ಆಲೂರು: 15 ದಿನಗಳ ಹಿಂದೆ ಬಿತ್ತನೆ ಮಾಡಿದ್ದ ಮುಸುಕಿನ ಜೋಳ ಇದೀಗ ಸ್ವಲ್ಪ ಮಟ್ಟಿಗೆ ಬೆಳೆದಿದ್ದು, ಬಿಳಿ ಬಣ್ಣಕ್ಕೆ ತಿರುಗುತ್ತಿದೆ. ಮುಸುಕಿನ ಜೋಳ ಬಿಳಿಸುಳಿ ರೋಗಕ್ಕೆ ತುತ್ತಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಬಹುತೇಕ ರೈತರು ಹೆಚ್ಚಾಗಿ ಖಾಸಗಿ ಅಂಗಡಿಗಳಿಂದ ಬಿತ್ತನೆ ಬೀಜ ಖರೀದಿ ಮಾಡಿ ಬಿತ್ತನೆ ಮಾಡಿದ್ದರು. 3.5 ಕೆ.ಜಿ. ಚೀಲಕ್ಕೆ ₹1650 ಕೊಟ್ಟು ಖರೀದಿ ಮಾಡಿದ್ದಾರೆ. ಬಿತ್ತನೆ ಮಾಡಿದ ಸುಮಾರು 25 ದಿನದ ನಂತರ ಗಿಡಗಳು ಬಿಳಿ ಬಣ್ಣಕ್ಕೆ ತಿರುಗುತ್ತಿವೆ. ಅಲ್ಲದೇ ಗಿಡಗಳು ನಿಲ್ಲಲಾರದೇ ಮುದುಡಿ ತಮ್ಮ ಸಾಮರ್ಥ್ಯ ಕಳೆದುಕೊಳ್ಳುತ್ತಿವೆ.
ಬಹುತೇಕ ಸಣ್ಣ ಮತ್ತು ಅತಿ ಸಣ್ಣ ರೈತರೇ ತಾಲ್ಲೂಕಿನಲ್ಲಿದ್ದು, ಸಾಲ ಮಾಡಿ ಜೋಳ ಖರೀದಿ ಮಾಡಿ ಬಿತ್ತನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಗಿಡಗಳು ಬಲಿಯಲು ಅವಕಾಶವಿಲ್ಲದಂತಾಗಿದ್ದು, ಗಿಡಗಳು ಬಲಿಯದೇ ತೆನೆ ಬಿಡದಿದ್ದರೆ ನಷ್ಟ ಅನುಭವಿಸುವಂತಾಗಲಿದೆ ಎಂದು ರೈತರು ಹೇಳುತ್ತಿದ್ದಾರೆ.
ಒಂದು ಎಕರೆ ಜಮೀನಿಗೆ 6 ಕೆ.ಜಿ. ಬಿತ್ತನೆ ಬೀಜ ಅವಶ್ಯಕವಾಗಿರುತ್ತದೆ. ಉಳುಮೆ, ಗೊಬ್ಬರ ಎಲ್ಲ ಸೇರಿದಂತೆ ಸುಮಾರು ₹20ಸಾವಿರದಿಂದ ₹25 ಸಾವಿರ ಖರ್ಚು ಬರುತ್ತದೆ. ಪ್ರಾರಂಭದಲ್ಲಿಯೇ ಗಿಡಗಳು ನಾಶವಾಗುತ್ತಿವೆ. ಕಂಪನಿಯಿಂದ ಖರೀದಿಸಿದ ಬಿತ್ತನೆ ಮಾಡಿದ್ದ ಜೋಳ, ಹುಟ್ಟಿದ ನಂತರ ರೋಗಕ್ಕೆ ತುತ್ತಾಗುತ್ತಿವೆ. ಕೃಷಿ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ಮಾಡಿ ರೋಗ ತಡೆಗಟ್ಟಲು ರೈತರಿಗೆ ಸಲಹೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈವರೆಗೂ ಜೋಳ ಹುಟ್ಟಿದ ನಂತರ ಕಾಂಡ ಕೊರೆಯುವ ಹುಳು ಬರುತ್ತಿತ್ತು. ಆದರೆ ಈ ವರ್ಷ ಆ ಕಾಯಿಲೆ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಪ್ರಸಕ್ತ ಸಾಲಿನಲ್ಲಿ ಗಿಡಗಳು ಬಿಳಿ ಸುಳಿ ರೋಗಕ್ಕೆ ತುತ್ತಾಗುತ್ತಿವೆನಾಗೇಶ್ ಹಳೆ ಆಲೂರಿನ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.