ADVERTISEMENT

‘ವಚನ ಸಾಹಿತ್ಯ ಸಂರಕ್ಷಿಸಿದ ಮಹಾನ್ ಶರಣ’

ಗಮನಸೆಳೆದ ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 2:07 IST
Last Updated 3 ಫೆಬ್ರುವರಿ 2021, 2:07 IST
ಹಳೇಬೀಡಿನ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಜಿಲ್ಲಾ ಮಡಿವಾಳ ಸಮಾಜ ಮಹಿಳಾ ಒಕ್ಕೂಟ ಅಧ್ಯಕ್ಷೆ ವಿಜಯಲಕ್ಷ್ಮಿ ಮಾತನಾಡಿದರು
ಹಳೇಬೀಡಿನ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಜಿಲ್ಲಾ ಮಡಿವಾಳ ಸಮಾಜ ಮಹಿಳಾ ಒಕ್ಕೂಟ ಅಧ್ಯಕ್ಷೆ ವಿಜಯಲಕ್ಷ್ಮಿ ಮಾತನಾಡಿದರು   

ಹಳೇಬೀಡು: ಮಡಿವಾಳ ಮಾಚಿದೇವ ಅವರ ಜಯಂತಿಯನ್ನು ಮಂಗಳವಾರ ಹಳೇಬೀಡಿನಲ್ಲಿ ಸಡಗರದಿಂದ ಆಚರಿಸಲಾಯಿತು. ವಾದ್ಯವೈಭವ ಹಾಗೂ ವಿವಿಧ ಜನಪದ ನೃತ್ಯದೊಂದಿಗೆ ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆ ವೈಭವದಿಂದ ನಡೆಯಿತು.

ಅಲಂಕರಿಸಿದ್ದ ವಾಹನದಲ್ಲಿ ಭಾವಚಿತ್ರದ ಮೆರವಣಿಗೆ ದ್ವಾರಸಮುದ್ರ ಕೆರೆಯಿಂದ ಹೊರಟಿತು. ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ಡೊಳ್ಳು ಹಾಗೂ ವಾದ್ಯದ ಸದ್ದಿಗೆ ಕೇಸರಿ ಬಾವುಟ ಹಿಡಿದ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು. ವೀರಭದ್ರ ಕುಣಿತ, ಕೋಲಾಟ ಮೊದಲಾದ ಜನಪದ ನೃತ್ಯಗಳು ರಸ್ತೆ ಇಕ್ಕೆಲಗಳಲ್ಲಿ ನಿಂತಿದ್ದವರ ಗಮನ ಸೆಳೆದವು. ಬನಶಂಕರಿ ಕಲ್ಯಾಣ ಮಂಟಪಕ್ಕೆ ಮೆರವಣಿಗೆ ಬಂದು ಸೇರಿತು.ಮಡಿವಾಳ ಸಮಾಜದ ನೂರಾರು ಮಂದಿ ಭಾಗವಹಿಸಿದ್ದರು.

ಬನಶಂಕರಿ ಕಲ್ಯಾಣ ಮಂಟಪದಲ್ಲಿ ಧಾರ್ಮಿಕ ಸಭೆ ನಡೆಯಿತು. ಹಾಸನ ಜಿಲ್ಲಾ ಮಡಿವಾಳ ಮಹಿಳಾ ಒಕ್ಕೂಟದ ಅಧ್ಯಕ್ಷೆ ವಿಜಯಲಕ್ಷ್ಮಿ ಆಂಜನಪ್ಪ ಮಾತನಾಡಿ, ‘ಮಹಾಪುರುಷರ ಜಯಂತಿ ಆಚರಿಸುವುದರಿಂದ ಸಂಬಂಧಿಸಿದ ಸಮಾಜದ ಆಗುಹೋಗುಗಳ ಚರ್ಚೆಯಾಗುತ್ತದೆ. ಸಮಾಜದ ಅಭಿವೃದ್ಧಿಗೂ ಅನುಕೂಲವಾಗುತ್ತದೆ’ ಎಂದರು.

ADVERTISEMENT

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲ್ಲಳ್ಳಿ ಸುರೇಶ್ ಮಾತನಾಡಿ, ‘ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ ಶರಣರ ಮೇಲೆ ಹಿಂಸಾಚಾರ ನಡೆಯಿತು. ಬಹಳಷ್ಟು ವಚನ ಸಾಹಿತ್ಯವನ್ನು ಸಹ ನಾಶ ಮಾಡಲಾಯಿತು. ಮಾಚಿದೇವರು ಜಾಗೃತರಾಗಿ ಹಲವು ಶರಣರೊಂದಿಗೆ ಹೋರಾಟ ಮಾಡಿ ವಚನ ಸಾಹಿತ್ಯ ಸಂರಕ್ಷಿಸಿದ್ದಾರೆ. ಹೀಗಾಗಿ ಇಂದಿನ ಅಧ್ಯಯನಕ್ಕೆ ವಚನ ಸಾಹಿತ್ಯ ಉಳಿದಿದೆ’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಮಾ ಪರಮೇಶ್ ಮಾತನಾಡಿ, ‘ಮಾಚಿದೇವರು ಭಕ್ತಿನಿಷ್ಠೆಯೊಂದಿಗೆ, ವೀರರಾಗಿದ್ದರು. ನಿಷ್ಠುರ ವ್ಯಕ್ತಿತ್ವ ಹೊಂದಿದ್ದ ಶ್ರೇಷ್ಠ ಕಾಯಕಯೋಗಿ ಆಗಿದ್ದರು. ಬಸವಣ್ಣನವರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ನಡೆದಂತೆ ನುಡಿದ ಅವರ ಜೀವನ ಇಂದಿನ ಪೀಳಿಗೆಗೆ ದಾರಿದೀಪವಾಗಿದೆ’ ಎಂದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಸ್.ಆನಂದ್, ಹಳೇಬೀಡು ಹೋಬಳಿ ಮಡಿವಾಳ ಸಂಘ ಅಧ್ಯಕ್ಷ ಎಚ್.ಆರ್.ಕುಮಾರ್, ಗೌರವ ಅಧ್ಯಕ್ಷ ರಾಜಶೆಟ್ಟಿ, ಮುಖಂಡರಾದ ನಂದನ್ ಕುಮಾರ್, ಗಂಗೂರು ಶಿವಕುಮಾರ್, ಅಶೋಕ್, ಬೈರಶೆಟ್ಟಿ, ಚಂದ್ರಪ್ಪ, ಗಂಗಾಧರ, ಪದ್ಮರಾಜಶೆಟ್ಟಿ ಇದ್ದರು.

ಗಂಗಾಧರ ನಿರೂಪಿಸಿದರು. ಶಿಕ್ಷಕ ವಸಂತಕುಮಾರ್ ವಂದಿಸಿದರು.

ಹಳೇಬೀಡು, ಮಾದಿಹಳ್ಳಿ ಹಾಗೂ ಜಾವಗಲ್ ಹೋಬಳಿಯ ಮಡಿವಾಳ ಸಮಾಜದವರು ಕಾರ್ಯಕ್ರಮಕ್ಕೆ ಸಹಕರಿಸಿದರು. ಅನ್ನಸಂತರ್ಪನೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.