ADVERTISEMENT

ಭಕ್ತರ ಸಂತೋಷವೇ ಸಾರ್ಥಕತೆ: ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 3:05 IST
Last Updated 12 ಅಕ್ಟೋಬರ್ 2025, 3:05 IST

ಹಾಸನ: ಈ ಬಾರಿಯ ಹಾಸನಾಂಬ ದರ್ಶನದಿಂದ ಆದಾಯ ಕಡಿಮೆಯಾದರೂ ಸರಿ, ಭಕ್ತರ ಸಂತೋಷವೇ ನಮ್ಮ ಸಾರ್ಥಕತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಹಾಸನಂಬ ದೇವಾಲಯದ ಆವರಣದದಲ್ಲಿ ಭಕ್ತರ ಅಭಿಪ್ರಾಯ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುಡ್ಡು ಬಂದರೆ ಗೌರವದಿಂದ ಸ್ವೀಕರಿಸುತ್ತೇವೆ. ಆದರೆ ಆದಾಯ ಶೂನ್ಯವಾದರೂ ಪರವಾಗಿಲ್ಲ. ಲಾಡು ಖರ್ಚು ನಮ್ಮ ಮೇಲೆ ಬಂದರೂ ಪರವಾಗಿಲ್ಲ ಎಂದರು.

ಅನುಕೂಲಸ್ಥರೂ ಧರ್ಮದರ್ಶನದ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ. ಇದು ಧರ್ಮದ ಶ್ರೇಷ್ಠತೆ. ಬದಲಾವಣೆ ತಂದಾಗ ಆತಂಕ ಇರುತ್ತದೆ. ಆದರೆ ಭಕ್ತರ ಸಂತೋಷ ನಮ್ಮ ಸಾರ್ಥಕತೆ ಎಂದರು.

ADVERTISEMENT

ದೇವಸ್ಥಾನದ ನಿರ್ವಹಣೆಗಾಗಿ ಸರ್ಕಾರದ ಹಣದ ಅವಲಂಬನೆ ಬೇಡ. ಸಾರ್ವಜನಿಕರ ದೇಣಿಗೆಯಿಂದ ದೇವಸ್ಥಾನ ನಡೆಯುವುದು ನಮಗೆ ಹೆಮ್ಮೆ ಇದೆ ಎಂದರು.

ಶನಿವಾರ ಈಗಾಗಲೇ 92 ಸಾವಿರ ಮಂದಿ ಅರ್ಧ ದಿನದಲ್ಲೇ ದರ್ಶನ ಪಡೆದಿದ್ದಾರೆ. ಭಾನುವಾರ ಮುಂಜಾನೆ 2 ಗಂಟೆಯವರೆಗೆ ದರ್ಶನ ಮುಂದುವರಿಯಲಿದೆ. ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಬರಲಿದ್ದು, ನಮಗೆ ಸಂತೋಷ. ಮಧ್ಯಾಹ್ನ 1 ಗಂಟೆಗೆ ಬಂದವರು ಹದಿನೈದು ನಿಮಿಷಗಳಲ್ಲಿ ದರ್ಶನ ಪಡೆದಿದ್ದಾರೆ. ₹1ಸಾವಿರ ವಿಶೇಷ ದರ್ಶನವು ಎರಡು-ಮೂರು ನಿಮಿಷಗಳಲ್ಲಿ, ₹300 ದರ್ಶನ ಹತ್ತು ನಿಮಿಷಗಳಲ್ಲಿ ಮುಗಿಯುತ್ತಿದೆ ಎಂದು ಹೇಳಿದರು.

ಹಿಂದಿನ ವರ್ಷಗಳಲ್ಲಿ ಆರು ಗಂಟೆಗೂ ಹೆಚ್ಚು ಕಾಲ ಸಾಲಿನಲ್ಲಿ ನಿಲ್ಲಬೇಕಾಗುತ್ತಿತ್ತು. ಈ ಬಾರಿ ಸರತಿ ಸಾಲು ಸರಾಗವಾಗಿ ಸಾಗುತ್ತಿದೆ. ಸಾಮಾನ್ಯ ಭಕ್ತರಿಗೆ ಉತ್ತಮ ಅನುಭವ ದೊರಕುತ್ತಿದೆ. ಸ್ಥಳೀಯರಿಗೂ ಆರಾಮದಾಯಕ ದರ್ಶನ ಸಿಕ್ಕಿದೆ. ನಾವು ತಂದಿರುವ ಬದಲಾವಣೆಗಳು ಭಕ್ತರಿಗೆ ಅನುಕೂಲವಾಗಿದೆ ಎಂದರು.

ಸೋಮವಾರದಿಂದ ಶುಕ್ರವಾರದವರೆಗೆ ಭಕ್ತರ ಸಂಖ್ಯೆ ಕಡಿಮೆ ಇರಬಹುದು. ಅಕ್ಟೋಬರ್ 18 ರಿಂದ 22ರವರೆಗೆ 2 ಲಕ್ಷಕ್ಕೂ ಹೆಚ್ಚು ಭಕ್ತರ ಬರುವ ನಿರೀಕ್ಷೆ ಇದೆ. ಸಾಧ್ಯವಾದರೆ ಅಕ್ಟೋಬರ್ 18ರ ಒಳಗಾಗಿ ದರ್ಶನ ಪಡೆದು ಹೋಗಲು ಮನವಿ ಮಾಡಿದರು.

ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅಕ್ಟೋಬರ್ 15ರಂದು ದೇವಿ ದರ್ಶನಕ್ಕೆ ಬರಲಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಸಮಯ ನಿಗದಿ ಮಾಡಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಸಿಎಂ ಹಾಗೂ ಡಿಸಿಎಂಗೆ ಅವರಿಗೆ ಸ್ವತಃ ನಾನು ಮನವಿ ಮಾಡುತ್ತೇನೆ ಎಂದರು.

ದೇವಾಲಯದ ಸುತ್ತಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದ ಸಚಿವ ಕೃಷ್ಣ ಬೈರೇಗೌಡ, ಧರ್ಮದರ್ಶನ ಹಾಗೂ ಟಿಕೆಟ್‌ ದರ್ಶನದ ಸಾಲುಗಳನ್ನು ಪರಿಶೀಲಿಸಿದರು. ಭಕ್ತರ ಅನುಭವವನ್ನು ನೇರವಾಗಿ ವಿಚಾರಿಸಿದರು. ಸಚಿವರ ಭೇಟಿಯ ವೇಳೆ ಜಿಲ್ಲಾಡಳಿತದ ಕಾರ್ಯಚಟುವಟಿಕೆ ಹಾಗೂ ದೇವಾಲಯದ ನಿರ್ವಹಣೆಯ ಬಗ್ಗೆ ಭಕ್ತರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.