ಅಲೂರು: ಪೌರಕಾರ್ಮಿಕರಿಗೆ ನಿವೇಶನ ದೊರಕಿಸುವ ಸಲುವಾಗಿ ಶೀಘ್ರದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ತಿಳಿಸಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಪೌರಕಾರ್ಮಿಕರಿಗೆ ನಿವೇಶನ ಹಂಚಿಕೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಕೂಡಲೇ ಹಂಚಿಕೆ ಮಾಡಬೇಕು’ ಎಂದು ಪೌರಕಾರ್ಮಿಕ ರವಿಕುಮಾರ್ ಅವರು ಮನವಿ ಮಾಡಿದ ಸಂದರ್ಭದಲ್ಲಿ ಈ ವಿಷಯ ತಿಳಿಸಿದರು.
ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ, ‘ನಿವೇಶನ ಹಂಚಿಕೆ ಕುರಿತು ಇದ್ದ ಕೆಲವು ತಾಂತ್ರಿಕ ಅಡಚಣೆಗಳನ್ನು ನಿವಾರಿಸಿ ಜಿಲ್ಲಾಧಿಕಾರಿಗಳ ಲಾಗಿನ್‍ಗೆ ಅಪಲೋಡ್ ಮಾಡಲಾಗಿದೆ. ಶೀಘ್ರ ಅವರನ್ನು ಭೇಟಿ ಮಾಡಿ ನಿವೇಶನ ಹಂಚಿಕೆ ಕುರಿತು ಮನವಿ ಮಾಡಲಾಗುವುದು. ಜಿಲ್ಲಾಧಿಕಾರಿ ಅವರು ಮನವಿಗೆ ಸ್ಪಂದಿಸುವ ವಿಶ್ವಾಸವಿದೆ’ ಎಂದು ಹೇಳಿದರು.
‘ಪೌರ ಕಾರ್ಮಿಕರ ಮತ್ತು ಕುಟುಂಬದ ಆರೋಗ್ಯ ಇನ್ನಿತರ ರಕ್ಷಣೆಗೆ ಸರ್ಕಾರ ಸದಾ ಸಿದ್ಧವಿದೆ. ಈಗಾಗಲೇ ಪಟ್ಟಣ ಪಂಚಾಯಿತಿಯಿಂದ ಸುಬ್ಬಮ್ಮ ಮತ್ತು ಲೊಕೇಶ್ ಇಬ್ಬರು ಪೌರ ಕಾರ್ಮಿಕರು ಸಿಂಗಪುರ ದೇಶಕ್ಕೆ ಭೇಟಿ ನೀಡಿ ಆ ದೇಶದ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿರುವುದು ವಿಶೇಷ’ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಾಹೆರಾಬೇಗಂ ಮಾತನಾಡಿ, ‘ಪೌರಕಾರ್ಮಿಕರು ಆರೋಗ್ಯವಂತರಾಗಿದ್ದರೆ ಸಮಾಜ ಆರೋಗ್ಯವಾಗಿರುತ್ತದೆ. ತಮ್ಮ ದೈನಂದಿನ ಕೆಲಸದ ಜೊತೆಗೆ ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪೌರ ಕಾರ್ಮಿಕರ ಇಬ್ಬರು ಮಕ್ಕಳಿಗೆ ಶಿಕ್ಷಣ ಅಭ್ಯುದಯಕ್ಕಾಗಿ ಈಗಾಗಲೆ ಲ್ಯಾಪ್‍ಟಾಪ್ ನೀಡಲಾಗಿದೆ. ಶಿಕ್ಷಣದಿಂದ ವಂಚಿತರಾಗಬಾರದು’ ಎಂದರು.
ಉಪಾಧ್ಯಕ್ಷೆ ಪ್ರೇಮ, ಸದಸ್ಯರಾದ ತೌಫಿಕ್, ಹರೀಶ್, ಧರ್ಮ, ಸಂತೋಷ್ ಮಾತನಾಡಿದರು. ಪಟ್ಟಣ ಪಂಚಾಯಿತಿ ಕಟ್ಟಡವನ್ನು ಹೂ, ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಆಟೋಟಗಳಲ್ಲಿ ವಿಜಯಿಗಳಾದ ಪೌರ ಕಾರ್ಮಿಕರ ಕುಟುಂಬದವರಿಗೆ ಬಹುಮಾನ ವಿತರಿಸಲಾಯಿತು. ನೀರುಗಂಟಿಗಳು ಸೇರಿದಂತೆ 32 ಪೌರ ಕಾರ್ಮಿಕರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.