ADVERTISEMENT

ಖಾತೆ ಹಂಚಿಕೆ ಸಿ.ಎಂಗೆ ಪರಮಾಧಿಕಾರ: ಸಚಿವ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 1:55 IST
Last Updated 23 ಜನವರಿ 2021, 1:55 IST

ಹಾಸನ:ಸಚಿವರ ಖಾತೆ ಬದಲಾವಣೆ ಬಗ್ಗೆ ಮಾಹಿತಿ ಇಲ್ಲ, ಯಾವುದೇ ಖಾತೆಗಳನ್ನು ನೀಡುವ ಪರಮಾಧಿಕಾರ ಮುಖ್ಯಮಂತ್ರಿಗೆ ಇದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

‘ಅಸಮಾಧಾನಗೊಂಡ ಯಾವ ಶಾಸಕರು ನನ್ನ ಜತೆ ಮಾತನಾಡಿಲ್ಲ. ಯಾರಾದರೂ ಅಸಮಾಧಾನಗೊಂಡಿದ್ದರೆ ಬೆಂಗಳೂರಿಗೆ ತೆರಳಿದ ಬಳಿಕ ಅವರೊಂದಿಗೆ ಮಾತನಾಡುವೆ. ಕೋವಿಡ್‌ ಸಂಕಷ್ಟದಲ್ಲಿ ತುಂಬ ಯಶಸ್ವಿಯಾಗಿ ಆಡಳಿತ ನಿಭಾಯಿಸಿದ್ದೇವೆ. ಹಾಗಾಗಿ ಮುಖ್ಯಮಂತ್ರಿ ಬೆಂಬಲಕ್ಕೆ ನಿಲ್ಲುವಂತೆ ಮಿತ್ರ ಮಂಡಳಿ ಹಾಗೂ ಇತರೆ ಶಾಸಕರಲ್ಲಿ ಮನವಿ ಮಾಡುತ್ತೇನೆ. ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ ಅವುಗಳನ್ನು ಮುಖ್ಯಮಂತ್ರಿ ಸಮರ್ಥವಾಗಿ ನಿಭಾಯಿಸುತ್ತಾರೆ’ ಎಂದರು.

ಇದೇ ವೇಳೆಜಲಸಂಪನ್ಮೂಲ ಸಚಿವರು ಸುರಂಗ ಮಾರ್ಗ ವೀಕ್ಷಣೆಗೆ ಭೇಟಿ ನೀಡಿರುವ ಸುದ್ದಿ ತಿಳಿದು ಸ್ಥಳಕ್ಕೆ ಬಂದಿದ್ದ ಯೋಜನೆ ಭೂ ಸಂತ್ರಸ್ತ ಪಡುವಳಲು ಗ್ರಾಮದ ಚಂದ್ರೇಗೌಡ ಮಾತನಾಡಿ, ‘ ಇದುವರೆಗೂ ಪರಿಹಾರ ನೀಡಿಲ್ಲ. ಜಮೀನು ಬಿಡುವಂತೆ ಹೆದರಿಸುವುದು ನಿರಂತರವಾಗಿ ನಡೆಯುತ್ತಿದೆ. ಪರಿಹಾರದ ಹಣ ನೀಡುವ ವರೆಗೂಯೋಜನೆಗೆ ಜಮೀನು ಬಿಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಬೆಟ್ಟದಾಲುರು ಗ್ರಾಮದ ಚಂದ್ರಶೇಖರ್ ಮಾತನಾಡಿ, ‘ನಮ್ಮ 3 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಕಾಮಗಾರಿ ನಡೆಸಲು ₹ 1,600 ಕೋಟಿ ಹಣ ಬಿಡುಗಡೆಯಾಗಿದೆ. ಆದರೆ, ರೈತರಿಗೆ ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲ. ತಾತ್ಕಾಲಿಕ ಪರಿಹಾರ ಬೇಡ, ಭೂಮಿಗೆ ಬೆಲೆ ನಿಗದಿ ಮಾಡಿ. ಇಲ್ಲದಿದ್ದರೆ ಮುಂದಿನ ಕಾಮಗಾರಿ ನಡೆಸಲು ಬಿಡುವುದಿಲ್ಲ’ ಎಂದರು.

ಸಚಿವರು ಮಾಧ್ಯಮಗೋಷ್ಠಿ ಮುಗಿಸುತ್ತಿದ್ದಂತೆಸಂತ್ರಸ್ತರು ಪರಿಹಾರ ನೀಡುವಂತೆ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಕೆ.ಎಸ್. ಲಿಂಗೇಶ್ ಮಾತನಾಡಿ, ಎತ್ತಿನಹೊಳೆ ಯೋಜನೆಗೆ 3,900 ಎಕರೆ ಜಮೀನನ್ನು ರೈತರು ಕಳೆದುಕೊಳ್ಳುತ್ತಿದ್ದಾರೆ. ಕಾಮಗಾರಿ ಬೇಗ ಮುಗಿಸುವ ಉದ್ದೇಶದಿಂದ ತಾತ್ಕಾಲಿಕವಾಗಿ ₹ 50 ಸಾವಿರದಂತೆ ಬೆಳೆ ಪರಿಹಾರ ನೀಡಿ, ಕಾಮಗಾರಿ ನಡೆಸಲಾಗಿದೆ. ಸರ್ಕಾರ 1:4 ಅನುಪಾತದಲ್ಲಿ ಪರಿಹಾರ ನೀಡಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.