
ಚನ್ನರಾಯಪಟ್ಟಣ: ‘ಶಿಕ್ಷಣದ ಜೊತೆ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಸಂಗೀತ, ಸಾಹಿತ್ಯ ಮತ್ತು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಾರೆ’ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಾಗಲಾಂಬಿಕೆ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ನಾಗಶ್ರೀ ಆಂಗ್ಲಶಾಲೆಯಲ್ಲಿ ಶುಕ್ರವಾರ ನಡೆದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರು, ಶಾಲೆ ಮತ್ತು ಪೋಷಕರು ಪ್ರಮುಖ ಕಾರಣಕರ್ತರು. ಮಕ್ಕಳ ಭವಿಷ್ಯಕ್ಕೆ ಎಲ್ಲರೂ ಕೈಜೋಡಿಸೋಣ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಸಾಧನೆ ಮಾಡುವುದರಿಂದ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ಇದರಿಂದ ದೇಶ ಪ್ರಗತಿಪಥದತ್ತ ಸಾಗುತ್ತದೆ. ಜ್ಞಾನ ನೀಡುವಲ್ಲಿ ಜ್ಞಾನದೇಗುಲಗಳ ಪಾತ್ರ ಅನನ್ಯವಾದುದು’ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿ ಬಿ.ಬಿ. ಹಜೀರಾ ಮಾತನಾಡಿ, ‘ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ ಮುಖ್ಯವಾದುದು. ಸೋಲು ಗೆಲುವಿನ ಮೆಟ್ಟಿಲು, ನಿರಂತರ ಪ್ರಯತ್ನದ ಫಲವಾಗಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಸಾಧ್ಯ. ನಂಬಿಕೆ, ಪ್ರಾಮಾಣಿಕ ಪ್ರಯತ್ನದಿಂದ ಗುರಿಮುಟ್ಟಲು ಸಾದ್ಯ’ ಎಂದರು.
ಪ್ರಾಂಶುಪಾಲರಾದ ಎ.ಸಿ. ಪವಿತ್ರಾ ವರದಿ ವಾಚಿಸಿದರು. ಲಕ್ಕಿ ಡ್ರಾ ಮೂಲಕ ಆಯ್ಕೆಯಾದ ಪೋಷಕರಾದ ಮನು ಮತ್ತು ಪ್ರೀತು ವೇದಿಕೆಯಲ್ಲಿ ಆಸೀನರಾಗಿದ್ದರು. ಶಿಕ್ಷಣ ಸಂಸ್ಥೆಯ ಟ್ರಸ್ಟಿಗಳಾದ ಕಿಶನ್ ವಿ ಕುಮಾರ್, ನಿಶಾ, ಶಾಲೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಶೈಲಿನಿಸೋನ್ಸ್, ಆಡಳಿತಾಧಿಕಾರಿ ಆಸ್ಟಿನ್ ಜೆ.ಎಸ್. ರಾಜ್ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.