ಹಾಸನ: ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ ನಗರ ಪ್ರದೇಶಗಳಲ್ಲಿ ಕಡಿಮೆಯಾಗುತ್ತಿದ್ದು, ಚುರುಕುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿ ಹೇಳಿದರು.
ನಗರದ ಹಿಮ್ಸ್ ಆಸ್ಪತ್ರೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಯ ಪ್ರಗತಿಯ ಕುರಿತು ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಹಾಸನದಲ್ಲಿ 400 ಜನರ ಪೈಕಿ 100 ಜನರು ಮಾತ್ರ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಇದು ಅತ್ಯಂತ ಕಡಿಮೆ ಸಾಧನೆಯಾಗಿದೆ. ವಿಧಾನಸಭಾ ಕ್ಷೇತ್ರವಾರು ಅಂಕಿ–ಅಂಶ ಪಡೆದು, ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಸಮೀಕ್ಷೆಯನ್ನು ಚುರುಕುಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ದೇಶದ ಯಾವುದೇ ರಾಜ್ಯದಲ್ಲಿ ಸಮೀಕ್ಷೆ ಮಾಡುತ್ತಿಲ್ಲ. ಕರ್ನಾಟಕದಲ್ಲಿ ಮಾತ್ರ ಇಂತಹ ಪ್ರಯತ್ನ ನಡೆದಿದೆ. ಲಿಂಗತ್ವ ಅಲ್ಪಸಂಖ್ಯಾತರು ಹಲವಾರು ನೋವುಗಳನ್ನು ಅನುಭವಿಸಿದ್ದಾರೆ. ಅವರನ್ನು ಗುರುತಿಸುವ ಉದ್ದೇಶದಿಂದ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದರು.
ಇವರಲ್ಲಿ ವಿದ್ಯಾವಂತರೂ ಹೆಚ್ಚಾಗಿದ್ದಾರೆ. ಉದ್ಯೋಗದಲ್ಲಿ ಶೇ 1 ರಷ್ಟು ಮೀಸಲಾತಿ ಇದ್ದು, ಅದರಲ್ಲಿ ಏನೂ ಮಾಡಲು ಆಗುವುದಿಲ್ಲ. ಲಿಂಗತ್ವ ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲು ಅಂಕಿ–ಅಂಶಗಳು ಅಗತ್ಯವಾಗಿದ್ದು, ಅದಕ್ಕಾಗಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಲಿಂಗತ್ವ ಅಲ್ಪಸಂಖ್ಯಾತರು ಭಿಕ್ಷಾಟನೆ ಮಾಡಬಾರದು. ಅದಕ್ಕೆ ಅವರಿಗೆ ಸ್ವಾವಲಂಬಿ ಬದುಕು ಒದಗಿಸಲು ಸರ್ಕಾರ ಯೋಜನೆ ರೂಪಿಸಲಿದೆ. ಸ್ವಯಂ ಉದ್ಯೋಗ, ಸರ್ಕಾರಿ ಉದ್ಯೋಗ ಸೇರಿದಂತೆ ಲಿಂಗತ್ವ ಅಲ್ಪಸಂಖ್ಯಾತರಿಗೆ ಒಳ್ಳೆಯ ಜೀವನ ಒದಗಿಸಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.
ನಿಗಮದ ಪ್ರಧಾನ ವ್ಯವಸ್ಥಾಪಕಿ ಅಕ್ಕಮಹಾದೇವಿ, ಅಭಿವೃದ್ಧಿ ನಿರೀಕ್ಷಕಿ ಕಾಳಾ, ಕಾರ್ಯಕ್ರಮ ಅಧಿಕಾರಿ ಪವಿತ್ರಾ, ರೂಪಾ, ಅಧಿಕಾರಿಗಳು, ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದ ಪ್ರತಿನಿಧಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.