ADVERTISEMENT

ಹಾಸನ| ಸಿದ್ಧರಾಮೇಶ್ವರರು ಶ್ರೇಷ್ಠ ಕರ್ಮಯೋಗಿ: ಸೀ.ಚ. ಯತೀಶ್ವರ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 6:08 IST
Last Updated 15 ಜನವರಿ 2026, 6:08 IST
ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬುಧವಾರ ನಡೆದ ಸಿದ್ದರಾಮೇಶ್ವರ ಜಯಂತ್ಯುತ್ಸವವನ್ನು ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಗಣ್ಯರು ಉದ್ಘಾಟಿಸಿದರು.
ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬುಧವಾರ ನಡೆದ ಸಿದ್ದರಾಮೇಶ್ವರ ಜಯಂತ್ಯುತ್ಸವವನ್ನು ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಗಣ್ಯರು ಉದ್ಘಾಟಿಸಿದರು.   

ಹಾಸನ: ಶ್ರೇಷ್ಠ ಶಿವಶರಣರಲ್ಲಿ ಒಬ್ಬರಾಗಿದ್ದ ಸಿದ್ಧರಾಮೇಶ್ವರರು ಕರ್ಮಯೋಗದಿಂದ ಪ್ರಸಿದ್ಧ ಪಡೆದ ಮಹಾಪುರುಷರಾಗಿದ್ದಾರೆ ಎಂದು ಎ.ವಿ.ಕೆ. ಕಾಲೇಜಿನ ಪ್ರಾಂಶುಪಾಲ ಸೀ.ಚ. ಯತೀಶ್ವರ ತಿಳಿಸಿದರು.

ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬುಧವಾರ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿವಯೋಗಿ ಸಿದ್ದರಾಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ತಮ್ಮ ಕರ್ಮಯೋಗದ ಮೂಲಕ 12ನೇ ಶತಮಾನದಲ್ಲಿ ಕೇಂದ್ರ ಬಿಂದುವಾಗಿದ್ದ ಸಿದ್ಧರಾಮೇಶ್ವರರು ಸತ್ಯನಿಷ್ಠರಾಗಿದ್ದರು. ಕರ್ಮಯೋಗದಿಂದ ಶಿವಯೋಗ ಏರಿದ ನಂತರ ಸಮಾಜದ ಸುಧಾರಣೆ, ಸಮಾಜ ಸೇವೆಯಲ್ಲಿ ಬದುಕಿನ ಸಿದ್ದಿ ಕಂಡುಕೊಂಡರು. ಕಾಯಕ ನಿಷ್ಠೆಗೆ ಹೆಸರಾದ ಅವರು ದುಡಿಮೆಯಿಲ್ಲದೇ ಉಣ್ಣಬಾರದೆಂಬ ನೀತಿ ಪ್ರತಿಪಾದಿಸಿದರು. ಆಧ್ಯಾತ್ಮಿಕದ ಉನ್ನತಿಯ ಸಾಧನೆಗೆ ಶ್ರಮಿಸಿದರು ಎಂದು ತಿಳಿಸಿದರು.

ADVERTISEMENT

ವಚನಗಳ ಮೂಲಕ ಸಮಾಜದ ಸುಧಾರಣೆಗೆ ಮುಂದಾದರು. ಸುಮಾರು 60 ಸಾವಿರ ವಚನಗಳನ್ನು ರಚಿಸಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಆದರೆ ಎರಡು ಸಾವಿರ ವಚನಗಳು ಮಾತ್ರ ಲಭ್ಯವಿದೆ. ಸರಳ ಹಾಗೂ ಅಚ್ಚಗನ್ನಡ ಭಾಷೆಯ ಬಳಕೆ ಮಾಡಿರುವ ಸಿದ್ದರಾಮೇಶ್ವರ ವಚನಗಳು ಇಂದಿಗೂ ಚಿಂತನಾರ್ಹವಾಗಿವೆ ಎಂದು ಹೇಳಿದರು.

ಜ್ಞಾನ ಯೋಗ, ಭಕ್ತಿ ಯೋಗ ಹಾಗೂ ಕರ್ಮ ಯೋಗಗಳಿಗೆ ಸಿದ್ದರಾಮಶ್ವರರು ಉತ್ತಮ ನಿರ್ದೇಶನ. ಸದಾ ಕ್ರಿಯಾಶೀಲ ವ್ಯಕ್ತಿಯಾಗಿದ್ದ ಅವರು ಸ್ವತಃ ಕೆರೆಕಟ್ಟೆ ಕಟ್ಟುವ ಕಾಯಕಕ್ಕೆ ಇಳಿದವರು. ಹುಟ್ಟೂರು ಮಹಾರಾಷ್ಟ್ರದ ಸೊನ್ನಲಿಗೆಯಲ್ಲಿ ಸಿದ್ದರಾಮಶ್ವರರು ಕಟ್ಟಿಸಿದ ಕೆರೆ ಇಂದಿಗೂ ಇದೆ. ಹೆಣ್ಣನ್ನು ಸಮಾನವಾಗಿ ಕಂಡ ಅವರು, ಕುಲ ವಿರೋಧಿಯಾಗಿದ್ದರು ಎಂದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಿಂದ ಕಲಾತಂಡಗಳೊಂದಿಗೆ ಪ್ರಾರಂಭವಾದ ಮೆರವಣಿಗೆ ಹಾಸನಾಂಬ ಕಲಾಕ್ಷೇತ್ರದವರೆಗೆ ನಡೆಯಿತು.

ಬೆಂಗಳೂರಿನ ಸರ್ಪಭೂಷಣ ಹಾಗೂ ಅರಕಲಗೂಡಿನ ದೊಡ್ಡ ಮಠದ ಮಠಾಧೀಶ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ನೊಳಂಬ ಸ್ವಯಂಸೇವಕ ಎಚ್.ಎಸ್. ರಾಜಶೇಖರ್, ಅಖಿಲ ಕರ್ನಾಟಕ ಬೋವಿ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎಚ್. ಮಂಜಪ್ಪ, ವೀರ ಶೈವ ಲಿಂಗಾಯತ ಸಂಘದ ಅಧ್ಯಕ್ಷ ಬಿ.ಪಿ. ಐಸಾಮಿಗೌಡ, ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್‌ ಮತ್ತಿತರರು ಹಾಜರಿದ್ದರು.

ಸಿದ್ದರಾಮಶ್ವರರು ಶರಣ ಪರಂಪರೆಗೆ ನಾಂದಿ ಹಾಡಿದ ಮಹಾ ದಾರ್ಶನಿಕರು. ನಮ್ಮ ನಾಡು– ನುಡಿ ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಮಾಜವನ್ನು ಪರಿಶುದ್ಧಗೊಳಿಸುಲ್ಲಿ ಅವರ ಪಾತ್ರ ಪ್ರಮುಖವಾದದ್ದು.
ಕೆ.ಎಸ್. ಲತಾಕುಮಾರಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.