ADVERTISEMENT

ವೇತನಕ್ಕಾಗಿ ಅಡುಗೆ ಸಹಾಯಕರ ಆಗ್ರಹ

ಸುರಕ್ಷಾ ಸೆಕ್ಯೂರಿಟಿ ಏಜೆನ್ಸಿ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 15:33 IST
Last Updated 29 ಜುಲೈ 2021, 15:33 IST
ಹಾಸನ ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿ ಎದುರು ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಸೇನೆ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು
ಹಾಸನ ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿ ಎದುರು ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಸೇನೆ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು   

ಹಾಸನ: ಹಾಸ್ಟೆಲ್‌ಗಳ ಅಡುಗೆ ಸಹಾಯಕರಿಗೆ ವೇತನ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ನೇತೃತ್ವದಲ್ಲಿ ಗುರುವಾರಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅರಸು ಭವನ ಎದುರು ಪ್ರತಿಭಟನೆ ನಡೆಸಲಾಯಿತು.

ಹಾಸ್ಟೆಲ್‌ಗಳ ನಿರ್ವಹಣೆ ಹೊರಗುತ್ತಿಗೆ ಪಡೆದ ಸುರಕ್ಷಾ ಸೆಕ್ಯೂರಿಟಿ ಏಜೆನ್ಸಿ 70 ಜನ ಅಡುಗೆ ಸಹಾಯಕರಿಗೆ 13 ತಿಂಗಳಿನಿಂದ ವೇತನ ನೀಡಿಲ್ಲ. ಕೋವಿಡ್ ಸಂದರ್ಭದಲ್ಲಿ ಜೀವನ ನಡೆಸಲು ತೊಂದರೆ ಆಗಿದೆ. ಕೂಡಲೇ ವೇತನ ಕೊಡಿಸಲು ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಗೌಡ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣಇಲಾಖೆ ಸುರಕ್ಷಾ ಸೆಕ್ಯೂರಿಟಿ ಏಜೆನ್ಸಿ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಅಡುಗೆಸಹಾಯಕರನ್ನು ನೇಮಿಸಿಕೊಂಡಿದೆ. 13 ತಿಂಗಳಿನಿಂದ ಯಾವುದೇ ವೇತನ ನೀಡಿಲ್ಲ.ಕೋವಿಡ್‌ ನಿಂದಾಗಿ ಜನರು ಹೈರಾಣಾಗಿ ಹೋಗಿದ್ದಾರೆ. ವೇತನವನ್ನೇ ನೀಡದಿದ್ದರೆ ಕುಟುಂಬನಿರ್ವಹಣೆ ಹೇಗೆ ಎಂದು ಪ್ರಶ್ನಿಸಿದರು.

ADVERTISEMENT

ಅಡುಗೆ ಕೆಲಸಗಾರರು ಕಡುಬಡವ ಕುಟುಂಬದವರಾಗಿದ್ದು, ವೇತನ ನಂಬಿಕೊಂಡೇ ಸಾಲ ಮಾಡಿ ಜೀವನ ನಡೆಸುತ್ತಿದ್ದಾರೆ. ಆದರೆ ಮಾಲೀಕರು ಕೆಲಸದಿಂದ ವಜಾಗೊಳಿಸುವ ಬೆದರಿಕೆಹಾಕುತ್ತಿದ್ದಾರೆ. ತಕ್ಷಣವೇ ಕೆಲಸಗಾರರಿಗೆ ಬಾಕಿ ಉಳಿಸಿಕೊಂಡಿರುವ ಸಂಬಳ ಪಾವತಿಸಬೇಕು.ಅಡುಗೆ ಸಹಾಯಕರಿಗೆ ಕಡಿಮೆ ವೇತನ ನೀಡುತ್ತಿರುವ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳಬೇಕು.ಹಾಗೂ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಎಂದು ಒತ್ತಾಯಿಸಿದರು.

‘ಹದಿಮೂರು ತಿಂಗಳ ಸಂಬಳವನ್ನು ಆರ್‌ಟಿಜಿಎಸ್‌ ಮೂಲಕ ಪಾವತಿಸಲಾಗಿದೆ. ಆದರೆಕೋವಿಡ್‌ ಲಾಕ್‌ಡೌನ್ ಸಂದರ್ಭದಲ್ಲಿ ಅಡುಗೆ ಕೆಲಸಗಾರರಿಗೆ ಕೆಲಸ ಇರಲಿಲ್ಲ. ಹಾಗಾಗಿ ಅವರಿಗೆವೇತನ ನೀಡಲು ಆಗುವುದಿಲ್ಲ’ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಹರ್ಷ ತಿಳಿಸಿದರು.

ಪ್ರತಿಭಟನೆಯಲ್ಲಿ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಭಾನುಮತಿ, ಕಾರ್ಯದರ್ಶಿ ರಘು, ಮೋಹನ್‌, ಸುನಿಲ್‌, ರವಿ, ಗೋವಿಂದೇಗೌಡ, ಹರೀಶ್, ಪ್ರಧಾನಕಾರ್ಯದರ್ಶಿ ರಘು ಶಂಖ, ನಗರ ಉಪಾಧ್ಯಕ್ಷ ರೋಹಿತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.