ADVERTISEMENT

ಹಳೇಬೀಡು: ರೈತರಿಗೆ ನೈಸರ್ಗಿಕ ಕೃಷಿ ಪಾಠ

ಪುಷ್ಪಗಿರಿ ಮಠದಲ್ಲಿ ನಡೆಯುತ್ತಿರುವ ಪಾಳೇಕರ್‌ ಕಾರ್ಯಾಗಾರ: 1,500 ರೈತರು ಭಾಗಿ

ಎಚ್.ಎಸ್.ಅನಿಲ್ ಕುಮಾರ್
Published 5 ಜನವರಿ 2026, 4:15 IST
Last Updated 5 ಜನವರಿ 2026, 4:15 IST
ಹಳೇಬೀಡು ಸಮೀಪದ ಪುಷ್ಪಗಿರಿಯಲ್ಲಿ ನಡೆಯುತ್ತಿರುವ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಮಹಾರಾಷ್ಟ್ರದ ಕೃಷ್ಣಶೇತು ತಂಡದವರು ಬಲಿತು ಹಣ್ಣಾದ ತರಕಾರಿಗಳಿಂದ ನಾಟಿ ಬಿತ್ತನೆ ಬೀಜ ಉತ್ಪಾದಿಸುವ ಕ್ರಮವನ್ನು ಪ್ರದರ್ಶಿಸಿದರು 
ಹಳೇಬೀಡು ಸಮೀಪದ ಪುಷ್ಪಗಿರಿಯಲ್ಲಿ ನಡೆಯುತ್ತಿರುವ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಮಹಾರಾಷ್ಟ್ರದ ಕೃಷ್ಣಶೇತು ತಂಡದವರು ಬಲಿತು ಹಣ್ಣಾದ ತರಕಾರಿಗಳಿಂದ ನಾಟಿ ಬಿತ್ತನೆ ಬೀಜ ಉತ್ಪಾದಿಸುವ ಕ್ರಮವನ್ನು ಪ್ರದರ್ಶಿಸಿದರು    

ಹಳೇಬೀಡು: ಭೂಮಿಯನ್ನು ಉಳಿಸಬೇಕು. ಉಸಿರಾಟಕ್ಕೆ ಆಮ್ಲಜನಕ ಕೊಡುವ ಸಸ್ಯಗಳನ್ನು ಆರೋಗ್ಯವಾಗಿ ಬೆಳೆಸಬೇಕು. ಮಣ್ಣಿನ ಫಲವತ್ತತೆ ಕಾಪಾಡಬೇಕು. ಸಮರ್ಪಕವಾಗಿ ನೀರು ಬಳಕೆ ಮಾಡಿಕೊಳ್ಳಬೇಕು. 

ಇವೆಲ್ಲವನ್ನೂ ಪುಷ್ಪಗಿರಿ ಸಭಾಂಗಣದಲ್ಲಿ ನಡೆಯುತ್ತಿರುವ ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ರೈತರು ಮನಸ್ಸಿನಲ್ಲಿ ತುಂಬಿಕೊಂಡಿದ್ದವು. 

ಸಾಮೂಹಿಕ ನಾಯಕತ್ವ, ಕರ್ನಾಟಕ ರಾಜ್ಯ ರೈತಸಂಘ, ಹಸಿರು ಸೇನೆಯ ಹಾಗೂ ಪುಷ್ಪಗಿರಿ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಕಾರ್ಯಾಗಾರದಲ್ಲಿ ನೈಸರ್ಗಿಕ ಕೃಷಿ ತಜ್ಞ ಡಾ.ಸುಭಾಷ್ ಪಾಳೇಕರ್ ಭಾಗವಹಿಸಿದ್ದ ರೈತರಿಗೆ ನಿರಂತರವಾಗಿ ನೈಸರ್ಗಿಕ ಕೃಷಿಯ ಪಾಠ ಹೇಳಿದರು.    

ADVERTISEMENT

1,500 ಮಂದಿ ಆಸಕ್ತ ರೈತರು ಭಾಗವಹಿಸಿದ್ದು, ಗೋಷ್ಠಿ ಮುಗಿದು ಬಿಡುವು ಕೊಡುವವರೆಗೂ ಕುಳಿತು ಜಾಗ ಬಿಟ್ಟು ಕದಲದೇ ರೈತರು ನೈಸರ್ಗಿಕ ಕೃಷಿ ಪಾಠ ಆಲಿಸಿದರು. ರೈತರು ವಿಧೇಯ ವಿದ್ಯಾರ್ಥಿಗಳಂತೆ ನಡೆದುಕೊಂಡರು.   

ನೇಪಾಳ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ದೆಹಲಿ, ಮಹಾರಾಷ್ಟ್ರ ಪಂಜಾಬ್, ಪಶ್ಚಿಮ ಬಂಗಾಳದಿಂದ ಕಾರ್ಯಾಗಾರಕ್ಕೆ ರೈತರು ಬಂದಿದ್ದಾರೆ. ಭಾಷೆ ವಿಭಿನ್ನವಾಗಿದ್ದರೂ ಎಲ್ಲ ರೈತರಲ್ಲಿಯೂ ಸಾಮರಸ್ಯ ಕಂಡು ಬಂತು.

ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಉತ್ಪತ್ತಿ ಆಗಬೇಕು. ರೈತರು ಏಕ ಬೆಳೆ ಪದ್ದತಿಗೆ ಸಿಮೀತ ಆಗಬಾರಾದು. ವಿವಿಧ ಬೆಳೆಯ ಮಿಶ್ರ ಕೃಷಿ ಮಾಡುವುದರಿಂದ ವಿವಿಧ ರೀತಿಯ ಫಸಲು ಕಾಣಬಹುದು. ಮಣ್ಣಿಗೂ ಅನುಕೂಲವಾಗುತ್ತದೆ.  

ಕಬ್ಬಿನ ಬೆಳೆಯ ಜೊತೆಯಲ್ಲಿ ಹೆಸರು, ಹುರುಳಿ, ಕಡಲೆ ಬೆಳೆದರೆ ಕಬ್ಬಿಗೆ ಅಗತ್ಯವಿರುವ ನೈಟ್ರೋಜನ್ ದೊರಕುತ್ತದೆ. ಎರಡೂ ಬೆಳೆಗಳು ಜೈವಿಕ ಇಂಧನವನ್ನು ಹಿಡಿದಿಟ್ಟುಕೊಳ್ಳುತ್ತವೆ ಎಂಬುದನ್ನು ರೈತರಿಗೆ ಸುಭಾಷ್ ಪಾಳೇಕರ್ ಹೇಳಿಕೊಟ್ಟರು ಎಂದು ರೈತ ಗುರುಸ್ವಾಮಿಗೌಡ ಹೇಳಿದರು. 

ಜೋಳದ ಜೊತೆಯಲ್ಲಿ ಹೆಸರು, ಉದ್ದು, ಅಲಸಂದೆ, ಹುರುಳಿ ಬೆಳೆಯಬಹುದು. ತೊಗರಿ ಜೊತೆ ಸಿರಿಧಾನ್ಯ ಬೆಳೆದರೆ ಪೂರೈಕೆ ವಾತಾವರಣ ಸೃಷ್ಟಿಯಾಗುತ್ತದೆ. ತೆಂಗು, ಅಡಿಕೆ ತೋಟದಲ್ಲಿ ನುಗ್ಗೆ ಗಿಡ ಬೆಳೆಸುವುದರಿಂದ ನೈಟ್ರೋಜನ್ ಉತ್ಪತ್ತಿಯಾಗುತ್ತದೆ. ಏಕದಳ ರಾಗಿ ಬೆಳೆದರೆ ಸೂಕ್ಷ್ಮಾಣು ಜೀವಿಗಳು ಶಕ್ತಿಯುತವಾಗಿ ಕೆಲಸ ಮಾಡುತ್ತವೆ ಎಂಬುದನ್ನು ಅರ್ಥಮಾಡಿಕೊಂಡೆವು. ಕಾರ್ಯಾಗಾರ ಯಾರೊಬ್ಬರ ಸ್ವಾರ್ಥಕ್ಕಾಗಿ ಆಯೋಜಿಸಿರಲಿಲ್ಲ. ಸಸ್ಯ ಸಂಪತ್ತು ಹಾಗೂ ರೈತರನ್ನು ಬದುಕಿಸುವುದಾಗಿತ್ತು. ಮಾನವ ಶಕ್ತಿ ಏನೂ ಇಲ್ಲ ಎಂಬುದನ್ನು ತಿಳಿದುಕೊಂಡೆವು ಎಂದು ರೈತ ಲಿಂಗಪ್ಪನಕೊಪ್ಪಲು ಶಿವಪ್ಪ ಹೇಳಿದರು.    

ರೈತ ಮುಖಂಡರಾದ ಕಣಗಾಲ್ ಮೂರ್ತಿ, ಟಿ.ಬಿ. ಹಾಲಪ್ಪ, ಎಲ್.ಈ. ಶಿವಪ್ಪ, ಗಂಗಾಧರಪ್ಪ, ಅಡುಗೆ ರಾಜು, ಮುನ್ನಾಭಾಯಿ, ಶ್ರೀನಿವಾಸ, ಮಹೇಶ್, ಶಿವಕುಮಾರ್ ಕಾರ್ಯಾಗಾರಕ್ಕೆ ಸಾಥ್ ನೀಡಿದರು.

ಹಳೇಬೀಡು ಸಮೀಪದ ಪುಷ್ಪಗಿರಿಯಲ್ಲಿ ನಡೆಯುತ್ತಿರುವ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಸುಭಾಷ್ ಪಾಳೇಕರ್ ಭಾನುವಾರ ರೈತರಿಗೆ ನೈಸರ್ಗಿಕ ಕೃಷಿ ಮಾಹಿತಿ ನೀಡಿದರು 
ಪಿರಿಯಾಪಟ್ಟಣ ಪದ್ಮಮ್ಮ ತಾವೇ ಬೆಳೆದು ಉತ್ಪಾದಿಸಿದ ನಾಟಿ ಬಿತ್ತನೆ ಬೀಜ ಮಾರಾಟ ಮಾಡಿದರು
ತರಕಾರಿ ಬೆಳೆಯುವ ಹಳೇಬೀಡು ಭಾಗದ ರೈತರಿಗೆ ಅನುಕೂಲವಾಗಲಿ ಎಂದು ಕಾರ್ಯಾಗಾರ ಆಯೋಜಿಸಲಾಗಿದೆ. ಸ್ಥಳೀಯ ರೈತರ ಸಂಖ್ಯೆ ಕಡಿಮೆಯಾಗಿದೆ.
ಚುಕ್ಕಿ ನಂಜುಂಡಸ್ವಾಮಿ ರೈತ ಸಂಘದ ರಾಜ್ಯ ಅಧ್ಯಕ್ಷೀಯ ಮಂಡಳಿ ಸದಸ್ಯೆ
ಹಲವಾರು ಬಾರಿ ಸುಭಾಷ್ ಪಾಳೇಕರ್ ಕಾರ್ಯಾಗಾರದಲ್ಲಿ ಭಾಗವಹಿಸಿ ನೈಸರ್ಗಿಕ ಕೃಷಿಯನ್ನು ಜಮೀನಿನಲ್ಲಿ ಅಳವಡಿಸಿಕೊಂಡಿದ್ದೇನೆ. ಈ ಬಾರಿ ಆರೋಗ್ಯ ಕಾಳಜಿಯ ಮಾತನಾಡಿದರು.
ಗುರುಸ್ವಾಮಿ ಗೌಡ ರೈತ
ಜಗತ್ತಿನಲ್ಲಿ ಎಷ್ಟೇ ಅವಿಷ್ಕಾರಗಳಾದರೂ ಆಹಾರ ಸೇವಿಸದೇ ಯಾರು ಬದುಕಲಾಗುವುದಿಲ್ಲ. ಈ ನಿಟ್ಟಿನಲ್ಲಿ ಸುಭಾಷ್ ಪಾಳೇಕರ್ ಅವರ ಆರೋಗ್ಯಕರ ಕೃಷಿ ಪಾಠ ನಮ್ಮ ಮನಸ್ಸಿಗೆ ಹಿಡಿಸಿತು.
ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಪುಷ್ಪಗಿರಿ ಮಠ

ಸಾಮಾನ್ಯ ವಿಜ್ಞಾನ ಎಲ್ಲರೂ ತಿಳಿಯಬೇಕು

ಸಸ್ಯಗಳ ದೇಹ ರಚನೆ ಪ್ರೋಟೀನ್‌ಗಳಿಂದ ಆಗುತ್ತಿದೆ. ಇದರಲ್ಲಿ ಮಾನವನ ಶಕ್ತಿ ಇಲ್ಲ. ಗಿಡಗಳ ಎಲೆಗಳು ಆಹಾರ ಉತ್ಪಾದಿಸಿಕೊಳ್ಳುತ್ತವೆ. ಗಿಡಗಳಿಗೆ ಸೌರಶಕ್ತಿ ಸೆಳೆಯುವ ಶಕ್ತಿ ಇದೆ. ಗಿಡಗಳು ಇಂಗಾಲದ ಡೈಆಕ್ಸೈಡ್ ಅನ್ನು ಸ್ವೀಕರಿಸಿ ಆಮ್ಲಜನಕ ಬಿಡುಗಡೆ ಮಾಡುತ್ತಿರುವುದರಿಂದ ವಾತಾವರಣದಲ್ಲಿ ಊಸಿರಾಡುವ ಶಕ್ತಿ ನಮಗೆ ದೊರಕಿದೆ ಎಂದು ನೈಸರ್ಗಿಕ  ಕೃಷಿ ತಜ್ಞ ಸುಭಾಷ್ ಪಾಳೇಕರ್ ತಿಳಿಸಿದರು.

ಇದರಿಂದಲೇ ಮನುಷ್ಯನ ಅಸ್ತಿತ್ವ ಉಳಿದಿದೆ ಎಂಬ ಸಾಮಾನ್ಯ ವಿಜ್ಞಾನವನ್ನು ಎಲ್ಲರೂ ತಿಳಿದುಕೊಂಡರೆ ವಾತಾವರಣ ಆರೋಗ್ಯಕರವಾಗಿರುತ್ತದೆ. ಗಿಡ ಹಾಗೂ ಮಾನವನ ರಚನೆ ಪಂಚಭೂತಗಳಿಂದ ಆಗಿದೆ. ಇವೆಲ್ಲವೂ ದೇವರ ಸೃಷ್ಟಿ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.