ಬೇಲೂರು: ಕಾಡಾನೆ ಉಪಟಳ ಇರುವ ತಾಲ್ಲೂಕಿನ ವಿವಿಧ ಸ್ಥಳಗಳಿಗೆ ಸಂಸದ ಶ್ರೇಯಸ್ ಪಟೇಲ್ ಭಾನುವಾರ ಭೇಟಿ ನೀಡಿದರು.
ಆನೆ ಕಾರ್ಯಪಡೆ ಕಚೇರಿಗೆ ಭೇಟಿ ನೀಡಿದ ಅವರು, ಅರಣ್ಯ ಇಲಾಖಾ ಅಧಿಕಾರಿಗಳು, ಆನೆ ಕಾರ್ಯಪಡೆ, ಕ್ಷಿಪ್ರ ಕಾರ್ಯಪಡೆ, ಕಾಡಾನೆ ಹಿಮ್ಮೆಟ್ಟಿಸುವ ಸಿಬ್ಬಂದಿ, ಕಾಫಿ ಬೆಳೆಗಾರರು, ಎನ್‌ಸಿಎಫ್ ತಂಡದೊಂದಿಗೆ ಸಮಾಲೋಚನೆ ನಡೆಸಿದರು.
ಕಾಡಾನೆ ಪತ್ತೆ ಹಚ್ಚುವುದು, ಕಾಡಾನೆಗಳ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸುವ ಬಗ್ಗೆ ಸ್ಥಳದಲ್ಲಿ ಮಾಹಿತಿ ಪಡೆದರು. ಈ ವೇಳೆ ಕಾಡಾನೆ ಹಿಮ್ಮೆಟ್ಟಿಸುವ ಸಿಬ್ಬಂದಿ ಕ್ಷೇತ್ರ ಮಟ್ಟದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಉಳಿದ ಜಿಲ್ಲೆಗಳಿಗಿಂತ ಹಾಸನ ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ ನಿರ್ವಹಣೆ ಭಿನ್ನವಾಗಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಇತ್ತೀಚೆಗೆ ಅರಣ್ಯ, ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದ ಥರ್ಮಲ್ ಡ್ರೋನ್ ವ್ಯವಸ್ಥೆಯನ್ನು ವೀಕ್ಷಿಸಿ, ಕಾಡಾನೆಗಳು ಇರುವ ಚಿತ್ರಗಳನ್ನು ಸೆರೆ ಹಿಡಿಯುವ ಕುರಿತು ಪ್ರಾತ್ಯಕ್ಷಿಕೆ ಪಡೆದರು.
ಎರಡನೇ ಬಾರಿಗೆ ಅರಣ್ಯ ನಿಯಂತ್ರಣ ಕೊಠಡಿಗೆ ಭೇಟಿ ನೀಡಿದ ಸಂಸದ ಶ್ರೇಯಸ್, ಕಾಡಾನೆ ಮಾನವ ಸಂಘರ್ಷ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಕೇಂದ್ರ ಅರಣ್ಯ ಸಚಿವರಿಗೂ ಈ ಬಗ್ಗೆ ಮನವರಿಕೆ ಮಾಡಿರುವುದಾಗಿ ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ಸಹಾಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮೋಹನ ವಿ.ಎಸ್., ಶರೀಫಾ, ವಲಯ ಅರಣ್ಯಾಧಿಕಾರಿ ಶ್ರೀ ಯತೀಶ್, ಬೇಲೂರು ಅರಣ್ಯ ಇಲಾಖೆಯ ಕ್ಷೇತ್ರ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.