ADVERTISEMENT

ಹಾಸನ: ಕನ್ನಡ ರಥಯಾತ್ರೆ ಯಶಸ್ಸಿಗೆ ಕ್ರಮ ಕೈಗೊಳ್ಳಿ

ಪೂರ್ವ ಸಿದ್ಧತಾ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 13:33 IST
Last Updated 11 ಸೆಪ್ಟೆಂಬರ್ 2024, 13:33 IST
ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಮಾತನಾಡಿದರು
ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಮಾತನಾಡಿದರು   

ಹಾಸನ: ‘ಜಿಲ್ಲೆಯಲ್ಲಿ ಕನ್ನಡ ರಥ ಯಾತ್ರೆಯನ್ನು ಸಾಂಪ್ರದಾಯಿಕ ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ, ಜನರ ಗಮನ ಸೆಳೆಯುವಂತೆ ಕಾರ್ಯಕ್ರಮ ಆಯೋಜಿಸುವುದರ ಮೂಲಕ ಯಶಸ್ಸಿಗೆ ಕ್ರಮ ಕೈಗೊಳ್ಳುವಂತೆ’ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅಧಿಕಾರಿಗಳಿಗೆ ಸೂಚಿಸಿದರು.

‘ಕರ್ನಾಟಕ ಸಂಭ್ರಮ -50’ ಅಡಿ, ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಅಭಿಯಾನದ ಅಂಗವಾಗಿ ಜಿಲ್ಲೆಗೆ ಬರುತ್ತಿರುವ ರಥ ಯಾತ್ರೆಯ ಸ್ವಾಗತ  ಹಾಗೂ ಬೀಳ್ಕೊಡುವ ಕುರಿತು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಕಾರ್ಯಕ್ರಮ ಅದ್ಬುತವಾಗಿ ಮೂಡಿ ಬರಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳು ಭಾಗವಹಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡುವಂತೆ’ ಸೂಚಿಸಿದರು.

ADVERTISEMENT

ರಥಯಾತ್ರೆ ಸಾಗುವ ಮಾರ್ಗದಲ್ಲಿ ಸಿಗುವ ಶಾಲಾ– ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡು ಕನ್ನಡ ಹಬ್ಬದ ಸಡಗರ, ಸಂಭ್ರಮವನ್ನು ಆನಂದಿಸುವಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಮೆರವಣಿಗೆಯಲ್ಲಿ ಸ್ಥಳೀಯ ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಸಾಮೂಹಿಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಮಹಿಳೆಯರಿಂದ ಪೂರ್ಣ ಕುಂಭ ಮೆರವಣಿಗೆ ಹಾಗೂ ದ್ವಿಚಕ್ರ ವಾಹನ ರ‍್ಯಾಲಿ, ಆಟೋಗಳು ಮೆರವಣಿಗೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ವಿನೂತನವಾಗಿ ಮೂಡಿಬರುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.

ರಥಯಾತ್ರೆಯಲ್ಲಿ ಜನಪ್ರತಿನಿಧಿಗಳು ಭಾಗವಹಿಸಲು ಆಹ್ವಾನಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಕನ್ನಡ ಭಾಷೆಯ ಮೇಲಿನ ಪ್ರೀತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ತಮ್ಮಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶ್ ಗೌಡ, ಕನ್ನಡಪರ ಸಂಘಟನೆಗಳ ಮುಖಂಡ ಬಿ.ಜೆ. ಗೋಪಾಲಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ತಾರಾನಾಥ್ ಸಭೆಯಲ್ಲಿ ಉಪಸ್ಥಿತರಿದ್ದರು.

12ರಿಂದ 19 ರವರೆಗೆ ಜಿಲ್ಲೆಯಲ್ಲಿ ರಥಯಾತ್ರೆ

ಸೆ. 12ರಂದು ಅರಕಲಗೂಡು ತಾಲ್ಲೂಕಿಗೆ ರಥಯಾತ್ರೆ ಬರುತ್ತಿದ್ದು 13ರಂದು ಹೊಳೆನರಸೀಪುರ 14ರಂದು ಚನ್ನರಾಯಪಟ್ಟಣ 15ರಂದು ಅರಸೀಕೆರೆ 16ರಂದು ಹಾಸನ 17ರಂದು ಆಲೂರು 18ರಂದು ಸಕಲೇಶಪುರ ಹಾಗೂ 19ರಂದು ಬೇಲೂರು ತಾಲ್ಲೂಕು ಮಾರ್ಗವಾಗಿ ಚಿಕ್ಕಮಗಳೂರಿಗೆ ತೆರಳುತ್ತದೆ ಎಂದು ಜಿಲ್ಲಾಧಿಕಾರಿ ಸತ್ಯಭಾಮಾ ತಿಳಿಸಿದರು. ಸೆ. 16ರಂದು ಹಾಸನದಲ್ಲಿ ರಥಯಾತ್ರೆಯನ್ನು ಸ್ವಾಗತ ಮಾಡಲಾಗುವುದು. ಸೆ. 17ರಂದು ಬೆಳಿಗ್ಗೆ 9 ಗಂಟೆಗೆ ಡೇರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ ವಿವಿಧ ಕಲಾತಂಡಗಳೊಂದಿಗೆ ಕಲಾಭವನದವರೆಗೆ ರಥಯಾತ್ರೆ ಮೆರವಣಿಗೆ ನಡೆಸಲಾಗುವುದು. ನಂತರ ಆಲೂರಿಗೆ ಬೀಳ್ಕೊಡುವ ವ್ಯವಸ್ಥೆ ಮಾಡುವಂತೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.