ಶ್ರವಣಬೆಳಗೊಳ: ಕ್ಷೇತ್ರದಲ್ಲಿ 10 ದಿನ ಕಾಲ ಅದ್ಧೂರಿಯಾಗಿ ಜರುಗಿದ ಕಲ್ಪಧ್ರುಮ ಮಹಾಭಿಷೇಕ ದಶಲಕ್ಷಣ ಮಹಾ ಪರ್ವದ ಸಮಾರೋಪ ಸಮಾರಂಭದ ಪ್ರಯುಕ್ತ, ಸಹಸ್ರಕೂಟ ಜಿನ ಬಿಂಬಕ್ಕೆ ಮಹಾಭಿಷೇಕ ಹಾಗೂ ಸ್ವರ್ಣ ರಥದಲ್ಲಿ ಅನಂತನಾಥ ತೀರ್ಥಂಕರರ ವೈಭವದ ಮೆರವಣಿಗೆಯು ಆಚಾರ್ಯರ ಸಾನಿಧ್ಯ, ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಸೋಮವಾರ ನೆರವೇರಿತು.
ಚಾವುಂಡರಾಯ ಸಭಾಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ಸಹಸ್ರಕೂಟ ಜಿನಬಿಂಬಕ್ಕೆ ಜಲಾಭಿಷೇಕ ಮತ್ತು ಜೈನ ಮಠದ ಮುಂಭಾಗದಲ್ಲಿ ಸಿದ್ದಗೊಂಡಿದ್ದ ಸ್ವರ್ಣ ರಥದಲ್ಲಿ ಪ್ರತಿಷ್ಠಾಪಿಸಿದ್ದ ಅನಂತನಾಥ ಸ್ವಾಮಿಯ ಭವ್ಯ ಮೆರವಣಿಗೆಗೆ ಕ್ಷೇತ್ರದ ಶ್ರೀಗಳು ಚಾಲನೆ ನೀಡಿದರು.
ರಾಷ್ಟ್ರ ಮತ್ತು ರಾಜ್ಯದಿಂದ ಬಂದಿದ್ದ ಭಕ್ತರಿಂದ 108 ಕಲಶಗಳಿಂದ ಜಲಾಭೀಷೇಕ, ಎಳನೀರು, ಕಬ್ಬಿನಹಾಲು, ವಿವಿಧ ಹಣ್ಣುಗಳ ರಸ, ಹೆಸರುಬೇಳೆ, ಕಡಲೆಬೇಳೆ, ಸಕ್ಕರೆ, ಬೆಲ್ಲಗಳಿಂದಲೂ ಅಭಿಷೇಕ ನೆರವೇರಿತು. ಕ್ಷೀರ, ಮೊಸರು, ಕಲ್ಕಚೂರ್ಣ, ಕಷಾಯ, ಅರಿಸಿನ ಮತ್ತು ಅರಿಶಿಣ, ಚತುಷ್ಕೋನ ಕಳಸ, ಶ್ರೀಗಂಧ, ಅಷ್ಟ ಗಂಧ, ಕೇಸರಿ, ಸುವರ್ಣ, ಪುಷ್ಪವೃಷ್ಟಿ, ಮಹಾಶಾಂತಿಧಾರದೊಂದಿಗೆ ಮಹಾಮಂಗಳಾರತಿ ಮಾಡಿ ಗಂಧೋದಕ ವಿತರಿಸಲಾಯಿತು.
ಇದಕ್ಕೂ ಮೊದಲು ಅಲಂಕರಿಸಿದ್ದ ಸ್ವರ್ಣ ರಥದಲ್ಲಿ ಅನಂತನಾಥ ಸ್ವಾಮಿ, ಪಾತಾಳ ಯಕ್ಷ, ಅನಂತಮತಿ ಯಕ್ಷಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಶೋಭಾಯಾತ್ರೆಯು ಜೈನ ಮಠದ ರಸ್ತೆ ವಿಂಧ್ಯಗಿರಿ ಮಹಾದ್ವಾರದ ಮೂಲಕ ಮೈಸೂರು ರಸ್ತೆ, ಕಲ್ಯಾಣ ಮಂಟಪ ರಸ್ತೆ, ಚಂದ್ರಗಿರಿಯ ಚಿಕ್ಕ ಬೆಟ್ಟದ ರಸ್ತೆಯಿಂದ ಬೆಂಗಳೂರು ರಸ್ತೆಯ ಮೂಲಕ ಸಾಗಿ ಜೈನ ಮಠಕ್ಕೆ ತಲುಪಿತು.
ವ್ರತಿಕರು, ಧರ್ಮ ಧ್ವಜ ಹಿಡಿದ ಬಾಲ ಬಾಲಕಿಯರು, ಮೈಸೂರು ಬ್ಯಾಂಡ್ ವಾದನ, ಮಂಗಳ ವಾದ್ಯ, ಚೆಂಡೆ, ವಾದ್ಯ, ಕಲಶ ಹೊತ್ತ ಮಹಿಳೆಯರು, ಅನಂತ ನಾಥ ಸ್ವಾಮಿಗೆ ಜೈಕಾರ ಹಾಕುತ್ತಾ ಸಾಗಿದರು. ಚೆಂಡೆ ವಾದ್ಯಕ್ಕೆ ಯುವಕ, ಯುವತಿಯರು ಕುಣಿದು ಕುಪ್ಪಳಿಸಿದರು. ಸ್ವರ್ಣ ರಥದ ಮುಂಭಾಗದಲ್ಲಿ ಬ್ರಹ್ಮ ದೇವರ ಉತ್ಸವ ರಜತ ಪಲ್ಲಕ್ಕಿಯಲ್ಲಿ ಇರಿಸಿದ ಶಾಸ್ತ್ರ ಗ್ರಂಥಗಳು, ಜಿನ ಭಗವಂತರು, ಮೆರವಣಿಗೆಗೆ ಭಕ್ತರು ಹಣ್ಣು ಕಾಯಿ ಆರತಿ ನೀಡಿ ಭಕ್ತಿ ಸಮರ್ಪಿಸಿದರು.
ಶ್ರೀಗಳು, ದಾನಿಗಳಿಗೆ, ವಿದ್ವಾಂಸರಿಗೆ, ಕಲಾವಿದರಿಗೆ, ಕಾರ್ಯಕರ್ತರಿಗೆ ಕ್ಷೇತ್ರದ ವತಿಯಿಂದ ಗೌರವಿಸಿದರು. ವ್ರತಿಕರಿಂದ, ಮಾತಾಜಿಯವರಿಗೆ ವಸ್ತ್ರ ದಾನ ಮಾಡಲಾಯಿತು ಬೆಳಗಾವಿ ಜಿಲ್ಲೆಯ ಹಾರೊಗೇರಿಯ ರಾಯಪ್ಪ ಕುಟುಂಬದವರಿಂದ ವಿಶೇಷ ಹುಗ್ಗಿ ಪ್ರಸಾದವನ್ನು ಸುಮಾರು 10 ಸಾವಿರ ಜನರಿಗೆ ಉಣಬಡಿಸಿದರು.
ಕ್ಷೇತ್ರಕ್ಕೆ ವಿಶೇಷ ಆಕರ್ಷಣೆ
ಅಭಿನವ ಚಾರುಕೀರ್ತಿ ಶ್ರೀಗಳು ಮಾತನಾಡಿ 24 ತೀರ್ಥಂಕರರಿಗೆ 24 ಜನರಿಂದ ಏಕಕಾಲದಲ್ಲಿ ವಿವಿಧ ಅಭಿಷೇಕಗಳನ್ನು ನೋಡುವ ಸೌಭಾಗ್ಯ ಈ ಭಾಗದ ಭಕ್ತರಿಗೆ ಲಭಿಸಿರುವುದು ಭಾಗ್ಯ. ಸಹಸ್ರಕೂಟದಲ್ಲಿರುವ 1008 ಜಿನ ಮೂರ್ತಿಗಳಿಗೂ ವೈಭವದಿಂದ ಅಭಿಷೇಕ ಜರಗುತ್ತವೆ. ಇದೊಂದು ದಶಲಕ್ಷಣ ಮಹಾಪರ್ವದ ಮಹಾಸಂಭ್ರಮ. ಕ್ಷೇತ್ರದಲ್ಲಿ ವಿವಿಧ ರಾಜ್ಯಗಳಿಂದ ಬಂದಿರುವ 40 ತ್ಯಾಗಿಗಳ ಸಾನಿಧ್ಯವೂ ಕ್ಷೇತ್ರಕ್ಕೆ ವಿಶೇಷ ಆಕರ್ಷಣೆ ಶಕ್ತಿ ಬಂದಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.