ಹಾಸನ: ಪರಿಷ್ಕೃತ ಕನಿಷ್ಠ ವೇತನದ ಅಂತಿಮ ಅಧಿಸೂಚನೆ ಹೊರಡಿಸಲು ಮತ್ತು ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಲು ವಿಶೇಷ ಕಾನೂನನ್ನು ರಚಿಸಲು ಸರ್ಕಾರ ವಿಫಲವಾದರೆ, ಕರ್ನಾಟಕದಾದ್ಯಂತ ಇನ್ನಷ್ಟು ತೀವ್ರವಾದ ಹೋರಾಟ ಆರಂಭಿಸಲಾಗುವುದು ಎಂದು ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷ ಎಸ್. ವರಲಕ್ಷ್ಮಿ ಎಚ್ಚರಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದ ಅವರು, ‘ಸಿಐಟಿಯು ಮಂಡಿಸಿರುವ ಬೇಡಿಕೆಗಳು ಏಕಾಏಕಿ ಮಾಡಿದ ಆಗ್ರಹಗಳಲ್ಲ. ಬದಲಾಗಿ ಹಲವು ವರ್ಷಗಳಿಂದ ನಡೆಯುತ್ತಿರುವ ವೇತನ ದಮನ ಮತ್ತು ಉದ್ಯೋಗ ಭದ್ರತೆಯ ವ್ಯವಸ್ಥಿತ ನಾಶದ ನೇರ ಪರಿಣಾಮ’ ಎಂದರು.
‘ರಾಜ್ಯ ಸರ್ಕಾರವು ತನ್ನ ಕರಡು ಅಧಿಸೂಚನೆಯಲ್ಲಿ ಕೌಶಲ ಮತ್ತು ವಲಯಗಳ ಆಧಾರದ ಮೇಲೆ ₹23ಸಾವಿರದಿಂದ ₹30ಸಾವಿರದವರೆಗೆ ವೇತನ ಪ್ರಸ್ತಾಪಿಸಿದೆ. ಆದರೆ ಸಿಐಟಿಯು ಇದನ್ನು ತಿರಸ್ಕರಿಸಿದ್ದು, ನಮ್ಮ ಲೆಕ್ಕಾಚಾರದ ಪ್ರಕಾರ ₹36ಸಾವಿರ ನ್ಯಾಯಸಮ್ಮತ ಎಂದು ಪ್ರತಿಪಾದಿಸಿದೆ’ ಎಂದರು.
ಲಕ್ಷಾಂತರ ಕೋಟಿ ರೂಪಾಯಿ ವ್ಯವಹಾರ ನಡೆಸುವ ಉದ್ಯಮಗಳಲ್ಲಿಯೂ ಕಾರ್ಮಿಕರ ಶೋಷಣೆ ಮುಂದುವರಿದಿದೆ. ಪ್ಲಾಂಟೇಶನ್ ಕಾರ್ಮಿಕರಿಗೆ ದಿನಕ್ಕೆ ಕೇವಲ ₹461, ಬೀಡಿ ಕಾರ್ಮಿಕರಿಗೆ ದಿನಕ್ಕೆ ₹350 ಕೂಡ ಕೂಲಿ ದಾಟುತ್ತಿಲ್ಲ. ಗಾರ್ಮೆಂಟ್ಸ್ ಕಾರ್ಮಿಕರ ವೇತನ ಸ್ಥಗಿತಗೊಂಡಿರುವುದು ಈ ಶೋಷಣೆಗೆ ಸ್ಪಷ್ಟ ನಿದರ್ಶನ. ವಿಪರ್ಯಾಸವೆಂದರೆ, ಪ್ಲಾಂಟೇಶನ್ ಮತ್ತು ಬೀಡಿ ಉದ್ಯಮಗಳನ್ನು ನಷ್ಟದಲ್ಲಿರುವ ಕೈಗಾರಿಕೆಗಳು (ಸಿಕ್ ಇಂಡಸ್ಟ್ರಿ) ಎಂದು ಬಿಂಬಿಸಿ ವೇತನ ಹೆಚ್ಚಳಕ್ಕೆ ತಡೆಯೊಡ್ಡಲಾಗುತ್ತಿದೆ. ವಾಸ್ತವದಲ್ಲಿ ಈ ವಲಯಗಳು ಲಕ್ಷಾಂತರ ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿವೆ ಎಂದು ಹೇಳಿದರು.
‘ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ವ್ಯಾಖ್ಯಾನಿಸುವ ಗೌರವಯುತ ಉದ್ಯೋಗದ ಪರಿಕಲ್ಪನೆಯು ಇಂದು ಕಣ್ಮರೆಯಾಗುತ್ತಿದ್ದು, ಅದರ ಸ್ಥಾನವನ್ನು ಗುತ್ತಿಗೆ, ಹೊರಗುತ್ತಿಗೆ, ನೀಮ್ ಮತ್ತು ನೆಟಾಪ್‌ನಂತಹ ಕಾಯಂ ಅಲ್ಲದ ಉದ್ಯೋಗಗಳು ಆಕ್ರಮಿಸಿಕೊಳ್ಳುತ್ತಿವೆ. ಖಾಸಗಿ ಉತ್ಪಾದನಾ ವಲಯದಲ್ಲಿ ಶೇ 50ಕ್ಕಿಂತ ಹೆಚ್ಚು ಮತ್ತು ಸರ್ಕಾರಿ ಸೇವೆಗಳಲ್ಲಿ ಶೇ 60ಕ್ಕಿಂತ ಹೆಚ್ಚು ಕಾರ್ಮಿಕರು ಇಂತಹ ಅಸುರಕ್ಷಿತ ಉದ್ಯೋಗಗಳಲ್ಲೇ ದುಡಿಯುತ್ತಿದ್ದಾರೆ’ ಎಂದು ತಿಳಿಸಿದರು.
ಇದರ ಪರಿಣಾಮವಾಗಿ ಪ್ರತಿ ವರ್ಷ ಗುತ್ತಿಗೆ ನವೀಕರಣವಾಗುವುದೋ ಇಲ್ಲವೋ ಎಂಬ ಭಯ, ಶಾಸನಾತ್ಮಕ ಸೌಲಭ್ಯಗಳ ನಿರಾಕರಣೆ ಮತ್ತು ಹಕ್ಕುಗಳ ದಮನವನ್ನು ಕಾರ್ಮಿಕರು ಎದುರಿಸುತ್ತಿದ್ದಾರೆ. ಇದಕ್ಕೆ ಗದಗ ಜಿಲ್ಲೆಯ ಘಟನೆಯೇ ಸ್ಪಷ್ಟ ಉದಾಹರಣೆ. ಅಲ್ಲಿ ಐಸಿಪಿಎಸ್ ಘಟಕದ ಹೊರಗುತ್ತಿಗೆ ನೌಕರರು ತಮ್ಮನ್ನು ಕಾಯಂಗೊಳಿಸಬೇಕೆಂದು ನ್ಯಾಯಾಲಯದ ಮೊರೆ ಹೋದರು. ಇದೇ ಕಾರಣಕ್ಕೆ, ಜಿಲ್ಲಾಧಿಕಾರಿ ಅವರನ್ನು ಬಂಧಿಸುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಇದು ಗುತ್ತಿಗೆ ಕಾರ್ಮಿಕರು ಎದುರಿಸುತ್ತಿರುವ ತೀವ್ರ ಶೋಷಣೆಯನ್ನು ಬಿಂಬಿಸುತ್ತದೆ ಎಂದು ಹೇಳಿದರು.
ರಾಷ್ಟ್ರೀಯ ಕಾರ್ಯದರ್ಶಿ ಕೆ.ಎನ್. ಉಮೇಶ್, ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್, ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಎಂ.ಬಿ., ರಾಜ್ಯ ಘಟಕದ ಕಾರ್ಯದರ್ಶಿ ಯಮುನಾ ಗಾಂವ್ಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.