ನುಗ್ಗೇಹಳ್ಳಿ: ‘ರಾಜ್ಯದಲ್ಲಿ ಯೂರಿಯಾ ಹಾಗೂ ರಸಗೊಬ್ಬರ ಅಭಾವಕ್ಕೆ ರಾಜ್ಯ ಸರ್ಕಾರದ ಅಸಹಕಾರ ಹಾಗೂ ನಿರ್ಲಕ್ಷವೇ ಕಾರಣ. ಇದಕ್ಕೆ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ’ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಹೋಬಳಿಯ ಹೊನ್ನ ಮಾರನಹಳ್ಳಿ ಗ್ರಾಮದಲ್ಲಿ ಹೋಬಳಿ ರೈತ ಸಂಪರ್ಕ ಕೇಂದ್ರದ ವತಿಯಿಂದ ಎಫ್ಎನ್ಎಸ್ ಆಹಾರ ಮತ್ತು ಪೌಷ್ಟಿಕಾಂಶ ಯೋಜನೆ ಅಡಿಯಲ್ಲಿ ಬಿತ್ತನೆ ರಾಗಿ ಮತ್ತು ಸಾವಯವ ಗೊಬ್ಬರ ಹಾಗೂ ಕೃಷಿ ಪರಿಕರಣಗಳನ್ನು ಉಚಿತವಾಗಿ ರೈತರಿಗೆ ವಿತರಿಸಿ ಮಾತನಾಡಿದರು.
‘ಯೂರಿಯಾ ಮತ್ತು ಗೊಬ್ಬರ ಅಭಾವ ಉಂಟಾಗಿದ್ದು ಇದರಿಂದ ಕೆಲವು ಕಡೆಗಳಲ್ಲಿ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಸಮಸ್ಯೆಯಾಗುತ್ತಿದೆ. ರಾಜ್ಯ ಸರ್ಕಾರ ಮುಂಗಾರು ಪ್ರಾರಂಭದಲ್ಲೇ ತಜ್ಞರಿಂದ ಮಾಹಿತಿ ಪಡೆದು ಹೆಚ್ಚಿನ ದಾಸ್ತಾನು ಇರಿಸಲು ಮುತುವರ್ಜಿ ವಹಿಸಬೇಕಿತ್ತು. ಈಗಲೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ವಾರದೊಳಗೆ ಹೆಚ್ಚಿನ ದಾಸ್ತಾನು ತರಿಸಿ ರೈತರಿಗೆ ನೆರವಾಗಬೇಕು’ ಎಂದು ಮನವಿ ಮಾಡಿದರು.
‘ಜಿಲ್ಲೆಯಲ್ಲಿ ಹೆಚ್ಚಿನ ಅಭಾವ ಉಂಟಾಗಿಲ್ಲ, ತಾಲ್ಲೂಕಿನ ಎಲ್ಲಾ ಸಹಕಾರ ಸಂಘಗಳ ಮೂಲಕವೂ ಯೂರಿಯಾ ಮತ್ತು ರಸಗೊಬ್ಬರ ಮಾರಾಟಕ್ಕೆ ಹೆಚ್ಚಿನ ಅನುವು ಮಾಡಿಕೊಟ್ಟಿದ್ದರಿಂದ ಸಮಸ್ಯೆ ಉದ್ಭವಿಸಿಲ್ಲ’ ಎಂದರು.
‘ಎಫ್ಎನ್ಎಸ್ ಯೋಜನೆಯಲ್ಲಿ ಒಬ್ಬ ರೈತರಿಗೆ ₹2,311 ವೆಚ್ಚದಲ್ಲಿ ರಾಗಿ ಮತ್ತು ಸಾವಯವ ಗೊಬ್ಬರ, ಬೇವಿನ ಎಣ್ಣೆ ಕೀಟನಾಶಕ ಸೇರಿದಂತೆ ಇನ್ನಿತರ ಕೃಷಿ ಪರಿಕರಗಳನ್ನು ಸುಮಾರು 280 ರೈತರಿಗೆ ₹6.50 ಲಕ್ಷ ವೆಚ್ಚದಲ್ಲಿ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ರಾಗಿ ವಿಮೆಗೆ ಆಗಸ್ಟ್ 16 ಕೊನೆಯ ದಿನವಾಗಿದ್ದು, ಎಲ್ಲರೂ ತಪ್ಪದೇ ನೋಂದಾಯಿಸಿಕೊಳ್ಳುವಂತೆ’ ಸಲಹೆ ನೀಡಿದರು.
‘ಹೋಬಳಿ ವ್ಯಾಪ್ತಿಯ 1,500 ರೈತರಿಗೆ ಸ್ಪಿಂಕ್ಲರ್ ಸೆಟ್ ಹಾಗೂ 500 ರೈತರಿಗೆ ಸಹಾಯಧನದಲ್ಲಿ ಪಿವಿಸಿ ಪೈಪ್ ನೀಡಲಾಗಿದೆ. ಮುಂಬರುವ ದಿನಗಳಲ್ಲೂ ಬೇಡಿಕೆಗೆ ಅನುಗುಣವಾಗಿ ರೈತರಿಗೆ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ’ ಎಂದರು.
‘ತಾಲ್ಲೂಕಿನಲ್ಲಿ ತೆಂಗು ಬೆಳೆಗೆ ನುಸಿ, ಗರಿ ಚುಕ್ಕೆ ರೋಗ, ಕೊಳೆ ರೋಗ ಸೇರಿದಂತೆ ಅನೇಕ ಕಾಯಿಲೆಗಳು ಹರಡಿದ್ದು, ಈ ಸಮಸ್ಯೆ ಬಗ್ಗೆ ಆಗಸ್ಟ್‌ನಲ್ಲಿ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು’ ಎಂದರು.
ಕಾರ್ಯಕ್ರಮದಲ್ಲಿ ನುಗ್ಗೇಹಳ್ಳಿ ಗ್ರಾ.ಪಂ.ಅಧ್ಯಕ್ಷ ಎನ್.ಆರ್.ಶಿವಕುಮಾರ್, ಸದಸ್ಯೆ ಸವಿತಾ ಯೋಗೀಶ್, ಹೋಬಳಿ ಕೃಷಿ ಅಧಿಕಾರಿ ಜಿ.ವಿ. ದಿನೇಶ್, ಮುಖಂಡರಾದ ದೊರೆಸ್ವಾಮಿ, ಎಚ್.ಬಿ.ವಿಠ್ಠಲ್ ಕುಮಾರ್, ಎಚ್.ಬಿ.ರಂಗಸ್ವಾಮಿ, ಸಂಪತ್ ಕುಮಾರ್, ತೋಟಿ ನಾಗರಾಜ್, ಹೊನ್ನೇಗೌಡ, ನಟರಾಜ್ ಯಾದವ್, ಮಂಜುನಾಥ್, ಮಂಜಣ್ಣ, ಬಸವರಾಜು, ಶಿವಣ್ಣ, ಬೋರೇಗೌಡ, ಕೃಷ್ಣಮೂರ್ತಿ, ಸುರೇಶ್, ಜಯರಾಮ್, ಕಾಂತರಾಜ್, ದೇವರಾಜ್, ಶೇಖರ್, ಕೃಷಿ ಇಲಾಖೆ ಸಿಬ್ಬಂದಿ ವಿಜಯಕುಮಾರ್, ರಾಜೇಶ್ವರಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.