರು ಕಬ್ಬಿನಹಾಲು ಕ್ಷೀರ ಕಲ್ಕಚೂರ್ಣ ಕಷಾಯ ಅರಿಷಿಣ ಅಷ್ಟಗಂಧ ಶ್ರೀಗಂಧಗಳಿಂದ ಅಭಿಷೇಕ ನಡೆಸಲಾಯಿತು. ಪೂಜಾ ಸೇವಾ ಕರ್ತರಾಗಿ ಪಟ್ಟಣದ ಎಸ್.ಕೆ.ವಿಜಯಕುಮಾರ್ ಕುಟುಂಬಸ್ಥರು ಮೇಲ್ವಿಚಾರಕರಾಗಿ ಜೀವೇಂದ್ರಕುಮಾರ್ ಇದ್ದರು. ಭಂಡಾರ ಬಸದಿಯ ಭಗವಾನ್ ನೇಮಿನಾಥ ತೀರ್ಥಂಕರರ ಸನ್ನಿಧಿಯಲ್ಲಿ ಶಾಂತಿ ಚಕ್ರ ಯಂತ್ರಾರಾಧನೆ ಕೇವಲಜ್ಞಾನ ಕಲ್ಯಾಣ ಋಷಿಮಂಡಲ ಆರಾಧನೆ ಜರುಗಿದ ಸಂದರ್ಭದಲ್ಲಿ ಶ್ರೀಗಳು ಶ್ರೀಫಲ ಅರ್ಪಿಸಿ ಆರತಿ ಮಾಡಿದರು. ನಂದಕುಮಾರ್ ಶಾಸ್ತ್ರಿ ಎಸ್.ಪಿ.ಜಿನೇಶ್ ಪ್ರೇಮ್‌ಕುಮಾರ್ ಜ್ವಾಲಾಕುಮಾರ್ ರಾಜಣ್ಣ ಪುನೀತ್ ಸನ್ಮತಿ ಪೂಜೆಯ ನೇತೃತ್ವ ವಹಿಸಿದ್ದರು. ಅನುಪಮಕೀರ್ತಿ ಮಹಾರಾಜ್ ಸುದೇಹಸಾಗರ್ ಮಹಾರಾಜ್ ಆರ್ಯಿಕೆಯರಾದ ಶಿವಮತಿ ಮಾತಾಜಿ ನಿರ್ಮಲಮತಿ ಮಾತಾಜಿ ಸಾನ್ನಿಧ್ಯ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.