ADVERTISEMENT

ಬೆಳವಾಡಿ: ಶತಮಾನದ ಶಾಲೆಯಲ್ಲಿ ರಂಗ ಚಟುವಟಿಕೆ

ಮಾದರಿ ಶಾಲೆಯನ್ನಾಗಿಸಲು ಹಿರಿಯ ವಿದ್ಯಾರ್ಥಿಗಳು, ಗ್ರಾಮಸ್ಥರ ಸಂಕಲ್ಪ: ನಾಳೆಯಿಂದ ರಂಗ ತರಗತಿ

ಜಿ.ಚಂದ್ರಶೇಖರ್‌
Published 13 ಜೂನ್ 2022, 3:25 IST
Last Updated 13 ಜೂನ್ 2022, 3:25 IST
ಅರಕಲಗೂಡು ತಾಲ್ಲೂಕಿನ ಬೆಳವಾಡಿ ಗ್ರಾಮದ ಶತಮಾನೋತ್ಸವ ಶಾಲಾ ಕಟ್ಟಡ
ಅರಕಲಗೂಡು ತಾಲ್ಲೂಕಿನ ಬೆಳವಾಡಿ ಗ್ರಾಮದ ಶತಮಾನೋತ್ಸವ ಶಾಲಾ ಕಟ್ಟಡ   

ಅರಕಲಗೂಡು: ತಾಲ್ಲೂಕಿನ ಬೆಳವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂನ್ 14ರಿಂದ ರಂಗ ತರಗತಿಗಳು ಆರಂಭಗೊಳ್ಳುತ್ತಿದ್ದು, ಶಾಲೆಯ ಆವರಣದಲ್ಲಿ ಇನ್ನು ಮುಂದೆ ರಂಗ ಗೀತೆ, ಸಂಭಾಷಣೆಗಳು ಅನುರಣಿಸಲಿದೆ.

ಈ ಶಾಲೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಒಗ್ಗೂಡಿ, ಮೈಸೂರಿನ ನಟನ ರಂಗಶಾಲೆ ಸಹಯೋಗದಲ್ಲಿ ರಂಗ ತರಗತಿಗಳನ್ನು ತೆರೆಯುತ್ತಿದ್ದಾರೆ. ರಂಗ ಕಲೆಯ ಕುರಿತು ಮಕ್ಕಳಿಗೆ ಅರಿವು ಮೂಡಿಸಿ, ಅವರಲ್ಲಿನ ಕಲಾ ಪ್ರತಿಭೆಯನ್ನು ಹೊರತರುವ ಪ್ರಯತ್ನ ನಡೆಯಲಿದ್ದು, ತಾಲ್ಲೂಕಿನಲ್ಲಿ ಇದೊಂದು ಹೊಸ ಪ್ರಯೋಗ ಎನಿಸಿದೆ.

ರಂಗಕರ್ಮಿ ಮಂಡ್ಯ ರಮೇಶ್ ರಂಗ ತರಗತಿಗಳಿಗೆ ಚಾಲನೆ ನೀಡುವರು. ನಟನ ರಂಗ ಶಾಲೆಯ ದಿಶಾ ರಮೇಶ್, ತರಗತಿಗಳ ಸಾರಥ್ಯ ವಹಿಸುತ್ತಿದ್ದು, ನಟ, ನಿರ್ದೇಶಕ ಹಾಗೂ ಚಿತ್ರ ಸಾಹಿತಿ ಬಿ.ಸುರೇಶ್ ಆರ್ಥಿಕ ಸಹಕಾರ ನೀಡುತ್ತಿದ್ದಾರೆ.

ADVERTISEMENT

ಸ್ವಾತಂತ್ರ್ಯ ಪೂರ್ವದ (ಸ್ಥಾಪನೆ 1917) ಈ ಸರ್ಕಾರಿ ಶಾಲೆ 105 ವರ್ಷಗಳ ಇತಿಹಾಸ ಹೊಂದಿದೆ. ಗ್ರಾಮದಲ್ಲಿ ಖಾಸಗಿ ಶಾಲಾ ವಾಹನಗಳ ಸದ್ದು ಹೆಚ್ಚಾದಂತೆ ಎಲ್ಲ ಸರ್ಕಾರಿ ಶಾಲೆಗಳಂತೆ ಇಲ್ಲೂ ಮಕ್ಕಳ ಕೊರತೆ ಕಾಡಲಾರಂಭಿಸಿತ್ತು. ಶಾಲೆಯನ್ನು ಉಳಿಸಬೇಕು ಎಂದು ಗ್ರಾಮಸ್ಥರು, ಶಾಲೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ಶಾಲಾಭಿವೃದ್ಧಿ ಸಮಿತಿ ಕಾಳಜಿ ವಹಿಸಿ ಶಾಲೆಯಲ್ಲಿ 2021ರ ನವೆಂಬರ್‌ನಲ್ಲಿ ಮಕ್ಕಳ ಮನೆ ತರೆದು, ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಪ್ರಾರಂಭಿಸಲಾಯಿತು.

ಶಿಕ್ಷಣ ಇಲಾಖೆ ಎರಡು ಕೊಠಡಿಗಳನ್ನು ಕೊಡುಗೆಯಾಗಿ ನೀಡಿತು. ಮೊದಲ ವರ್ಷ 43 ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡು, ಇಬ್ಬರು ಶಿಕ್ಷಕಿಯರನ್ನು ನೇಮಿಸಿ ಅವರಿಗೆ ಮೈಸೂರಿನ ಅರಿವು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸಂಸ್ಥೆಯಲ್ಲಿ ಎರಡು ದಿನದ ಕ್ರಿಯಾಶೀಲ ತರಬೇತಿ ಕೊಡಿಸಲಾಗಿದೆ. ಹಿರಿಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಇವರ ವೇತನವನ್ನು ಭರಿಸುತ್ತಿದ್ದಾರೆ. ಮಕ್ಕಳಿಗೆ ಸುತ್ತಮುತ್ತಲ ಪರಿಸರದಲ್ಲಿ ದೊರೆಯುವ ವಸ್ತುಗಳ ಮೂಲಕ ಕನ್ನಡ, ಇಂಗ್ಲಿಷ್‌, ಗಣಿತ, ವಿಜ್ಞಾನ ಪರಿಚಯಿಸುತ್ತಿದ್ದು, ಇದು ಮಕ್ಕಳ ಕಲಿಕೆಯ ಮೇಲೆ ವಿಶೇಷ ಪರಿಣಾಮ ಬೀರಲಿದೆ.

ಶಾಲೆಯಲ್ಲಿ ಗ್ರಂಥಾಲಯ, ಕಂಪ್ಯೂಟರ್ ತರಗತಿ, ವಿಜ್ಞಾನ ಪ್ರಯೋಗಾಲಯ, ಕ್ರೀಡಾ ಚಟುವಟಿಕೆ, ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳಿಗೆ ನೆರವಾಗಲು ಅನಕೃ ಶತಮಾನೋತ್ಸವ ಭವನ ನಿರ್ಮಾಣ ಹೀಗೆ ಹತ್ತು ಹಲವು ಯೋಜನೆಗಳ ಮೂಲಕ ರಾಜ್ಯದಲ್ಲೇ ಇದನ್ನೊಂದು ಮಾದರಿ ಶಾಲೆಯಾಗಿ ರೂಪಿಸುವ ಹಂಬಲ ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳದ್ದಾಗಿದೆ. ಇದಕ್ಕಾಗಿ ನಿರಂತರ ಪ್ರಯತ್ನಗಳು ನಡೆದಿದೆ. ಈ ಹಿನ್ನೆಲೆಯಲ್ಲಿ ರಂಗ ತರಗತಿಗಳನ್ನು ತೆರೆಯಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.