ADVERTISEMENT

ಅರಕಲಗೂಡು | ಎಸ್‌ಎಸ್ಎಲ್‌ಸಿ: ಉತ್ತಮ ಫಲಿತಾಂಶಕ್ಕೆ ಹತ್ತು ಹಲವು ಸೂತ್ರ

ಶೇ 100 ರಷ್ಟು ಫಲಿತಾಂಶ ಸಾಧಿಸಲು ಶಿಕ್ಷಣ ಇಲಾಖೆ ಗುರಿ

ಜಿ.ಚಂದ್ರಶೇಖರ್‌
Published 1 ಫೆಬ್ರುವರಿ 2025, 5:58 IST
Last Updated 1 ಫೆಬ್ರುವರಿ 2025, 5:58 IST
ಅರಕಲಗೂಡು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ. ನಾರಾಯಣ್ ಅವರು ರಾತ್ರಿ ವೇಳೆ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಕಲಿಕಾ ಮಟ್ಟ ಪರಿಶೀಲಿಸಿದರು.
ಅರಕಲಗೂಡು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ. ನಾರಾಯಣ್ ಅವರು ರಾತ್ರಿ ವೇಳೆ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಕಲಿಕಾ ಮಟ್ಟ ಪರಿಶೀಲಿಸಿದರು.   

ಅರಕಲಗೂಡು: ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಶಿಕ್ಷಣ ಇಲಾಖೆ ಹಲವು ಕ್ರಮಗಳ ಮೂಲಕ ಶ್ರಮಿಸುತ್ತಿದೆ.

ಈ ಬಾರಿ ಪರೀಕ್ಷೆ ಬರೆಯಲು ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳು ಸೇರಿದಂತೆ ಒಟ್ಟು 58 ಪ್ರೌಢಶಾಲೆಗಳ 2,334 ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗೆ ಹಾಜರಾಗಲಿದ್ದಾರೆ. ಈ ಸಲ ಫಲಿತಾಂಶದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಸತತ ಪ್ರಯತ್ನ ನಡೆಸಿರುವ ಶಿಕ್ಷಣ ಇಲಾಖೆ, ಹಲವು ಕ್ರಮ ಅನುಸರಿಸುತ್ತಿದೆ.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಫಲಿತಾಂಶ ಕುಸಿದಿದ್ದರಿಂದ ಈ ಬಾರಿ ಶೇ 100 ರಷ್ಟು ಗುರಿ ಇಟ್ಟುಕೊಂಡು ಹಲವು ಮುಂಜಾಗ್ರತಾ ಕಾರ್ಯಕ್ರಮ ಜಾರಿ ಮಾಡಲಾಗಿದೆ.

ADVERTISEMENT

ಪ್ರತಿ ತಿಂಗಳು ತಾಯಂದಿರ ಸಭೆ, ಶೇ 100 ಫಲಿತಾಂಶ ಪಡೆದ ಶಾಲೆಗಳಿಗೆ ಅಭಿನಂದನಾ ಪತ್ರ, ತಾಲ್ಲೂಕಿನ 800 ಶಿಕ್ಷಕರನ್ನು ಉತ್ತೇಜಿಸಲು ಅಭಿನಂದನಾ ಪತ್ರ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೆಲ್ಲರಿಗೂ ಶೈಕ್ಷಣಿಕ ಪ್ರಗತಿ ಪತ್ರ, ತಿಂಗಳ ಗುರಿ-5 ಪರಿಕಲ್ಪನೆ, ಪ್ರತಿ ತಿಂಗಳ ಶನಿವಾರ ಬರವಣಿಗೆಗೆ ಹೆಚ್ಚಿನ ಪ್ರಾಶಸ್ತ್ಯ, ತಾಲ್ಲೂಕಿನಾದ್ಯಂತ ಏಕಕಾಲಕ್ಕೆ ಪಠ್ಯ ಮುಗಿಸುವಂತೆ ಸಾಮಾನ್ಯ ವೇಳಾಪಟ್ಟಿ, ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಪ್ರತಿ ಪರೀಕ್ಷೆಯಲ್ಲಿ ಮೊದಲ 10 ಹಾಗೂ ಕಡೆಯ 5 ಸ್ಥಾನ ಪಟ್ಟಿ ಮಾಡುವಿಕೆ, ಮಕ್ಕಳಿಗೆ ತಾಲ್ಲೂಕು ಮಟ್ಟದ ರಸಪ್ರಶ್ನೆ, ವಿಜ್ಞಾನ ಚಿತ್ರ, ಗಣಿತ ಸೂತ್ರ ಹಾಗೂ ಸಮಾಜ ವಿಜ್ಞಾನದ ಭೂಪಟಗಳಿರುವ ಕಿರುಪುಸ್ತಕ, ಕನಿಷ್ಠ ಉತ್ತೀರ್ಣರಾಗಲು ಟಾರ್ಗೆಟ್-40 ಪುಸ್ತಕ, 625 ಕ್ಕೆ 625 ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಒಂದು ದಿನದ ಕಾರ್ಯಾಗಾರ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಸಹ ಶಿಕ್ಷಕರ, ಮುಖ್ಯಶಿಕ್ಷಕರ ಹಾಗೂ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಆರ್ಥಿಕ ನೆರವು ನೀಡಿದ್ದಾರೆ.

ದಿಢೀರ್ ಮನೆ ಭೇಟಿ: ಪರೀಕ್ಷಾ ಸಮಯ ಹತ್ತಿರ ಬರುತ್ತಿದ್ದಂತೆ ಆಯಾ ಹೋಬಳಿ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಹಾಗೂ ಕಚೇರಿಯ ಶಿಕ್ಷಣ ಸಂಯೋಜನಾಧಿಕಾರಿಗಳ ಸಹಕಾರದೊಂದಿಗೆ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಲಾಗುತ್ತಿದೆ.

ಈ ವೇಳೆ ವಿದ್ಯಾರ್ಥಿಗಳ ಕಲಿಕಾ ವಾತಾವರಣ, ಮನೆ ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ, ಪಾಲಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ.

ಟಿವಿ ಹಾಗೂ ಮೊಬೈಲ್ ನಿಷೇಧ, ಓದುವ ಸಮಯದಲ್ಲಿ ಸಮರ್ಪಕ ಬೆಳಕು, ಕುರ್ಚಿ, ಟೇಬಲ್ ವ್ಯವಸ್ಥೆ, ಮನೆ ವೇಳಾಪಟ್ಟಿ, ಮುಖ್ಯ ಅಂಶಗಳ ಚಾರ್ಟ್ ತಯಾರಿಕೆ ಕುರಿತು ಮಾಹಿತಿ ನೀಡಿ, ವಿದ್ಯಾರ್ಥಿಗಳು ಪರೀಕ್ಷೆ ಮುಗಿಯುವವರೆಗೆ ಸಂಪರ್ಕದಲ್ಲಿರುವಂತೆ ತಿಳಿಸಲಾಗುತ್ತದೆ. ತಮ್ಮ ಖಾಸಗಿ ಮೊಬೈಲ್ ಸಂಖ್ಯೆ ನೀಡಿ, ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಲಾಗುತ್ತಿದೆ. ಈ ಬಾರಿ ಫಲಿತಾಂಶದಲ್ಲಿ ಉತ್ತಮ ಸುಧಾರಣೆ ತರುವ ಉದ್ದೇಶದಿಂದ ಶಿಕ್ಷಣ ಇಲಾಖೆ ಅವಿರತವಾಗಿ ಶ್ರಮಿಸುತ್ತಿದೆ.

ಕಳೆದ ವರ್ಷ ಜಿಲ್ಲೆಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದ್ದ ತಾಲ್ಲೂಕು 2269 ರಲ್ಲಿ 1,852 ವಿದ್ಯಾರ್ಥಿಗಳು ತೇರ್ಗಡೆ: ಶೇ 81.62 ಫಲಿತಾಂಶ ಈ ಬಾರಿ 2,334 ವಿದ್ಯಾರ್ಥಿಗಳು ಪರೀಕ್ಷೆಗೆ: ಶೇ 100 ಫಲಿತಾಂಶದ ಗುರಿ
ಕಲಿಕಾ ಮಟ್ಟ ಅರಿಯಲು ರಾತ್ರಿ ವೇಳೆ ಮನೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಕಲಿಕೆಗಾಗಿ ಮಕ್ಕಳಿಗೆ ಸೂಕ್ತ ವಾತಾವರಣ ಕಲ್ಪಿಸುವಂತೆ ಪಾಲಕರಿಗೆ ತಿಳಿ ಹೇಳಲಾಗಿದೆ.
ಕೆ.ಪಿ. ನಾರಾಯಣ್ ಕ್ಷೇತ್ರ ಶಿಕ್ಷಣಾಧಿಕಾರಿ
ಜೂನ್‌ನಿಂದ ವಿಶೇಷ ತರಗತಿ ನವೆಂಬರ್‌ನಿಂದ ಗುಂಪು ಅಧ್ಯಯನ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಶಿಕ್ಷಕರಿಗೆ ದತ್ತು ನೀಡಿ ಗಮನ ಹರಿಸಲು ತಿಳಿಸಲಾಗಿದೆ.
ಬೊರಣ್ಣಗೌಡ ಬಾಲಕಿಯರ ಸರ್ಕಾರಿ ಪ.ಪೂ ಕಾಲೇಜು ಉಪ ಪ್ರಾಂಶುಪಾಲ
ಬಿಇಒ ಅವರು ಕಲಿಕಾ ಯೋಜನೆಗಳನ್ನು ಜಾರಿ ಮಾಡಿದ್ದರಿಂದ ಶಾಲಾ ಪರೀಕ್ಷೆಯಲ್ಲಿ ಟಾಪ್ 10 ರೊಳಗೆ ಸ್ಥಾನಗಳಿಸಲು ಸಾಧ್ಯವಾಯಿತು. ಓದಿಗೆ ಪೂರಕ ವಾತಾವರಣ ಒದಗಿಸಲಾಗಿದೆ.
ಶ್ರೇಯಾ ಕಂಚಿರಾಯ ಅನುದಾನಿತ ಪ್ರೌಢಶಾಲೆ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.