ADVERTISEMENT

ಹಟದಿಂದ ಹುಟ್ಟೂರ ಕೆರೆ ತುಂಬಿಸಿದ್ದ ಭೈರಪ್ಪ: ಗ್ರಾಮಸ್ಥರ ಕನಸು ಈಡೇರಿಸಿದ ಭಗೀರಥ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 12:43 IST
Last Updated 24 ಸೆಪ್ಟೆಂಬರ್ 2025, 12:43 IST
   

ಹಾಸನ: ‘ಈ ಭಾಗದ ರೈತರ ದಶಕದ ಕನಸು ಈಡೇರಿದೆ. ನಾನು ನನ್ನ ಹುಟ್ಟೂರಿನ ಜನರಿಗೆ ಶಾಶ್ವತ ಯೋಜನೆ ಮಾಡಬೇಕೆನ್ನುವ ಉದ್ದೇಶದಿಂದ ಈ ಯೋಜನೆ ಅನುಷ್ಠಾನ ಮಾಡಲಾಗಿದೆ. ಈ ಹಂಗಾಮಿನಿಂದಲೇ ಗ್ರಾಮದ ಕೆರೆಗೆ ಈ ಯೋಜನೆಯ ಮೂಲಕ ನೀರು ಬರುತ್ತಿದೆ. ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ’

ಕಾದಂಬರಿಕಾರ ಪ್ರೊ.ಎಸ್‌.ಎಲ್‌. ಭೈರಪ್ಪನವರು ತಮ್ಮ ಸ್ವಗ್ರಾಮವಾದ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರದಲ್ಲಿ ಆಡಿದ್ದ ಮಾತುಗಳಿವು. ಸಾಹಿತ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಪ್ರೊ.ಎಸ್‌.ಎಲ್‌.ಭೈರಪ್ಪ, ತಮ್ಮ ಹುಟ್ಟೂರು ಸಂತೇಶಿವರದ ಬಗ್ಗೆ ಹೊಂದಿದ್ದ ಅಭಿಮಾನವನ್ನು ಇಂದಿಗೂ ಜನರು ಸ್ಮರಿಸುತ್ತಿದ್ದಾರೆ. ರೈತಾಪಿ ಜನರ ಅನುಕೂಲಕ್ಕಾಗಿ ಹಟ ಹಿಡಿದು ಹುಟ್ಟೂರಿನ ಕೆರೆ ತುಂಬಿಸಿದ ಭಗೀರಥ ಎನ್ನುವ ಬಿರುದನ್ನೂ ಅವರು ಪಡೆದಿದ್ದಾರೆ.

ದಶಕಗಳ ಕಾಲ ಈ ಭಾಗದ ಕೆರೆಗಳು ತುಂಬದೇ ರೈತರು ಸಂಕಷ್ಟದಲ್ಲಿದ್ದರು. ಇದನ್ನು ಮನಗಂಡ ಸಾಹಿತಿ ಪ್ರೊ.ಭೈರಪ್ಪ, ಏತ ನೀರಾವರಿ ಅನುಷ್ಠಾನಕ್ಕೆ ಅನುದಾನ ತರುವ ಪ್ರಯತ್ನ ಆರಂಭಿಸಿದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದ ಪ್ರೊ.ಭೈರಪ್ಪ, ಯೋಜನೆಗೆ ₹25 ಕೋಟಿ ಬಿಡುಗಡೆ ಮಾಡಿಸುವಲ್ಲಿ ಹೆಚ್ಚು ಪರಿಶ್ರಮ ಪಟ್ಟಿದ್ದರು.
ನಂತರ ಮುಖ್ಯಮಂತ್ರಿಯಾದ ಬಸವರಾಜ್‌ ಬೊಮ್ಮಾಯಿ ಸಹಕಾರದಿಂದ ಯೋಜನೆಗೆ ಅನುಮೋದನೆ ದೊರೆಯಿತು. ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣ ಬಿಡುಗಡೆ ಮಾಡುವ ಮೂಲಕ ಯೋಜನೆ ಅನುಷ್ಠಾನಗೊಂಡಿದೆ. ಈ ಹಂಗಾಮಿನಲ್ಲಿ ಸಂತೇಶಿವರ ಹಾಗೂ ಅಗ್ರಹಾರ ಬೆಳಗುಲಿ ಕೆರೆಗಳಿಗೆ ನೀರು ಹರಿಸಲಾಗಿದೆ.

ADVERTISEMENT

ಹೇಮಾವತಿ ಮುಖ್ಯನಾಲೆಯ ಕಾರೇಹಳ್ಳಿ ಬಳಿಯ ಜಾಬ್‌ಘಟ್ಟ ಗ್ರಾಮದ ನಾಗಮಂಗಲ ಉಪ ನಾಲೆಯಿಂದ ಸುಮಾರು 11 ಕಿ.ಮೀ. ಪೈಪ್‌ಲೈನ್‌ ಮಾಡಲಾಗಿದೆ. ಅಲ್ಲಿಂದ ನೀರು ತರುವ ಮೂಲಕ ರಾಂಪುರ ಗೇಟ್ ಬಳಿ ಇರುವ ವಿತರಣಾ ತೊಟ್ಟಿಯಿಂದ ಸಂತೇಶಿವರ ಹಾಗೂ ಅಗ್ರಹಾರ ಬೆಳಗುಲಿ ಗ್ರಾಮದ ಕೆರೆಗಳಿಗೆ ನೀರು ಹರಿಸಲಾಗಿದೆ. ಯೋಜನೆಯಿಂದ 20ಕ್ಕೂ ಹೆಚ್ಚು ಗ್ರಾಮಗಳಿಗೆ ಅನುಕೂಲವಾಗುತ್ತಿದೆ.

ಸಂತೇಶಿವರದ ಕೆರೆ

ರೈತರ ಮನವೊಲಿಸಿದ ಭೈರಪ್ಪ: ಯೋಜನೆಗೆ ಕಾರೇಹಳ್ಳಿ ಸಮೀಪ ಪೈಪ್‌ಲೈನ್ ಕಾಮಗಾರಿ ನಡೆಸಲು ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಭೈರಪ್ಪನವರೇ ಸ್ವತಃ ರೈತರನ್ನು ಭೇಟಿಯಾಗಿ ಮನವಿ ಮಾಡುವ ಮೂಲಕ ಯೋಜನೆ ಸಾಕಾರಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸಂತೆಶಿವರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬಂದಿದ್ದ ಪ್ರೊ.ಭೈರಪ್ಪ, ತಮ್ಮ ಕುಟುಂಬದ ಸದಸ್ಯರೊಂದಿಗೆ ಕೆರೆ ವೀಕ್ಷಿಸಿ ಸಂತಸಪಟ್ಟಿದ್ದರು.

ಕಾದಂಬರಿಗಳಲ್ಲಿ ತವರೂರ ಚಿತ್ರಣ...

‘ಕಾದಂಬರಿಗಳಲ್ಲಿ ಯಾವುದಾದರೂ ಒಂದು ಹಳ್ಳಿಯ ಚಿತ್ರಣ ಕೊಡಬೇಕು. ಹಳ್ಳಿ ಭಾಷೆ ಬಳಸಬೇಕು ಎಂದರೆ ನಾನು ಹುಟ್ಟಿದ ಹಾಸನ ಜಿಲ್ಲೆಯ ಹಳ್ಳಿ, ಭಾಷೆ ಚಿತ್ರಣ ಕೊಟ್ಟಿದ್ದೇನೆ. ನನಗೆ ಪಕ್ಕದ ಜಿಲ್ಲೆಯ ಹಳ್ಳಿ, ಭಾಷೆಯ ಚಿತ್ರಣ ಗೊತ್ತಿಲ್ಲ.’ 2022 ರಲ್ಲಿ ನಗರದಲ್ಲಿ ಆಯೋಜಿಸಿದ್ದ ಹೊಯ್ಸಳ ಸಾಹಿತ್ಯೋತ್ಸವದಲ್ಲಿ ಆಡಿದ ಪ್ರೊ.ಎಸ್.ಎಲ್‌. ಭೈರಪ್ಪನವರ ಈ ಮಾತುಗಳು, ತವರೂರಿನ ಅಭಿಮಾನ ಎತ್ತಿ ತೋರಿಸಿದ್ದವು.

‘ಒಂದು ಕಡೆ (ಸೀಮೆ)ಯಿಂದ ಇನ್ನೊಂದು ಕಡೆಗೆ ಹೋದರೆ ಭಾಷೆಯ ಛಾಯೆ ಬದಲಾಗಲಿದೆ. ಭಾಷಾ ತಜ್ಞರ ಪ್ರಕಾರ, 16 ಮೈಲಿಯವರೆಗೆ ಒಂದು ಭಾಷೆ ಇದ್ದರೆ, ನಂತರ ಅದರ ಛಾಯೆ ಬದಲಾಯಿಸುತ್ತದೆ. ಆದರೆ ಈಗ ಸೀಮೆಯ ಅಂತರ, ಭಾಷೆ ಒಂದಾಗಿದೆ’ ಎಂದಿದ್ದರು.

‘ನನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರು ಸಂತೇಶಿವರ, ನುಗ್ಗೇಹಳ್ಳಿ, ಬಾಗೂರು ಹಾಗೂ ಗೊರೂರಿನಲ್ಲಿ ಪೂರ್ಣಗೊಳಿಸಿದೆ. ನಾನು ಸಾಹಿತ್ಯ ಕ್ಷೇತ್ರದಲ್ಲಿ ಎಷ್ಟೇ ಸಾಧನೆ ಮಾಡಿದ್ದರೂ ಹುಟ್ಟೂರು ಎಂಬ ಅಭಿಮಾನ ನನ್ನನ್ನು ಬಿಡಲಿಲ್ಲ. ಇಂದಿಗೂ ನನ್ನನ್ನು ಸಂತೇಶಿವರದ ಎಸ್.ಎಲ್‌. ಭೈರಪ್ಪ ಎಂದೇ ಕರೆಯುತ್ತಾರೆ’ ಎಂದು ಹೆಮ್ಮೆಯಿಂದ ಹೇಳಿದ್ದರು.

ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಪ್ರೊ.ಭೈರಪ್ಪನವರ ಮನವಿಯಂತೆ ಸಂತೇಶಿವರ ಹಾಗೂ ಅಗ್ರಹಾರ ಬೆಳಗುಲಿ ಕೆರೆಗಳನ್ನು ತುಂಬಿಸುವ ಯೋಜನೆಗೆ ₹25 ಕೋಟಿ ಅನುದಾನ ನೀಡಲಾಗಿತ್ತು.
ಬಸವರಾಜ್‌ ಬೊಮ್ಮಾಯಿ, ಸಂಸದ
ಇದು ಶಾಶ್ವತ ಯೋಜನೆಯಾಗಿದ್ದು, ಮುಂದಿನ ತಲೆಮಾರಿನವರೂ ನೆನೆಯುತ್ತಾರೆ. ಈ ಯೋಜನೆಗೆ ಡಾ.ಎಸ್.ಎಲ್. ಭೈರಪ್ಪ ಏತ ನೀರಾವರಿ ಯೋಜನೆ ಎಂದು ಹೆಸರಿಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ.
ಸಿ.ಎನ್. ಬಾಲಕೃಷ್ಣ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.