ಚನ್ನರಾಯಪಟ್ಟಣ: ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ್ದ 74ನೇ ವರ್ಷದ ಗಣಪತಿ ಮೂರ್ತಿಯ ಮೆರವಣಿಗೆಯಲ್ಲಿ ಕಲಾತಂಡಗಳು ನಾಡಿನ ಸಂಸ್ಕೃತಿ, ಕಲೆ ಮತ್ತು ಪರಂಪರೆಯನ್ನು ಬಿಂಬಿಸಿದವು.
ಪ್ರಮುಖ ಬೀದಿಯಲ್ಲಿ ಸೋಮವಾರ ಬೆಳಿಗ್ಗೆಯಿಂದ ರಾತ್ರಿವರೆಗೆ ವೈಭವದ ಮೆರವಣಿಗೆ ನಡೆಸಿ ಪಟ್ಟಣದ ಅಮಾನಿಕೆರೆಯಲ್ಲಿ ಕ್ರೈನ್ ಮೂಲಕ ಗಣಪತಿಯನ್ನು ವಿಸರ್ಜಿಸಲಾಯಿತು.
48 ದಿನಗಳಿಂದ ಪ್ರತಿಷ್ಠಾಪಿಸಿದ್ದ ಗಣಪತಿಯನ್ನು ಅಲಂಕೃತ ವಾಹನದಲ್ಲಿ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆ ಸೋಮವಾರ ಶಾಸಕ ಸಿ.ಎನ್. ಬಾಲಕೃಷ್ಣ ಚಾಲನೆ ನೀಡಿದರು. ನಾದಸ್ವರ, ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಆನೆ ಲಕ್ಷ್ಮಿ, ಜಾನಪದ ಕಲಾತಂಡಗಳಾದ ನಂದಿಧ್ವಜ, ಕರಗ ಕುಣಿತ, ದಸರಾಬೊಂಬೆ, ಸೋಮನಕುಣಿತ, ಕೀಲುಕುದುರೆ, ಪೂಜಾಕುಣಿತ, ಚಂಡೆವಾದ್ಯ, ವೀರಭದ್ರಕುಣಿತ, ತಮಟೆ ವಾದ್ಯ, ಕರಾವಳಿ ಉತ್ಸವ, ರೋಡ್ ಆರ್ಕೇಸ್ಟ್ರಾ, ವೀರಗಾಸೆ ಕುಣಿತ ಮೆರವಣಿಗೆಗೆ ಮೆರುಗು ನೀಡಿದವು.
4 ಕಿ.ಮೀ. ವರೆಗೆ ಕಲಾವಿದರು ಹೆಜ್ಜೆ ಹಾಕಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು, ಕಲಾತಂಡಗಳ ಸೊಬಗನ್ನು ಕಣ್ತುಂಬಿಕೊಂಡರು. ಗ್ರಾಮದೇವತೆ ವಳಗೇರಮ್ಮ, ಕೋಟೆ ಮಾರಮ್ಮ, ಚಂದ್ರಮೌಳೇಶ್ವರ, ಕಾಡಾಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪಿಸಿದ್ದ ವಾಹನಗಳು ಮೆರವಣಿಗೆಯಲ್ಲಿ ಸಾಗಿದವು. ಮೂರು ದಿನಗಳಿಂದ ಪಟ್ಟಣದ ಪ್ರಮುಖ ಬೀದಿಯಲ್ಲಿ ಅಳವಡಿಸಿದ್ದ ವಿದ್ಯುದ್ದೀಪಾಲಂಕಾರ ಕಣ್ಮನ ಸೆಳೆಯಿತು.
ಪ್ರಸನ್ನ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಸಿ.ಎನ್. ಅಶೋಕ್, ಪದಾಧಿಕಾರಿಗಳಾದ ಸಿ.ಕೆ. ಕೃಷ್ಣ, ನಂಜುಂಡ ಮೈಮ್, ಸಿ.ವೈ. ಸತ್ಯನಾರಾಯಣ, ಸಿ.ಎಸ್. ಮನೋಹರ್, ಮಹದೇವ್, ಲಕ್ಷ್ಮೀನಾರಾಯಣಗುಪ್ತ, ಸಿ.ಎನ್. ವೆಂಕಟೇಶ್, ಸಿ.ಕೆ. ಸುಬ್ರಹ್ಮಣ್ಯ, ಸಿ.ಟಿ. ಕುಮಾರಸ್ವಾಮಿ, ಎಸ್‍ಎ. ಗಣೇಶ್, ಸುರೇಶ್, ಸಿ.ಎಂ. ಅರ್ಪಿತಾ, ಸಿ.ಡಿ. ರಾಜಶೇಖರ್, ಸಿ.ಬಿ. ಗಂಗಾಧರ್, ಎ.ವಿ. ಜಯಪಾಲ್, ಪುರಿಮಂಜು ಸೇರಿ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಸಾಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.