ADVERTISEMENT

ಹೆದ್ದಾರಿಯಲ್ಲಿ ಸಿಗದ ಫಲಕ: ದಾರಿ ಯಾವುದಯ್ಯ ಆಲೂರಿಗೆ?

ತಾಲ್ಲೂಕು ಕೇಂದ್ರಕ್ಕೆ ಬರಲು ಪರದಾಟ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 6:14 IST
Last Updated 29 ಅಕ್ಟೋಬರ್ 2024, 6:14 IST
ಆಲೂರಿನ ಕಸಬಾ ಭೈರಾಪುರದ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಲೂರು ಎಂಬ ಫಲಕ ಇಲ್ಲ.
ಆಲೂರಿನ ಕಸಬಾ ಭೈರಾಪುರದ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಲೂರು ಎಂಬ ಫಲಕ ಇಲ್ಲ.   

ಆಲೂರು: ತಾಲ್ಲೂಕು ಕೇಂದ್ರವಾಗಿರುವ ಆಲೂರು ಎಂಬ ಮೂರು ಅಕ್ಷರವನ್ನು ಸಾರ್ವಜನಿಕವಾಗಿ ಬರೆದು ಅಗತ್ಯ ಇರುವೆಡೆ ಪ್ರದರ್ಶಿಸಲು ಸರ್ಕಾರಗಳು ಕೇಂದ್ರ ನಿರ್ಲಕ್ಷ ಮಾಡುತ್ತಿದ್ದು, ಆಲೂರು ತಾಲ್ಲೂಕು ಕೇಂದ್ರವೇ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯು, ತಾಲ್ಲೂಕು ಕೇಂದ್ರಕ್ಕೆ ಪ್ರವೇಶ ಮಾಡುವ ನೇರಲಕೆರೆ ಕೂಡಿಗೆ ಮತ್ತು ಭೈರಾಪುರದ ಮಾರ್ಗವಾಗಿ ಹಾದು ಹೋಗಿದೆ. ಬೆಂಗಳೂರಿನಿಂದ ಹೆದ್ದಾರಿಯಲ್ಲಿ ಬರುವವರಿಗೆ, ನೇರಲಕೆರೆ ಕೂಡಿಗೆಯಿಂದ ಆಲೂರು ತಾಲ್ಲೂಕು ಕೇಂದ್ರಕ್ಕೆ ತೆರಳಲು ‘ಆಲೂರು’ ಎಂದು ಚಿಕ್ಕದಾದ ಅಕ್ಷರದಲ್ಲಿ ಮಾರ್ಗಸೂಚಿ ಬರೆಯಲಾಗಿದೆ. ಇದು ವಾಹನಗಳ ಚಾಲಕರಿಗೆ ತಕ್ಷಣಕ್ಕೆ ಗೋಚರವಾಗದೇ, ಕೆಲ ವಾಹನಗಳು ಮುಂದೆ ಹೋಗಿ ವಾಪಸ್‌ ಆಲೂರಿಗೆ ಬರುತ್ತಿವೆ.

ಮಂಗಳೂರಿನಿಂದ ಬೆಂಗಳೂರು ಮಾರ್ಗ ತೆರಳುವ ರಾಷ್ಟ್ರೀಯ ಹೆದ್ದಾರಿ, ಭೈರಾಪುರ ಗ್ರಾಮದಲ್ಲಿ ಕೆಳಭಾಗದಲ್ಲಿ ಹಾದು ಹೋಗಿದೆ. ಭೈರಾಪುದಿಂದ 2 ಕಿ.ಮೀ. ದೂರವಿರುವ ಆಲೂರಿಗೆ ಸಂಚರಿಸುವ ಜನರಿಗಾಗಲಿ, ವಾಹನಗಳ ಚಾಲಕರಿಗಾಗಲಿ ಎಡಭಾಗಕ್ಕೆ ತಿರುಗುವ ಸ್ಥಳದಲ್ಲಿ ಕೇವಲ ಭೈರಾಪುರ ಎಂಬ ನಾಮಫಲಕ ಮಾತ್ರ ಹಾಕಿದ್ದಾರೆ. ಆಲೂರು ಎಂಬ ನಾಮಫಲಕ ಹಾಕದಿರುವುದರಿಂದ, ಆಲೂರಿಗೆ ಬರುವ ವಾಹನಗಳ ಚಾಲಕರು ತಬ್ಬಿಬ್ಬುಗೊಂಡು ವಾಹನಗಳನ್ನು ಚಲಾಯಿಸುವಂತಾಗಿದೆ.

ADVERTISEMENT

ಹತ್ತಾರು ವರ್ಷಗಳ ಹಿಂದೆ ಎಕ್ಸ್‌ಪ್ರೆಸ್‌ ಸಾರಿಗೆ ಬಸ್‌ಗಳ ಫಲಕಗಳಲ್ಲಿ ಆಲೂರು ಎಂದು ನಮೂದಿಸುತ್ತಿರಲಿಲ್ಲ. ತಾಲ್ಲೂಕು ಕೇಂದ್ರವಾದರೂ ಬಸ್‌ಗಳು ಆಲೂರಿಗೆ ಬಾರದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದವು. ಜನಸಾಮಾನ್ಯರ ಮನವಿ ಮತ್ತು ಇಲಾಖೆ ಆದೇಶಕ್ಕೂ ಸ್ಪಂದಿಸದಿದ್ದಾಗ, ಸಾರ್ವಜನಿಕರು ಪ್ರತಿಭಟನೆ ಮಾಡಿದ ನಂತರ ಈಗ ಎಲ್ಲ ಬಸ್ಗಳು ತಾಲ್ಲೂಕು ಕೇಂದ್ರದ ಮೂಲಕ ಸಂಚರಿಸುತ್ತಿವೆ.

ಈಗಲಾದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕೂಡಲೇ ನೇರಲಕೆರೆ ಕೂಡಿಗೆ ಮತ್ತು ಭೈರಾಪುರ ಎಂಬ ನಾಮಫಲಕದ ಬಳಿ ದಪ್ಪ ಅಕ್ಷರದಲ್ಲಿ ಆಲೂರು ಎಂದು ಬರೆದು ಅಳವಡಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಫಲಕಗಳು ಬೆಂಗಳೂರಿನಿಂದ ಮುದ್ರಣವಾಗಿ ಬರಬೇಕಾಗಿದ್ದು ತಿಂಗಳೊಳಗೆ ಭೈರಾಪುರ ನೇರಲಕೆರೆ ಕೂಡಿಗೆ ಬಳಿ ಆಲೂರು ಎಂಬ ಫಲಕ ಅಳವಡಿಸಲಾಗುವುದು.
ಮಣಿಕಂಠನ್, ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿ
ಭೈರಾಪುರ ಗ್ರಾಮದಲ್ಲಿ ಆಲೂರು ಎಂಬ ಫಲಕ ಹಾಕಿಲ್ಲ. ಕಡೆ ದಪ್ಪ ಅಕ್ಷರದಲ್ಲಿ ಆಲೂರು ಫಲಕ ಅಳವಡಿಸಿದರೆ ಚಾಲಕರಿಗೆ ಅನುಕೂಲ.
ಶೇಖರ್, ಕಟ್ಟಡ ಸಾಮಗ್ರಿ ಮಾರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.