ADVERTISEMENT

ಹಾಸನ: ಮಳೆಗೆ ಆರು ಮನೆ ಹಾನಿ

ಅತಿವೃಷ್ಟಿಯಿಂದ ಬೆಳೆ ನಷ್ಟ ವರದಿಯಾಗಿಲ್ಲ: ಡಿ.ಸಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 14:05 IST
Last Updated 20 ಜುಲೈ 2021, 14:05 IST
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಡೆಸಿದ ವೀಡಿಯೊ ಸಂವಾದದಲ್ಲಿ ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್‌, ಪೊಲೀಸ್ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್ ಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಜಂಟಿ ಕೃಷಿ ನಿರ್ದೇಶಕ ಎಚ್.ಕೆ ರವಿ ಭಾಗವಹಿಸಿದ್ದರು.
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಡೆಸಿದ ವೀಡಿಯೊ ಸಂವಾದದಲ್ಲಿ ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್‌, ಪೊಲೀಸ್ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್ ಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಜಂಟಿ ಕೃಷಿ ನಿರ್ದೇಶಕ ಎಚ್.ಕೆ ರವಿ ಭಾಗವಹಿಸಿದ್ದರು.   

ಹಾಸನ: ಮಳೆಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 6 ಮನೆಗಳು ಹಾನಿಗೊಳಗಾಗಿದ್ದು, ಅವುಗಳಿಗೆ ನಿಯಮಾನುಸಾರ ಪರಿಹಾರ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್ ಹೇಳಿದರು.

ಮಳೆ ಹೆಚ್ಚಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡೆಸಿದ ವೀಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಆಗಸ್ಟ್ ಮೊದಲ ಹಾಗೂ ಎರಡನೇ ವಾರ ಹೆಚ್ಚಿನ ಮಳೆ ಆಗುವ ಸಾಧ್ಯತೆಯಿದ್ದು, ಸಂಬಂಧಪಟ್ಟ ಅಧಿಕಾರಿಗಳೊಡನೆ ಸಭೆ ನಡೆಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈವರೆಗೂ ಯಾವುದೇ ರೀತಿಯ ಮಾನವ ಜೀವ ಹಾನಿ ಅಥವಾ ಬೆಳೆನಷ್ಟ ವರದಿಯಾಗಿಲ್ಲ.ಒಂದು ಜಾನುವಾರು ಸಾವನ್ನಪ್ಪಿದೆ. ಈಗಾಗಲೆ ಶೇಕಡಾ 56ರಷ್ಟು ಬಿತ್ತನೆಯಾಗಿದ್ದು, ಮಳೆಯಿಂದಬಿತ್ತನೆಗೆ ಯಾವುದೇ ರೀತಿಯ ಹಾನಿಯಂಟಾಗಿಲ್ಲ ಎಂದು ವಿವರಿಸಿದರು.

ADVERTISEMENT

ಯಡಿಯೂರಪ್ಪ ಮಾತನಾಡಿ, ಮುಂಗಾರಿನಲ್ಲಿ ಅತಿವೃಷ್ಟಿಯಿಂದ ಜನ, ಜಾನುವಾರುಗಳ ಪ್ರಾಣಕ್ಕೆ ಹಾನಿಯಾಗದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ವಹಿಸಬೇಕು. ಅತಿವೃಷ್ಟಿಯಿಂದ ಅಪಾಯದ ಬಗ್ಗೆ ನಿಗಾವಹಿಸಿ ಅನಿವಾರ್ಯ ಸಂದರ್ಭಗಳಲ್ಲಿ ಸೂಕ್ತ ಪ್ರದೇಶಗಳಿಗೆ ಸ್ಥಳಾಂತರಿಸಿ ಹಾಗೂ ಯಾವುದೇ ಗ್ರಾಮಕ್ಕೆ ಸಂಪರ್ಕ ಸಮಸ್ಯೆ ಉಂಟಾಗದಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಪ್ರವಾಹದಿಂದ ಸಂಭವಿಸುವ ಬೆಳೆ ಹಾನಿ ಹಾಗೂ ಭೂ ಕುಸಿತ ಕಡಿಮೆಗೊಳಿಸಲು ಪ್ರಯತ್ನಮಾಡಬೇಕು. ಮಾಹಿತಿ ಪ್ರಕಾರ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚಿನಮಳೆಯಾಗಿದ್ದು, ಒಂದು ವಾರದಿಂದ ರಾಜ್ಯಾದಾದ್ಯಂತ ಉತ್ತಮ ಮಳೆಯಾಗುತ್ತಿದೆ. ದಕ್ಷಿಣಒಳನಾಡಿನಲ್ಲಿ ಶೇಕಡಾ 199, ಉತ್ತರ ಒಳನಾಡಿನಲ್ಲಿ ಶೇಕಡಾ 120, ಮಲೆನಾಡು ಭಾಗದಲ್ಲಿಶೇಕಡಾ 43 ಹಾಗೂ ಕರಾವಳಿ ಪ್ರದೇಶದಲ್ಲಿ ಶೇಕಡಾ 40ರಷ್ಟು ಅಧಿಕ ಮಳೆಯಾಗಿದೆ ಎಂದರು.

ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ ₹ 5 ಲಕ್ಷ ಪರಿಹಾರ ಹಣ ನೀಡಿ ತುರ್ತು ನಿರ್ವಹಣೆಗೆಬೇಕಾಗುವ ಸಾಮಾಗ್ರಿಗಳನ್ನು ಅಗತ್ಯಕ್ಕೆನುಗುಣವಾಗಿ ಖರೀದಿಸಲು ಕ್ರಮಕೈಗೊಳ್ಳಬೇಕು.ಪ್ರವಾಹದ ಸಂದರ್ಭದಲ್ಲಿ ಜನರ ರಕ್ಷಣೆ, ಕಾಳಜಿ ಕೇಂದ್ರ, ವೈದ್ಯಕೀಯ ಸೌಲಭ್ಯ ಒದಗಿಸಲುಪೂರ್ವ ಸಿದ್ಧತೆ ಮಾಡಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.

ಜಿಲ್ಲಾ ಮಟ್ಟದಲ್ಲಿ ಪ್ರವಾಹ ಪೀಡಿತ ಗ್ರಾಮ ಗುರುತಿಸಿ, ಪರಿಸ್ಥಿತಿ ಎದುರಿಸಲು ಸೂಕ್ತ ಸಿದ್ಧತೆಮಾಡಿಕೊಳ್ಳಬೇಕು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಹಾಯವಾಣಿ ಸ್ಥಾಪನೆ ಹಾಗೂದೂರವಾಣಿ ಸಂಪರ್ಕವನ್ನು ಸುಸ್ಥಿತಿಯಲ್ಲಿರಿಸುವಂತೆ ಸೂಚಿಸಿದರು.

ಕಂದಾಯ ಇಲಾಖೆ ಸಚಿವ ಆರ್. ಅಶೋಕ್ ಮಾತನಾಡಿ, ಪ್ರಕೃತಿ ವಿಕೋಪ ನಿರ್ವಹಣೆಗಾಗಿ ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ಸಾಕಷ್ಟು ಹಣ ಲಭ್ಯವಿದ್ದು, ಇನ್ನೂ ಹೆಚ್ಚಿನ ಅನುದಾನ ಅವಶ್ಯಕತೆ ಇದ್ದಲ್ಲಿ ಒದಗಿಸಲಾಗುವುದು. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಗ್ರಾಮ ಪಂಚಾಯಿತಿವಾರು ರಚಿಸಿರುವ ಕಾರ್ಯಪಡೆ ಜಾಗೃತರಾಗಿ ಕಾರ್ಯನಿರ್ವಹಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.