ADVERTISEMENT

ಬಂದ್‌ಗೆ ವಿವಿಧ ಸಂಘಟನೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 3:09 IST
Last Updated 27 ಸೆಪ್ಟೆಂಬರ್ 2020, 3:09 IST
ಬೇಲೂರಿನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು
ಬೇಲೂರಿನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು   

ಬೇಲೂರು: ಕೇಂದ್ರ ಹಾಗೂ ರಾಜ್ಯ ಸರ್ಕಾ ರಗಳು ಜಾರಿಗೆ ತರಲು ಹೋರಟಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್ ಖಾಸಗೀಕರಣ ಮಸೂದೆಯನ್ನು ಖಂಡಿಸಿ ರೈತಸಂಘ ಸೋಮವಾರ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಬೇಲೂರಿನ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ರೈತಸಂಘ ಈ ಸಂಬಂಧ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸ್ವಾಮೀಗೌಡ, ಕರ್ನಾಟಕ ಭೂಸುಧಾರಣ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಮೂಲಕ ರಾಜ್ಯ ಸರ್ಕಾರವು ರೈತರಿಗೆ ಅನ್ಯಾಯ ಎಸಗಲು ಮುಂದಾಗಿದೆ ಎಂದರು.

ವಿದ್ಯುತ್ ಖಾಸಗೀಕರಣ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರುದ್ಧ ಸೋಮವಾರ ಕರೆ ನೀಡಿರುವ ಬಂದ್‌ಗೆ ವರ್ತಕರು, ಟ್ಯಾಕ್ಸಿ, ಆಟೊ ಚಾಲಕರ ಮತ್ತು ಮಾಲೀಕರ ಸಂಘ, ಜಯ ಕರ್ನಾಟಕ ಸಂಘಟನೆ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಕರವೇ ಹಾಗೂ ತಾಲ್ಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗಿದೆ. ಎಲ್ಲರೂ ಬಂದ್‌ಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ ಎಂದರು.

ADVERTISEMENT

ಸೋಮವಾರದ ಸಂತೆ ಸೇರಿ ಎಲ್ಲ ವಹಿವಾಟು ಸ್ಥಗಿತಗೊಳಿಸಬೇಕು. ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಸಂಪೂರ್ಣ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಸಾರ್ವಜನಿಕರೂ ಬೆಂಬಲಿಸಬೇಕು ಎಂದರು.

ತಾಲ್ಲೂಕು ವರ್ತಕರ ಸಂಘದ ಅಧ್ಯಕ್ಷ ಗಿರಿಯಪ್ಪಶೆಟ್ಟಿ, ರೈತ ಸಂಘದ ಅಧ್ಯಕ್ಷ ಭೋಗಮಲ್ಲೇಶ್ ಮಾತನಾಡಿದರು.

ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಎಂ.ಕೆ.ಆರ್.ಸೋಮೇಶ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಪ್ರಧಾನ ಸಂಚಾಲಕ ಬಿ.ಎಲ್.ಲಕ್ಷ್ಮಣ್, ಅಬ್ದುಲ್ ಸಮದ್, ಕರವೇ (ನಾರಾಯಣಗೌಡ) ಬಣದ ಅಧ್ಯಕ್ಷ ಚಂದ್ರಶೇಖರ್, ಕರವೇ (ಪ್ರವೀಣ್‌ ಶೆಟ್ಟಿ) ಬಣದ ಉಪಾಧ್ಯಕ್ಷ ಸತೀಶ್, ವರ್ತಕರ ಸಂಘದ ಕಾರ್ಯದರ್ಶಿ ಅಶ್ವಾಕ್, ತೀರ್ಥಂಕರ್, ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ಪಾಪಣ್ಣ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಮಂಜುನಾಥ್, ರೈತ ಸಂಘದ ಮುಖಂಡರಾದ ಬಸವರಾಜು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.