ADVERTISEMENT

ಜೀವನದ ಯಶಸ್ಸಿಗೆ ಭದ್ರ ಬುನಾದಿ ಅಗತ್ಯ: ಶಂಭುನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 1:55 IST
Last Updated 3 ಆಗಸ್ಟ್ 2025, 1:55 IST
ಅರಸೀಕೆರೆ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಫ್ರೆಶರ್ಸ್‌ ಡೇ ಕಾರ್ಯಕ್ರಮದಲ್ಲಿ ದ್ವೀತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಹಾಗೂ ಪ್ರಾಂಶುಪಾಲ ಲಿಂಗರಾಜು ಭಾಗವಹಿಸಿದ್ದರು
ಅರಸೀಕೆರೆ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಫ್ರೆಶರ್ಸ್‌ ಡೇ ಕಾರ್ಯಕ್ರಮದಲ್ಲಿ ದ್ವೀತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಹಾಗೂ ಪ್ರಾಂಶುಪಾಲ ಲಿಂಗರಾಜು ಭಾಗವಹಿಸಿದ್ದರು   

ಅರಸೀಕೆರೆ: ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ್ದಾಗಿದ್ದು, ಈ ಹಂತದಲ್ಲಿ ಜೀವನದ ಯಶಸ್ಸಿಗೆ ಭದ್ರ ಬುನಾದಿ ಹಾಕಬೇಕು ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮಿಜೀ ಹೇಳಿದರು.

ನಗರದ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜು ಹಾಗೂ ಫ್ರೌಢಶಾಲೆ ವತಿಯಿಂದ ಜೇನುಕಲ್ಲು ಮಾಂಗಲ್ಯ ಮಂದಿರದಲ್ಲಿ ಶನಿವಾರ ನಡೆದ ಫ್ರೆಶರ್ಸ್‌ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನವನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಬದುಕನ್ನು ರೂಪಿಸುವ ಜವಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಸುಳ್ಳಿನಿಂದ ಕ್ಷಣಿಕ ಸುಖ ಸಿಕ್ಕರೂ ಅದು ಶಾಶ್ವತವಲ್ಲ. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತ ಆಗುವುದು ಬೇಡ, ಒಳ್ಳೆಯ ವಿಚಾರಗಳನ್ನು ಕಲಿತುಕೊಳ್ಳಬೇಕು. ಜತೆಗೆ ಆಟೋಟಗಳಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು. ಒಳ್ಳೆಯ ಹವ್ಯಾಸಗಳನ್ನೂ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಇದು ಸ್ಪರ್ಧಾತ್ಮಕ ಕಾಲ, ವಿದ್ಯಾರ್ಥಿಗಳು ಸಮಯವನ್ನು ಸರಿಯಾಗಿ ಸಮರ್ಪಕವಾಗಿ ಬಳಸಿಕೊಂಡು ಉನ್ನತ ಶಿಕ್ಷಣದತ್ತ ಗಮನಹರಿಸಬೇಕು. ಮೊಬೈಲ್‌ ಫೋನ್‌ಗಳಿಂದ ದೂರವಿದ್ದು ಪೋಷಕರ ಕನಸನ್ನು ನನಸು ಮಾಡಬೇಕು. ಪ್ರತಿದಿನ 6 ರಿಂದ 8 ಗಂಟೆಗಳ ಕಾಲ ಅಭ್ಯಾಸದಲ್ಲಿ ತೊಡಗಿಕೊಳ್ಳಬೇಕು. ಪರೀಕ್ಷೆ ಸಮಯದಲ್ಲಿ ಓದುವ ವಿದ್ಯಾರ್ಥಿಗಳು ಹೆಚ್ಚು, ಆದ್ದರಿಂದ ಪ್ರತಿದಿನ ಅಭ್ಯಾಸ ಮಾಡುವುದರಿಂದ ಯಶಸ್ಸನ್ನು ಪಡೆಯಬಹುದು ಎಂದರು.

ಇಂದು ಎಲ್ಲ ಹುದ್ದೆಗಳಿಗೂ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡುತ್ತಿದ್ದು, ವಿದ್ಯಾರ್ಥಿಗಳು ಕಠಿಣ ಅಭ್ಯಾಸದಲ್ಲಿ ಮಗ್ನರಾಗಬೇಕು. ಶಿಕ್ಷಣಕ್ಕಾಗಿ ಆದಿಚುಂಚನಗಿರಿ ಸಂಸ್ಥೆಯೂ ಸಾವಿರಾರು ವಿದ್ಯಾ ಸಂಸ್ಥೆಗಳನ್ನು ತೆರೆದು ಲಕ್ಷಾಂತರ ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುತ್ತಿದೆ. ಅರಸೀಕೆರೆ ವಿದ್ಯಾ ಸಂಸ್ಥೆಯೂ ಪ್ರತಿ ವರ್ಷದಿಂದ ವರ್ಷಕ್ಕೆ ಉತ್ತಮ ಸಾಧನೆಯತ್ತ ಸಾಗಿದ್ದು ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದರು.

ಆದಿಚುಂಚನಗಿರಿ ಪ್ರಾಂಶುಪಾಲ ಲಿಂಗರಾಜು ಮಾತನಾಡಿ, ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸುವುದು ಹಾಗೂ ಓದಿನಲ್ಲಿ ಸತತವಾಗಿ ಅಭ್ಯಾಸದಲ್ಲಿ ತೊಡಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿ ವಹಿಸಿ ಓದಬೇಕು. ಪೋಷಕರು ವಿದ್ಯಾರ್ಜನೆಗೆ ಪೂರಕ ವಾತವರಣ ನಿರ್ಮಿಸಿಕೊಡಬೇಕು ಎಂದು ಹೇಳಿದರು.

ಈ ವೇಳೆ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಆದಿಚುಂಚನಗಿರಿ ಕಾಲೇಜು ಚಿಕ್ಕಮಗಳೂರು ಪ್ರಾಂಶುಪಾಲ ಜಯದೇವ್‌ ಮಕ್ಕಳು ಹಾಗೂ ಪೋಷಕರಿಗೆ ಸಿಇಟಿ, ನೀಟ್‌ ಹಾಗೂ ಜೆಇಇ ಬಗ್ಗೆ ಮಾಹಿತಿ ನೀಡಿದರು.

ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಪೋಷಕರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.