
ಕೊಣನೂರು: ದಕ್ಷಿಣ ಕಾಶೀ ಎಂದೆ ಪ್ರಸಿದ್ಧಿ ಪಡೆದಿರುವ ರಾಮನಾಥಪುರದ ಕಾವೇರಿ ನದಿ ದಡದಲ್ಲಿರುವ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಮಹಾರಥೋತ್ಸವ ನ.26ರಂದು ನಡೆಯಲಿದ್ದು, ದೇವಾಲಯ ಆಡಳಿತ ಮಂಡಳಿ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಸಿದ್ಧತೆ ಮಾಡಿಕೊಂಡಿದೆ.
ದೇವಾಲಯಕ್ಕೆ ಬಣ್ಣ ಬಳಿಯಲಾಗಿದ್ದು, ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಈಗಾಗಲೇ ಹಗಲು ರಾತ್ರಿ ವಿವಿಧ ಪೂಜೆಗಳು ಜರುಗುತ್ತಿವೆ. ಗ್ರಾಮ ಪಂಚಾಯಿತಿ ವತಿಯಿಂದ ಇಡೀ ಪಟ್ಟಣಕ್ಕೆ ದೀಪಾಲಂಕಾರ ಮಾಡಲಾಗಿದೆ. ಕುಡಿಯುವ ನೀರು ಸೇರಿದಂತೆ ಇತರೆ ಮೂಲಸೌಕರ್ಯ ವ್ಯವಸ್ಥೆ ಮಾಡಲಾಗಿದೆ.
ಒಂದು ತಿಂಗಳ ಕಾಲ ನಡೆಯುವ ಸುಬ್ರಹ್ಮಣ್ಯಸ್ವಾಮಿ ರಥೋತ್ಸವ ಅಂಗವಾಗಿ ಜಿಲ್ಲೆ ಸೇರಿದಂತೆ ದೂರದ ಊರುಗಳಿಂದ ಸಾವಿರಾರು ಭಕ್ತರು ಬಂದು ಹೋಗುತ್ತಾರೆ. ದೇವಾಲಯ ಪಕ್ಕದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ನೀರಿನ ಹರಿಯುವಿಕೆ ಕಡಿಮೆ ಆಗಿದ್ದು, ಜಾತ್ರೆಗೆ ಬರುವ ಭಕ್ತರು ಪುಣ್ಯ ಸ್ನಾನಕ್ಕೆ ಹೆಚ್ಚಿನ ಸ್ಥಳಾವಕಾಶ ಒದಗಿಸಲು ನದಿಯಲ್ಲಿನ ಹೂಳು ತೆಗೆದು ನೀರು, ಸ್ನಾನ ಘಟ್ಟ ಸ್ವಚ್ಛಗೊಳಿಸಲಾಗಿದೆ.
ಮಲೀನತೆಗೆ ಕಾರಣವಾಗಿದ್ದ ಗಿಡಗಳು, ಕೆಸರು ತೆಗೆದು ನದಿಯಲ್ಲಿನ ಗಾಯತ್ರಿ ಶಿಲೆ, ಗೋಗರ್ಭ, ಕುಮಾರಧಾರಾ ಶಿಲೆಗಳನ್ನು ದರ್ಶನಗಳನ್ನು ಮಾಡುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಾವೇರಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ಮಡಿ ಬಟ್ಟೆ ತೊಡುವ ಸಲುವಾಗಿ ನದಿ ಪಾತ್ರದಲ್ಲಿ ರಕ್ಷಣಾ ಶೆಡ್‌ಗಳನ್ನು ನಿರ್ಮಿಸಲಾಗಿದೆ. ಜನನಿಬಿಡ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
‘ಸುಬ್ರಹ್ಮಣ್ಯಸ್ವಾಮಿ ರಥೋತ್ಸವದ ಹಿನ್ನೆಲೆ ಇಡೀ ರಾಮನಾಥಪುರ ಪಟ್ಟಣವನ್ನು ಸ್ವಚ್ಛಗೊಳಿಸಿ ದೀಪಗಳ ಅಳವಡಿಕೆ, ಕುಡಿಯುವ ನೀರು ಸೇರಿದಂತೆ ಇತರೆ ಅಗತ್ಯ ಸೌಕರ್ಯಗಳನ್ನು ಗ್ರಾಮ ಪಂಚಾಯಿತಿ ಆಡಳಿತ ಕಲ್ಪಿಸಿದೆ. ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪೊಲೀಸ್ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಕಾವೇರಿ ನದಿಯಲ್ಲಿನ ಹೂಳು ತೆಗೆದು ಸ್ವಚ್ಛತೆ ಕೈಗೊಳ್ಳಲಾಗಿದೆ’ ಎಂದು ಪಿಡಿಒ ಕುಮಾರಸ್ವಾಮಿ ತಿಳಿಸಿದರು.
‘ಸುಬ್ರಹ್ಮಣ್ಯ ಸ್ವಾಮಿಯ ಪುಣ್ಯಕ್ಷೇತ್ರಗಳಲ್ಲಿ ಒಂದು ತಿಂಗಳ ಕಾಲ ರಥೋತ್ಸವ, ವಿವಿಧ ಪೂಜಾ ಕಾರ್ಯಗಳು ನಡೆಯುವುದು. ಅಪಾರ ಸಂಖ್ಯೆಯಲ್ಲಿ ಭಕ್ತರು ನಿತ್ಯವೂ ಬರಲಿದ್ದು, ಕಾವೇರಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ದೇವರಿಗೆ ಹರಕೆ, ಪೂಜೆ ಸಲ್ಲಿಸುತ್ತಾರೆ. ನ.26ರಂದು ನಡೆಯುವ ಸ್ವಾಮಿ ಮಹಾರಥೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾವೇರಿ ನದಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಜತೆಗೆ ಸುತ್ತಲಿನ ಪರಿಸರವನ್ನು ಉತ್ತಮವಾಗಿ ಇಟ್ಟುಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಇದನ್ನು ಭಕ್ತರು ಅರ್ಥ ಮಾಡಿಕೊಂಡು ನಡೆದುಕೊಳ್ಳಬೇಕು’ ಎಂದು ಸುಬ್ರಮಣ್ಯ ಸ್ವಾಮಿ ದೇವಾಲಯದ ಪಾರುಪತ್ತೇಗಾರ್ ಮೇಶ್ ಭಟ್ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.