
ಕೊಣನೂರು: ಕೆಲ ದಿನಗಳಿಂದ ಸ್ಥಗಿತಗೊಂಡಿದ್ದ ತಾಲ್ಲೂಕಿನ ಮುಖ್ಯ ವಾಣಿಜ್ಯ ಬೆಳೆ ತಂಬಾಕು ಹರಾಜು ಮಾರುಕಟ್ಟೆಯು ಗುರುವಾರದಿಂದ ಮತ್ತೆ ಆರಂಭವಾಗಲಿದೆ.
ರಾಮನಾಥಪುರದಲ್ಲಿರುವ ತಂಬಾಕು ಮಂಡಳಿಯ ಹರಾಜು ಮಾರುಕಟ್ಟೆಯಲ್ಲಿ ಹೊಗೆಸೊಪ್ಪು ಖರೀದಿ ಪ್ರಕ್ರಿಯೆಯನ್ನು ಜ.23 ರಿಂದ ನಿಲ್ಲಿಸಿದ್ದರಿಂದ ಬೆಳೆಗಾರರು ಆತಂಕಗೊಂಡಿದ್ದರು. ಫೆ. 5ರಿಂದ ಮತ್ತೆ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಲು ಅನುಮತಿ ದೊರೆತಿದೆ.
ಬೆಲೆ ಏರಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಬೆಳೆಗಾರರು ಸೊಪ್ಪನ್ನು ದಾಸ್ತಾನು ಇರಿಸಿದ್ದು , ಶೇ 50 ರಷ್ಟು ತಂಬಾಕು ಮಾರಾಟವಾಗದೆ ಉಳಿದಿದ್ದು, ತಂಬಾಕಿನ ಮೇಲೆ ವಿಧಿಸಿದ್ದ ಹೆಚ್ಚಿನ ಜಿಎಸ್‌ಟಿ ಖರೀದಿ ಪ್ರಕ್ರಿಯೆ ಸ್ಥಗಿತವಾಗಿತ್ತು. ಈ ಕುರಿತಂತೆ ತಂಬಾಕು ಬೆಳೆಗಾರರ ಸಂಘವು ಸಭೆ ನಡೆಸಿದ್ದು, ಶಾಸಕ ಎ. ಮಂಜು ಐಟಿಸಿ ಕಂಪೆನಿಯ ಲೀಫ್ ಮ್ಯಾನೇಜರ್ ಶ್ರೀನಿವಾಸ್ ರೆಡ್ಡಿ ಜತೆ ಸಭೆ ನಡೆಸಿ, ‘ತಂಬಾಕಿಗೆ ಉತ್ತಮ ಬೆಲೆ ನೀಡುವುದರೊಂದಿಗೆ ಬೆಳೆಗಾರರ ಸಂಕಷ್ಟಕ್ಕೆ ನೆರವಾಗಬೇಕು’ ಎಂದಿದ್ದರು.
2025 ನೇ ಸಾಲಿನಲ್ಲಿ ಅ.8 ರಿಂದ ಜ.23 ರ ವರೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಫ್ಲಾಟ್ ಫಾರಂ 7 ರಲ್ಲಿ 3.8ದಶಲಕ್ಷ ಕೆ.ಜಿ ತಂಬಾಕು ಮಾರಾಟವಾಗಿದ್ದು, ಫ್ಲಾಟ್ ಫಾರಂ 63 ರಲ್ಲಿ 3.2 ದಶಲಕ್ಷ ಕೆ.ಜಿ ಮಾರಾಟವಾಗಿದೆ. ಗರಿಷ್ಠ ಬೆಲೆ ಪ್ರತಿ ಕೆಜಿ ಗೆ ₹320 ಮತ್ತು ಕನಿಷ್ಠ ಬೆಲೆ ಪ್ರತಿ ಕೆಜಿ ಗೆ ₹220 ದೊರೆತಿದೆ. ಮಂಡಳಿಯ ಆದೇಶದಂತೆಗುರುವಾರ ಮಾರುಕಟ್ಟೆಯನ್ನು ಪುನರಾರಂಭಿಸುತ್ತಿದ್ದು ಬೆಳೆಗಾರರಿಗೆ ಮಾಹಿತಿ ನೀಡಿದ್ದೇವೆ ಎಂದು ತಂಬಾಕು ಮಂಡಳಿ ರಾಮನಾಥಪುರ ಮಾರುಕಟ್ಟೆ ಅಧೀಕ್ಷಕಿ ಸವಿತಾ ತಿಳಿಸಿದರು.
ಹರಾಜು ಪ್ರಕ್ರಿಯೆ ನಿಲ್ಲಿಸಿದ್ದು ಬೆಳೆಗಾರರಲ್ಲಿ ಅನುಮಾನ ಮೂಡಿಸಿತ್ತು. ಬಿಸಿಲಿನ ಬೇಗೆಯಲ್ಲಿ ಹೊಗೆಸೊಪ್ಪಿನ ಗುಣಮಟ್ಟ ಕಾಪಾಡಿಕೊಳ್ಳುವುದು ಬೇಲ್ ಮಾಡುವುದು ಕಷ್ಟದ ಕೆಲಸವಾಗಿತ್ತು.ಸೀಬಳ್ಳಿ ಯೋಗಣ್ಣ ರೈತ ಸಂಘ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.