ADVERTISEMENT

ಹಾಸನ: ಹೂಳೆತ್ತದೇ ಅನಾಥವಾಗಿ ನಿಂತಿರುವ ಕೆರೆ

ಪಟ್ಟಣ ಏಕೈಕ ಕೆರೆಯ ಅಭಿವೃದ್ಧಿ ಇಲಾಖೆಗಳ ನಿರ್ಲಕ್ಷ್ಯ: ಸಾರ್ವಜನಿಕರ ಆತಂಕ

​ಪ್ರಜಾವಾಣಿ ವಾರ್ತೆ
Published 9 ಮೇ 2025, 8:33 IST
Last Updated 9 ಮೇ 2025, 8:33 IST
ಆಲೂರಿನ ನಾಲ್ಕನೇ ವಾರ್ಡ್‌ನಲ್ಲಿ ಹೂಳು ತುಂಬಿರುವ ಕೆರೆ ಅಪಾಯದ ಅಂಚಿನಲ್ಲಿದೆ.
ಆಲೂರಿನ ನಾಲ್ಕನೇ ವಾರ್ಡ್‌ನಲ್ಲಿ ಹೂಳು ತುಂಬಿರುವ ಕೆರೆ ಅಪಾಯದ ಅಂಚಿನಲ್ಲಿದೆ.   

ಆಲೂರು: ಪಟ್ಟಣ ಪಂಚಾಯಿತಿ ನಾಲ್ಕನೇ ವಾರ್ಡ್‌ನಲ್ಲಿ ಉಳಿದಿರುವ ಏಕೈಕ ಕೆರೆಗೆ ವಾರಸುದಾರರು ಇಲ್ಲವೇ ಎಂಬ ಪ್ರಶ್ನೆ ಉದ್ಭವವಾಗಿದೆ. ಇತಿಹಾಸದಲ್ಲಿಯೇ ಈ ಕೆರೆಯ ಹೂಳು ಎತ್ತದಿರುವುದರಿಂದ ಜನ, ಜಾನುವಾರುಗಳ ಬಲಿಗಾಗಿ ಬಾಯಿ ತೆರೆದು ನಿಂತಿದೆ ಎಂದು ಜನರು ದೂರುತ್ತಿದ್ದಾರೆ.

ಈ ಜಾಗ ಪಟ್ಟಣ ಪಂಚಾಯಿತಿಗೆ ಜಾಗ ಸೇರಿದ್ದರೂ, ಕೆರೆ ಅಭಿವೃದ್ಧಿ ಬಗ್ಗೆ ನಮಗೆ ಬರುವುದಿಲ್ಲ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹೇಳುತ್ತಿದ್ದಾರೆ. ಇನ್ನೊಂದೆಡೆ ನಮ್ಮ ವ್ಯಾಪ್ತಿಗೆ ಸೇರಿಲ್ಲ ಎನ್ನುತ್ತಿದ್ದಾರೆ. ಜಿಲ್ಲಾ ಪಂಚಾಯಿತಿಯಿಂದ ಅನುದಾನ ಕೊಟ್ಟರೆ, ನಾವು ಅಭಿವೃದ್ಧಿ ಪಡಿಸುತ್ತೇವೆ ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆಯವರು. ಹಾಗಾದರೆ ಅನುದಾನ ಬಿಡುಗಡೆ ಮಾಡುವುದು ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ.

ಪಟ್ಟಣ ವ್ಯಾಪ್ತಿಗೆ ಒಳಪಡುವ ಶೇ 50 ರಷ್ಟು ಭಾಗದ ತ್ಯಾಜ್ಯ ನೀರು ಹರಿದು ಬಂದು ಈ ಕೆರೆಗೆ ಸೇರುತ್ತದೆ. ಈವರೆಗೂ ಹೂಳನ್ನು ಹೊರ ತೆಗೆಯದಿರುವುದರಿಂದ ಏರಿ ತುದಿವರೆಗೂ ಗಿಡ ಗಂಟೆಗಳು ಬೆಳೆದು ನಿಂತಿವೆ. ಭಾರಿ ಮಳೆಯಾದರೆ ನೀರು ತುಂಬಿ ಏರಿ ಒಡೆಯುವ ಸಾಧ್ಯತೆ ಇದೆ. ಜಾನುವಾರುಗಳು ಆಹಾರಕ್ಕಾಗಿ ಕೆರೆಗೆ ಇಳಿದರೆ ಮೇಲೆದ್ದು ಬರಲು ಸಾಧ್ಯವಾಗದೇ ಪ್ರಾಣ ಹಾನಿಯಾಗುವ ಸಂಭವವಿದೆ ಎಂದು ಸ್ಥಳೀಯರು ಹೇಳುತ್ತಾರೆ.

ADVERTISEMENT

ಕೆರೆ ಏರಿ ಸಂಪರ್ಕ ರಸ್ತೆ ಆಗಿರುವುದರಿಂದ ನಿತ್ಯ ನೂರಾರು ವಾಹನಗಳು, ಜನಸಾಮಾನ್ಯರು ತಿರುಗಾಡುತ್ತಾರೆ. ಕೆರೆ ಅಕ್ಕಪಕ್ಕದಲ್ಲಿ ನಿವೇಶನಗಳಿವೆ. ಮಳೆಯಾದರೆ ಕೋಡಿಯೂ ಇಲ್ಲದ ಈ ಕೆರೆಗಳಲ್ಲಿ ಏರಿ ಮೇಲೆ ನೀರು ಹರಿದು ಸಮಸ್ಯೆ ಎದುರಾಗಲಿದೆ. ಕೆರೆಗಳ ಹೂಳು ತೆಗೆದು ನೀರು ಸಂಗ್ರಹವಾಗಲು ಅವಕಾಶ ಕಲ್ಪಿಸಬೇಕೆಂದು ಹೈಕೋರ್ಟ್‌ ಆದೇಶವಿದ್ದರೂ ಸಂಬಂಧಿಸಿದ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎನ್ನುವುದು ದೂರು ಸುತ್ತಲಿನ ನಿವಾಸಿಗಳದ್ದು.

ಕೆರೆಗೆ ನೀರು ಹರಿಯುವ ಕಾಲುವೆಯನ್ನು ಶುಚಿಗೊಳಿಸಿ, ಚರಂಡಿಗಳಲ್ಲಿ ಸಂಗ್ರಹವಾಗುತ್ತಿರುವ ಕೊಳಚೆ ನೀರು ಸರಾಗವಾಗಿ ಕೆರೆಗೆ ಹರಿಯುವಂತೆ ಕ್ರಮ ಕೈಗೊಳ್ಳಬೇಕು. ಕೆರೆ ಸುತ್ತ ವಾಸದ ಮನೆಗಳು ನಿರ್ಮಾಣ ಆಗುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಭಾರಿ ಮಳೆಯಾದ ಸಂದರ್ಭದಲ್ಲಿ ಅನೇಕ ಅವಘಡಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ಆತಂಕ ಜನರದ್ದಾಗಿದೆ. 

ಶೀಘ್ರದಲ್ಲಿ ಸ್ಥಳ ಪರಿಶೀಲನೆ ಮಾಡಿ ಹೂಳೆತ್ತುವ ಕಾಮಗಾರಿಗೆ ಕ್ರಮ ಕೈಗೊಳ್ಳುತ್ತೇನೆ. ಏರಿ ಸಂಪರ್ಕ ರಸ್ತೆಯಾಗಿದ್ದು ಹೂಳೆತ್ತುವ ಕಾರ್ಯ ಕೂಡಲೇ ಆಗಬೇಕು. ಕೆರೆ ಮುಚ್ಚುವುದು ತರವಲ್ಲ. ಅನುದಾನ ಕ್ರೋಡೀಕರಣಕ್ಕೆ ಕ್ರಮ ಕೈಗೊಳ್ಳುತ್ತೇನೆ.
-ಸಿಮೆಂಟ್ ಮಂಜು, ಶಾಸಕ
ಕೆರೆಗಳನ್ನು ಅಭಿವೃದ್ಧಿ ಪಡಿಸುವುದು ಏಕೈಕ ಗುರಿ. ಕೆರೆ ಹೂಳೆತ್ತಿ ಅಭಿವೃದ್ಧಿ ಮಾಡಲು ಅನುದಾನ ಕ್ರೋಡೀಕರಿಸಿ ಸಂಬಂಧಿಸಿದ ಇಲಾಖೆಯೊಡನೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
-ಮಂಜುನಾಥ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಭಾರಿ ಮಳೆಯಾದರೆ ಕೆರೆ ನೀರು ತುಂಬಿ ಏರಿ ಮೇಲೆ ಹರಿಯುವ ಸಾಧ್ಯತೆ ಇದೆ. ಏರಿ ಮೇಲೆ ಜನ ಜಾನುವಾರು ವಾಹನಗಳು ಓಡಾಡುತ್ತವೆ. ಅವಗಢ ಸಂಭವಿಸಿದರೆ ನಷ್ಟ ತುಂಬಿಕೊಡುವವರು ಯಾರು? ಕೂಡಲೇ ಹೂಳೆತ್ತಬೇಕು.
-ಗೀತಾ, ಆಲೂರು ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.